ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಹೆಚ್ಚಳ: ನಿತ್ಯವೂ ಮೂರಂಕಿಯ ಪ್ರಕರಣ ದೃಢ, 10 ದಿನಗಳಲ್ಲಿ ದುಪ್ಪಟ್ಟು

Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆಯ ಅಂಕಿ–ಅಂಶಗಳ ಪ್ರಕಾರವೇ, ಈ ತಿಂಗಳ ಅರಂಭದಲ್ಲಿ 251 ಇದ್ದ ಸಕ್ರಿಯ ಪ್ರಕರಣ ಏ.18ರ ವೇಳೆಗೆ 924ಕ್ಕೆ ತಲುಪಿದೆ. ಸಾವಿರದ ಗಡಿಗೆ ಬಂದಿದೆ. 10 ದಿನಗಳಲ್ಲಿ ಸಕ್ರಿಯ ಪ್ರಕರಣಗಳು ದುಪ್ಪಟ್ಟಾಗಿವೆ. 9 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಕೆಲವು ದಿನಗಳಿಂದ ನಿತ್ಯವೂ ಮೂರಂಕಿಯ ಕೋವಿಡ್–19 ಪ್ರಕರಣಗಳು ವರದಿಯಾಗುತ್ತಿವೆ. ಆಸ್ಪತ್ರೆಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್ ವಾರ್ಡ್‌ನ ಹಾಸಿಗೆಗಳು ಭರ್ತಿಯಾಗಿವೆ. ಗುಣಮುಖವಾಗಿ ಬಿಡುಗಡೆ ಆಗುತ್ತಿರುವವರಿಗಿಂತ ಸೋಂಕು ದೃಢಪಟ್ಟು ಆಸ್ಪತ್ರೆಗೆ ಸೇರುವವರ ಪ್ರಮಾಣವೇ ಹೆಚ್ಚಾಗಿರುವುದು ಅಂಕಿ–ಅಂಶಗಳಿಂದ ಕಂಡುಬರುತ್ತಿದೆ. ಕೋವಿಡ್ 2ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವುದನ್ನು ಕೂಡ ಈ ಅಂಕಿ–ಅಂಶಗಳು ತೋರಿಸುತ್ತಿವೆ.

ಚಿಕಿತ್ಸೆ: ಜಿಲ್ಲಾಸ್ಪತ್ರೆಯೊಂದಿಗೆ ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 200 ಹಾಸಿಗೆಗಳನ್ನು ಮಾತ್ರವೇ ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಉಳ್ಳವರು, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮಣವಿಲ್ಲದಿದ್ದರೂ ಕೋವಿಡ್–19 ದೃಢಪಟ್ಟವರು ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಆರೈಕೆ ಪಡೆಯುವುದಕ್ಕೆ ಮಾರ್ಗಸೂಚಿ ಪ್ರಕಾರ ಅವಕಾಶ ಕಲ್ಪಿಸಲಾಗಿದೆ. ಕೆಲವು ರಾಜಕಾರಣಿಗಳು ಮನೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ.

ಹೋದ ವರ್ಷ ಕಾಣಿಸಿಕೊಂಡಿದ್ದ ಕೋವಿಡ್ ಮೊದಲ ಅಲೆಯಿಂದ ಏ.18ರವರೆಗೆ ಒಟ್ಟು 28,819 ಮಂದಿಗೆ ಕೋವಿಡ್ ತಗುಲಿದೆ. ಅವರಲ್ಲಿ 27,541 ಗುಣಮುಖವಾಗಿ ಬಿಡುಗಡೆ ಆಗಿದ್ದಾರೆ. 354 ಮಂದಿ ಸಾವಿಗೀಡಾಗಿದ್ದಾರೆ.

ನಿರ್ಲಕ್ಷ್ಯ ವಹಿಸಿದ ಪರಿಣಾಮ: ಇತ್ತೀಚಿನ ದಿನಗಳಲ್ಲಿ, ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಆಯೋಜಿಸಿದ್ದ ರ‍್ಯಾಲಿ, ಸಮಾವೇಶ ಮೊದಲಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಅಂತರವನ್ನೂ ಮರೆತು ಮತ್ತು ಮಾಸ್ಕ್‌ ಕೂಡ ಧರಿಸದೆ ಪಾಲ್ಗೊಂಡಿದ್ದರು. ಇದರಿಂದಲೂ ಕೋವಿಡ್ ವ್ಯಾಪಕವಾಗಿ ಹರಡುವುದಕ್ಕೆ ಕಾರಣವಾಯಿತು.

ನೆರೆಯ ಮಹಾರಾಷ್ಟ್ರದಲ್ಲಿ ನಿತ್ಯವೂ ಕೋವಿಡ್–19 ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿ ಆಗುತ್ತಿದ್ದರೂ ರಾಜ್ಯದ ಗಡಿಯಲ್ಲಿ ಎಚ್ಚರಿಕೆ ವಹಿಸುತ್ತಿಲ್ಲ. ಅಲ್ಲಿ ಕೆಲವೇ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಅವರು ಕಾಟಾಚಾರಕ್ಕೆ ಎನ್ನುವಂತೆ ತಪಾಸಣೆ ನಡೆಸುತ್ತಿದ್ದಾರೆ. ಹಲವು ಗಡಿಗಳಲ್ಲಿ ತಪಾಸಣೆಗೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವುದಕ್ಕೆ ಆದ್ಯತೆ ನೀಡುತ್ತಿಲ್ಲ. ಜಾತ್ರೆಗಳು ಮೊದಲಾದ ಜನರು ‘ಗುಂಪು’ ಸೇರುವ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ನಿಷೇಧದ ನಡುವೆಯೂ ಅಲ್ಲಲ್ಲಿ ಧರಣಿಗಳು ಪ್ರತಿಭಟನೆಗಳು ನಡೆಡಿವೆ; ನಡೆಯುತ್ತಲೇ ಇವೆ. ಇವೆಲ್ಲದರ ಪರಿಣಾಮ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನಲಾಗುತ್ತಿದೆ.

‘ಸ್ವಯಂಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಳ್ಳಿ’
‘ಬೇರೆ ಕಡೆಯಿಂದ ಬಂದು ವಾರಕ್ಕಿಂತ ಹೆಚ್ಚು ಕಾಲ ಇಲ್ಲಿಯೇ ವಾಸಿಸುವ ನಾಗರಿಕರು ಅಥವಾ ಕುಟುಂಬದವರು ಸ್ವಯಂಪ್ರೇರಣೆಯಿಂದ ಸಮೀಪದ ತಾಲ್ಲೂಕು ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

‘ಕೋವಿಡ್ ಸೋಂಕು ಕೆಲವೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಕುಟುಂಬ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಸ್ವಯಂಪ್ರೇರಣೆಯಿಂದ ತಪಾಸಣೆ ಮಾಡಿಕೊಳ್ಳಬೇಕು. ಒಂದು ವೇಳೆ ಸೋಂಕು ಕಂಡುಬಂದರೆ ಸಕಾಲಕ್ಕೆ ಚಿಕಿತ್ಸೆ
ಪಡೆಯಲು, ಕುಟುಂಬ ಹಾಗೂ ಇತರರಿಗೆ ಹರಡದಂತೆ ತಡೆಯಬಹುದಾಗಿದೆ. ತಪಾಸಣೆಗಾಗಿ ಆರೋಗ್ಯ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಾರ್ಗಸೂಚಿ ಪ್ರಕಾರ ತಪಾಸಣೆ ನಡೆಸಿ ತಕ್ಷಣವೇ ವರದಿ ನೀಡಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.

***
ಕೋವಿಡ್ ಲಸಿಕಾ ಅಭಿಯಾನ ಮುಂದುವರಿದಿದೆ. ಲಸಿಕೆ ಪಡೆದವರು ಕೂಡ ನಿರ್ಲಕ್ಷ್ಯ ವಹಿಸಬಾರದು. ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಬೇಕು.
-ಡಾ.ಕೆ. ಹರೀಶ್‌ಕುಮಾರ್, ಜಿಲ್ಲಾಧಿಕಾರಿ

***
ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿರಿಸಲಾಗಿದೆ. ಇತರ ರೋಗಿಗಳಿಗೂ ಚಿಕಿತ್ಸೆ ಒದಗಿಸಲಾಗುತ್ತಿದೆ. ಮೆಡಿಕಲ್ ಆಕ್ಸಿಜನ್ ಕೊರತೆ ಇಲ್ಲ.
-ಡಾ.ವಿನಯ ದಾಸ್ತಿಕೊ‍ಪ್ಪ, ನಿರ್ದೇಶಕ, ಬಿಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT