ಶನಿವಾರ, ಜನವರಿ 28, 2023
18 °C
ವತನದಾರ್‌ ಪಾಟೀಲ ಮನೆತನದವರ ನೇತೃತ್ವದಲ್ಲಿ ಆಯೋಜನೆ

ಶತಮಾನ ಕಂಡ ‘ಸೀಮೋಲ್ಲಂಘನ’

ಇಮಾಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಗಡಿ ಭಾಗದ ವಿಜಯದಶಮಿ ಉಳಿದೆಲ್ಲಕ್ಕಿಂತ ವಿಶಿಷ್ಟ. ಇಲ್ಲಿನ ಕ್ಯಾಂಪ್‌ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ನಡೆಯುವ ‘ಸೀಮೋಲ್ಲಂಘನ’ ಕಾರ್ಯಕ್ರಮವೇ ಇದರ ಪ್ರಧಾನ. ಪರಸ್ಪರರು ಬನ್ನಿ ಮುಡಿಯುವ ಮೂಲಕವೇ ದಸರೆ ವೈಭವಕ್ಕೆ ತೆರೆ ಎಳೆಯುವುದು ವಾಡಿಕೆ. ಇದು ಇಂದು ನಿನ್ನೆಯದಲ್ಲ; ಶತಮಾನದಿಂದಲೂ ಮುಂದುವರಿದು ಬಂದಿದೆ.

ಇಲ್ಲಿನ ಪಾಟೀಲ ಗಲ್ಲಿಯಲ್ಲಿ ವತನದಾರ್‌ ಪಾಟೀಲ (ಪೊಲೀಸ್‌ ಪಾಟೀಲ) ಮನೆತನವಿದೆ. ಈ ಮನೆತನದವರ ನೇತೃತ್ವದಲ್ಲೇ ಪ್ರತಿವರ್ಷ ‘ಸೀಮೋಲ್ಲಂಘನ’ ನೆರವೇರುತ್ತದೆ.

ಏನಿದರ ವಿಶೇಷ?: ‘ಚವಾಟ್ ಗಲ್ಲಿಯ ಜ್ಯೋತಿಬಾ ಮಂದಿರದಲ್ಲಿ ವಿಜಯದಶಮಿ ಮುನ್ನಾ ದಿನದಂದು ಅಭಿಷೇಕ, ವಿಶೇಷ ಪೂಜೆ ನೆರವೇರುತ್ತದೆ. ಈ ದೇವಾಲಯದ ಪಲ್ಲಕ್ಕಿ ಹಾಗೂ ಇದೇ ಪ್ರದೇಶದ ಅಲಂಕೃತ ಎತ್ತು ಗಣಪತ ಗಲ್ಲಿ, ಮಾರುತಿ ಗಲ್ಲಿ ಮಾರ್ಗವಾಗಿ ಮೆರವಣಿಗೆ ಮೂಲಕ ಸಂಚರಿಸಿ ಹುತಾತ್ಮ ಚೌಕ್‌ ತಲುಪುತ್ತವೆ. ಅಲ್ಲಿ ಭಡಕಲ್‌ ಗಲ್ಲಿಯ ಬನಶಂಕರಿ ದೇವಸ್ಥಾನದ ‍ಪಲ್ಲಕ್ಕಿ, ಮಾರುತಿ ಗಲ್ಲಿಯ ಮಾರುತಿ ಮಂದಿರದ ರೂಪಕ ಸೇರಿ ವಿವಿಧ ದೇವಾಲಯಗಳ 11 ಪಲ್ಲಕ್ಕಿಗಳು ಸಮಾವೇಶಗೊಳ್ಳುತ್ತವೆ. ಬಳಿಕ, ಈ ಮೆರವಣಿಗೆ ನಗರದ ವಿವಿಧ ಮಾರ್ಗಗಳಲ್ಲಿ ಸಾಗಿ ವಿದ್ಯಾನಿಕೇತನ ಶಾಲೆ ಮೈದಾನ ತಲುಪಿದ ನಂತರ, ಧಾರ್ಮಿಕ ವಿಧಾನ ನೆರವೇರಿಸಲಾಗುತ್ತದೆ’ ಎಂದು ವತನದಾರ್‌ ಪಾಟೀಲ ಮನೆತನದ ರಂಜೀತ್‌ ಚವ್ಹಾಣ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಮೈದಾನದಲ್ಲಿ ಬನ್ನಿ ಮರದ ಎಲೆಗಳನ್ನು ಒಂದೇ ಕಡೆ ಗುಂಪಾಗಿ ಹಾಕಲಾಗಿರುತ್ತದೆ. ನಮ್ಮ ಮನೆಯಲ್ಲಿರುವ ತಲವಾರಿಗೂ ಪೂಜಿಸಲಾಗುತ್ತದೆ. ನಾವೂ ಮೆರವಣಿಗೆ ಮೂಲಕ ಬಂದ ಎತ್ತು, ಪಲ್ಲಕ್ಕಿಗಳಿಗೆ ಬನ್ನಿ ಮುಡಿಯುತ್ತೇವೆ. ನಂತರ ಉಳಿದ ಜನ ಬನ್ನಿ ಎಲೆಗಳನ್ನೇ ಬಂಗಾರ ರೂಪದಲ್ಲಿ ‘ಲೂಟಿ’ ಮಾಡುವುದು ವಾಡಿಕೆ. ಪರಸ್ಪರ ಅದನ್ನು ನೀಡಿ ಹಬ್ಬದ ಶುಭಾಶಯ ಕೋರುತ್ತಾರೆ’ ಎಂದು ಹೇಳಿದರು.

ಇಂಥ ವಿಶಿಷ್ಟ ಕಾರ್ಯಕ್ರಮಕ್ಕೆ ಬೆಳಗಾವಿ ಮಾತ್ರವಲ್ಲದೆ; ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಎಲ್ಲ ವಯೋಮಾನದವರೂ ಆಗಮಿಸುತ್ತಾರೆ. ಇಡೀ ಮೈದಾನ ಜನರಿಂದ ಕಿಕ್ಕಿರಿದು ತುಂಬುತ್ತದೆ. ಮೆರವಣಿಗೆ ಮಾರ್ಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ.

ಅಂದಹಾಗೆ, ಈ ಬಾರಿ ಅ. 5ರಂದು ನಮ್ಮೂರಿನ ಸೀಮೋಲ್ಲಂಘನವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.