ಶುಕ್ರವಾರ, ಮೇ 20, 2022
23 °C
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ

ಬೇಡಿಕೆ ಈಡೇರಿಕೆಗೆ ದಿನಗೂಲಿ ನೌಕರರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.

‘ಹೊರಗುತ್ತಿಗೆ ನೌಕರರ ನೇಮಕ ಹಾಗೂ ಕೆಲಸದಲ್ಲಿ ಮುಂದುವರಿಸುವ ಬಗ್ಗೆ ಸರ್ಕಾರವು ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಮಂಜೂರಾದ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಇಲಾಖೆ ಮುಖ್ಯ‌ಸ್ಥರಿಗೆ ಮರುಸ್ಥಾಪಿಸಲಾಗಿದೆ ಎಂದು ಒಂದೆಡೆ ಹೇಳಲಾಗಿದೆ. ಇನ್ನೊಂದೆಡೆ, ಮಂಜೂರಾದ ಹುದ್ದೆಗಳಲ್ಲದೆ ಹೊರಗುತ್ತಿಗೆ ಮೇಲೆ ನೇಮಕಗೊಂಡ ಎಲ್ಲ ನೇಮಕಾತಿಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ತಿಳಿಸಲಾಗಿದೆ. ಈ ಆದೇಶ ಅಭಾಸಕ್ಕೆ ಎಡೆ ಮಾಡಿಕೊಟ್ಟಿದೆ. ಮಂಜೂರಿಲ್ಲದ ಹುದ್ದೆಗಳಿಗೆ ನೇಮಕವಾದವರು ಕೆಲಸ ಕಳೆದುಕೊಳ್ಳುವಂತಾಗಿದೆ’ ಎಂದು ದೂರಿದರು.

‘ಅವಶ್ಯವಾದ ಹುದ್ದೆಗಳಿಗೆ ಹೊರಗುತ್ತಿಗೆ ಮೇಲೆ ನೌಕರರನ್ನು ನೇಮಿಸಿಕೊಳ್ಳಲು ಅಥವಾ ಕೆಲಸದಲ್ಲಿ ಮುಂದುವರಿಸಲು ಆಯಾ ಇಲಾಖೆಯ ಮುಖ್ಯಸ್ಥರಿಗೆ ವಿಶೇಷ ಅಧಿಕಾರ ನೀಡಬೇಕು. ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ, ಗುತ್ತಿಗೆ ನೌಕರರಿಗೂ ಅದೇ ಕೆಲಸ ಮಾಡುವ ಕಾಯಂ ನೌಕರರಿಗೆ ಅನ್ವಯವಾಗುವ ವೇತನ ಶ್ರೇಣಿಗಳಲ್ಲಿ ಮೂಲವೇತನ ಹಾಗೂ ಭತ್ಯೆಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಇಲಾಖೆಗಳಲ್ಲೂ ಈಗಾಗಲೇ ಕೆಲಸದಿಂದ ತೆಗೆದಿರುವ ಹೊರಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ದಿನಗೂಲಿ ನೌಕರರಿಗೆ ಹೆಚ್ಚುವರಿ ಅರ್ಹತಾ ಸೇವೆಯಲ್ಲಿ ತಾರತಮ್ಯ ನಿವಾರಿಸಬೇಕು. 2004ರ ನಂತರ ನಿವೃತ್ತರಾದವರಿಗೆ 4 ವರ್ಷ, 2012ರ ನಂತರ ನಿವೃತ್ತರಾದವರಿಗೆ 2 ವರ್ಷ ಗರಿಷ್ಠ ಹೆಚ್ಚುವರಿ ಅರ್ಹತಾ ಸೇವೆಯನ್ನು ಕೊಡಬೇಕು ಎನ್ನುವುದನ್ನು ತಿದ್ದುಪಡಿ ಮಾಡಿ 1978ರಿಂದ 2004ರವರೆಗೆ ನಿವೃತ್ತಿಯಾದ ನೌಕರರಿಗೆ ಇರುವಂತೆ 8 ವರ್ಷಗಳ ಗರಿಷ್ಠ ಅರ್ಹತಾ ಸೇವೆಯನ್ನು ನೀಡಬೇಕು. ದಿನಗೂಲಿಯಿಂದ ಕಾಯಂಗೊಂಡು ನಿವೃತ್ತಿಯಾದ ನೌಕರರಿಗೆ 10 ವರ್ಷ ಅಥವಾ ಹೆಚ್ಚು ದಿನಗೂಲಿ ಸೇವೆಗೆ ಉಪಧನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಮಹಾನಗರಪಾಲಿಕೆಗಳು, ನಗರಸಭೆ, ಪುರಸಭೆಯಲ್ಲಿ ತೆರಿಗೆ ಸಲಹೆಗಾರರನ್ನು ಆಯಾ ಸಂಸ್ಥೆಗಳ ಪೂರ್ಣಕಾಲಿಕ ನೌಕರರೆಂದು ಮಾಡಿಕೊಳ್ಳಬೇಕು. ಅವರೆಲ್ಲರಿಗೂ ಸೇವಾ ಭದ್ರತೆ ಒದಗಿಸುವ ಜೊತೆಗೆ ಆಯಾ ಸ್ಥಳೀಯ ಸಂಸ್ಥೆಯ ತೆರಿಗೆ ವಸೂಲಾತಿ ಹೆಚ್ಚಿಸಲು ಅನುವು ಮಾಡಿಕೊಳ್ಳಬೇಕು. ಅವುಗಳ ಆಡಳಿತ ಸುಧಾರಣೆಗೆ ಈ ಕ್ರಮ ಅಗತ್ಯವಾಗಿದೆ’ ಎಂದು ತಿಳಿಸಿದರು.

‘ಕಾರ್ಮಿಕ ಬಂಧು’ ಎಂದು ಕೆಲಸ ಮಾಡುತ್ತಿರುವವರನ್ನು ಕರ್ನಾಟಕ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾಯಂ ನೌಕರರೆಂದು ಪರಿಗಣಿಸಬೇಕು. ಸಂಘದ ಪದಾಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಬೇಕು ಮತ್ತು ಇತರ ಬೇಡಿಕೆಗಳನ್ನು ಮಂಡಿಸಲು ಅವಕಾಶ ನೀಡಡೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು