ಬೆಳಗಾವಿ: ಜೂನ್ 1ರಿಂದ ಆಗಸ್ಟ್ 4ರವರೆಗೆ ಬರೋಬ್ಬರಿ ಶೇ 62ರಷ್ಟು ಹೆಚ್ಚುವರಿ ಮಳೆಯಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದ ಜಲಾಶಯಗಳಿಂದ ನಿರಂತರ ನೀರು ಹರಿಸಲಾಗುತ್ತಿದೆ. ಎರಡೂ ಕಾರಣಕ್ಕೆ ಜಿಲ್ಲೆಯ ಒಟ್ಟು 42 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳು ನೀರಿನಲ್ಲಿ ನಿಂತಿವೆ.
ಭಾನುವಾರದವರೆಗೆ ಜಿಲ್ಲೆಯಲ್ಲಿ ಬರಬೇಕಾದ ವಾಡಿಕೆ ಮಳೆ 361 ಮಿ.ಮೀ. ಇದೇ ಅವಧಿಯೊಳಗೆ 585 ಮಿ.ಮೀಗೂ ಅಧಿಕ ಮಳೆ ಬಿದ್ದಿದೆ. ಹೀಗಾಗಿ, ಜಿಲ್ಲೆಯ ಬಹುಭಾಗ ಅತಿವೃಷ್ಟಿಯಿಂದ ತತ್ತರಿಸಿದೆ. ಬೆಳೆಗಳು ಜಲಾವೃತವಾಗಿದ್ದು, ರೈತರು ಆತಂಕ್ಕೆ ಒಳಗಾಗಿದ್ದಾರೆ.
ಕಳೆದ ವರ್ಷ ಬರಗಾಲಕ್ಕೆ ಸಿಕ್ಕು ನರಳಿದ ರೈತಾಪಿ ವರ್ಗ; ಈ ಬಾರಿ ಅತಿವೃಷ್ಟಿಯ ಹೊಡೆತಕ್ಕೆ ಸಿಲುಕಿದೆ.
ಜೂನ್ ಆರಂಭದಲ್ಲೇ ಪೂರ್ವ ಮುಂಗಾರು ರಭಸದಿಂದ ಸುರಿಯಿತು. ಇದರಿಂದ ಖಾನಾಪುರ, ಹುಕ್ಕೇರಿ, ಚಿಕ್ಕೋಡಿ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಗಳು ನಾಶವಾದವು. ಇದರಿಂದ ಟೊಮೆಟೊ, ಉಳ್ಳಾಗಡ್ಡಿ, ಸೋಯಾಬಿನ್ ಸೇರಿದಂತೆ ಎಲ್ಲ ತೋಟಗಾರಿಕೆ ಬೆಳೆಗಳ ಬೆಲೆಯೂ ಗಗನಕ್ಕೇರಿತು. ಇನ್ನೊಂದೆಡೆ, ಜುಲೈ ಆರಂಭದಿಂದಲೂ ಮುಂಗಾರು ಮಳೆ ಬಿರುಸಿನಿಂದ ಬಿದ್ದಿತು. ಆಹಾರ ಧಾನ್ಯ ಬೆಳೆಗಳಾದ ಜೋಳ, ಗೋವಿನ ಜೋಳ ನೀರಿನಲ್ಲಿ ನಿಂತವು. ಎಣ್ಣೆಕಾಳುಗಳಾದ ಸೂರ್ಯಕಾಂತಿ, ಶೇಂಗಾ ಕೂಡ ಅಪಾಯಕ್ಕೆ ಸಿಲುಕಿವೆ.
ಜಿಲ್ಲೆಯ ಜೀವನಾಧಾರ, ವಾಣಿಜ್ಯ ಬೆಳೆಯಾದ ಕಬ್ಬು ಈ ಬಾರಿ ಕೂಡ ಅತ್ಯಂತ ಹೆಚ್ಚು ಅಪಾಯಕ್ಕೆ ಸಿಲುಕಿದೆ. 36,459 ಹೆಕ್ಟೇರ್‌ಗೂ ಅಧಿಕ ಕಬ್ಬು ಇನ್ನೂ ನೀರಿನಲ್ಲಿ ನಿಂತಿದೆ.
ಟೊಮೆಟೊ, ಕೊತ್ತಂಬರಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹೂವು ಸೇರಿದಂತೆ ಒಟ್ಟು 372 ಹೆಕ್ಟೇರ್‌ಗೂ ಅಧಿಕ ತೋಟಗಾರಿಕಾ ಬೆಳೆ ಕೊಳೆಯುವ ಆತಂಕ ಎದುರಾಗಿದೆ.
ಪ್ರವಾಹ ಪೀಡಿತ ಸ್ಥಳಗಳ 6,000ಕ್ಕೂ ಹೆಚ್ಚು ಜನ ಕಾಳಜಿ ಕೇಂದ್ರ ಸೇರಿದ್ದಾರೆ. 32 ಗ್ರಾಮಗಳು ನೀರಿನಿಂದ ಆವೃತವಾಗಿವೆ. ಒಂದೆಡೆ ಊರು ತೊರೆದಿರುವ ಜನ ಇನ್ನೊಂದೆಡೆ ಜೀವನಾಧಾರವಾದ ಹೊಲಗಳತ್ತಲೂ ಚಿಂತೆಗೀಡಾಗಿದ್ದಾರೆ.
ಅತ್ತ ಮನೆಯೂ ಮುಳುಗಡೆಯಾಗಿದೆ, ಇತ್ತ ಎದೆಯೆತ್ತರ ಬೆಳೆದ ಬೆಳೆಯೂ ಮುಳುಗಿದೆ. ರೈತರು ಹರಿಸಿದ ಬೆವರು ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗುವ ದುಗುಡ ಎದುರಾಗಿದೆ.
ಈಗಾಗಲೇ ಸಾವಿರಾರು ಹೆಕ್ಟೇರ್ ಬೆಳೆ ಕೊಳೆತಿದೆ. ಮತ್ತಷ್ಟು ಬೆಳೆಗಳು ಕೀಟಬಾಧೆ, ರೋಗಪೀಡೆಗೆ ಒಳಗಾಗಿವೆ. ಮಳೆ ತುಸು ಬಿಡುವು ಕೊಟ್ಟರೆ ಉಳಿದ ಬೆಳೆಯನ್ನಾದರೂ ಪೋಷಿಸಿಕೊಳ್ಳಲು ಸಾಧ್ಯ. ಇಲ್ಲದೇಹೋದರೆ ಇಡೀ ವರ್ಷ ಹೊಟ್ಟೆಗೆ ತನ್ನೀರು ಬಟ್ಟೆ ಎಂಬ ಸ್ಥಿತಿ ಬರುತ್ತದೆ ಎನ್ನುವುದು ರೈತರ ಮನದಾಳ.
ಯಾವ ಬೆಳೆ ನೀರಿನಿಂದ ಮೇಲೆ ಬೆಳೆದಿದೆಯೋ ಅದಕ್ಕೆ ಆತಂಕವಿಲ್ಲ. ಮಳೆ ಕಡಿಮೆಯಾದ ತಕ್ಷಣ ಬೆಳವಣಿಗೆ ಕಾಣಲಿದೆ. ಕೀಟಬಾಧೆ ಬಾರದಂತೆ ರೈತರ ಎಚ್ಚರ ವಹಿಸಿದರೆ ಸಾಕು
- ಶಿವನಗೌಡ ಪಾಟೀಲ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಕಳೆದ ಬಾರಿ ಕಬ್ಬು ಬೆಳೆ ಬರದಿಂದ ಕಮರಿತು. ಈ ಬಾರಿ ನೀರಿನಲ್ಲಿ ನಿಂತಿದೆ. ನಿರಂತರ ನೀರು ನಿಂತಿದ್ದರಿಂದ ಕೀಟ ಬಾಧೆ ರೋಗ ತಗಲುವ ಆತಂಕ ಹೆಚ್ಚಾಗಿದೆ
- ಮಂಜುನಾಥ ಹಲ್ಯಾಳ ರೈತ ಚಚಡಿ
ಸರ್ವೆ ಅಸಮರ್ಪಕ ಇದೆ. ಸರ್ವೆಗೂ ಹಾನಿಗೂ ತಾಳೆ ಆಗುತ್ತಿಲ್ಲ. ಹಾನಿಯಾಗಿದ್ದಕ್ಕಿಂತ ಅತಿ ಕಡಿಮೆ ಪ್ರದೇಶ ತೋರಿಸುತ್ತಿದ್ದಾರೆ. ಸೂಕ್ತ ಸರ್ವೆ ಮಾಡಿ ಸೂಕ್ತ ಪರಿಹಾರ ಕೊಡಿ ಸಿದಗೌಡ ಮೋದಗಿ
- ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)
ಪಟ್ಟಿ– ಜಲಾವೃತ ಬೆಳೆ (ಹೆಕ್ಟೇರ್)
ಬೆಳೆ;ಪ್ರದೇಶ ಕಬ್ಬು;36459 ಗೋವಿನಜೋಳ;1428 ಸೋಯಾಬಿನ್;1256 ಭತ್ತ;574 ಹೆಸರು;569 ಉದ್ದು;493 ಶೇಂಗಾ;388 ಹತ್ತಿ;253 ಸೂರ್ಯಕಾಂತಿ;240 ಜೋಳ;40 ಒಟ್ಟು;41700
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.