ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಖಾನೆಯಿಂದ ಬೆಳೆ ನಷ್ಟ: ಅಧಿಕಾರಿಗಳ ಪರಿಶೀಲನೆ

ರಾಯಬಾಗ ತಾಲ್ಲೂಕಿನ ಮರಾಕುಡಿ, ಕಪ್ಪಲಗುದ್ದಿ ಗ್ರಾಮಗಳಿಗೆ ಭೇಟಿ
Published 14 ಫೆಬ್ರುವರಿ 2024, 3:21 IST
Last Updated 14 ಫೆಬ್ರುವರಿ 2024, 3:21 IST
ಅಕ್ಷರ ಗಾತ್ರ

ಹಂದಿಗುಂದ: ‘ಗೋದಾವರಿ ಬಯೊರಿಫೈನರಿಸ್ ಸಕ್ಕರೆ ಕಾರ್ಖಾನೆಯಿಂದ ಹೊರಮ್ಮುವ ಬೂದಿ ಹಾಗೂ ಕಲುಷಿತ ನೀರಿನಿಂದ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಲ್ಲಿ ಬೆಳೆಗಳು ಹಾಳಾಗುತ್ತಿವೆ’ ಎಂದು ರೈತರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ದೂರು ಆಧರಿಸಿ ಮಂಗಳವಾರ, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ರಾಯಬಾಗ ತಾಲ್ಲೂಕಿನ ಮರಾಕುಡಿ ಹಾಗೂ ಕಪ್ಪಲಗುದ್ದಿ ಗ್ರಾಮಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ರೈತರು ಬೆಳೆದ ಬೆಳೆಗಳ ಮೇಲೆ ಬಿದ್ದಿರುವ ಕಾರ್ಖಾನೆಯ ಬೂದಿ ಹಾಗೂ ನೀರಿನ ಪರಿಶೀಲನೆ ನಡೆಸಿದರು.

ಈ ವೇಳೆ ರೈತರ ಸಂಘ ಸಂಚಾಲಕ ಶ್ರೀಶೈಲ ಅಂಗಡಿ ಮತ್ತು ಹಳ್ಳೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಕತ್ತಿ ಮಾತನಾಡಿ, ‘ಬೆಳೆಗಳು ಹಾನಿಯಾಗುತ್ತಿರುವ ಬಗ್ಗೆ ಬಾಲಕೋಟೆ ಹಾಗೂ ಬೆಳಗಾವಿ ಅಧಿಕಾರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೋಗಿ ದೂರು ನೀಡಿದ್ದಾರೆ’ ಎಂದರು.

‘ಕಾರ್ಖಾನೆಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಸರ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾರ್ಖಾನೆಯ ಮೇಲೆ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಯ 10 ಕಿ.ಮೀ ಸುತ್ತಮುತ್ತಲಿನ ರೈತರು ಬೆಳೆದ ಕಬ್ಬಿನ ಬೆಳೆಗೆ ಈಗ ನೀಡುತ್ತಿರುವ ದರಕ್ಕಿಂತ ಪ್ರತಿ ಟನ್‌ಗೆ ₹500 ಹೆಚ್ಚಿಗೆ ದರ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಚನೆ ನೀಡಬೇಕು’ ಎಂದೂ ಆಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿಯ ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ, ‘ರೈತರು ದೂರು ನೀಡಿದ ಹಿನ್ನೆಲೆ ಬೆಳಗಾವಿ ಮತ್ತು ಬಾಗಲಕೋಟೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ಮಾಡಿದ್ದೇವೆ. ರೈತರು ಬೆಳೆದ ಬೆಳೆಗಳ ಮೇಲೆ ಕಾರ್ಖಾನೆಯ ಬೂದಿ ಬಿದ್ದಿರುವುದು ಕಂಡುಬಂದಿದೆ. ಕುಡಿಯುವ ನೀರು ಸಹ ಕಲುಷಿತವಾಗಿದೆ. ಆದ್ದರಿಂದ ಕೊಳವೆಬಾವಿ ನೀರನ್ನು ಪರೀಕ್ಷೆ ಮಾಡಲು ಸಂಗ್ರಹಿಸಲಾಗಿದೆ. ಆದಷ್ಟು ಶೀಘ್ರ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ಬಾಗಲಕೋಟೆ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ, ಚಿಕ್ಕೋಡಿಯ ಪರಿಸರ ಅಧಿಕಾರಿ ವಿ.ರಮೇಶ, ರಾಯಬಾಗ ತೋಟಗಾರಿಕೆ ಇಲಾಖೆಯ ಅಧಿಕಾರಿ ಅಶೋಕ ಕರೆಪ್ಪಗೋಳ, ಅಮೂಲ ಕಾಂಬಳೆ, ಮರಾಕುಡಿ ಮತ್ತು ಕಪ್ಪಲಗುದ್ದಿಯ ರೈತರು ಉಪಸ್ಥಿತಿರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT