ಬುಧವಾರ, ಅಕ್ಟೋಬರ್ 28, 2020
20 °C

ಕುಣಿಯಲು ಬರದವರು ನೆಲ ಡೊಂಕು ಎನ್ನುವಂತಿದೆ: ಎಚ್‌ಡಿಕೆ ಹೇಳಿಕೆಗೆ ಸವದಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್‌ ದಂಧೆಕೋರರು ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೋಡಿ ನಗು ಬಂತು. ಅವರ ಮಾತು, ಕುಣಿಯಲು ಬರದವರು ನೆಲ ಡೊಂಕು ಎನ್ನುವಂತಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಟೀಕಿಸಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತಮ್ಮ ಅಧಿಕಾರದ ಅವಧಿಯಲ್ಲಿ ಡ್ರಗ್ಸ್‌ ಮಾಫಿಯಾ ಇತ್ತು. ಆದರೆ, ಅದನ್ನು ನಿಭಾಯಿಸಲು  ಅಸಮರ್ಥನಾಗಿದ್ದೆ ಎಂದು ಅವರೇ ಹೇಳಿಕೊಂಡಂತಾಗಿದೆ’ ಎಂದು ಕುಟುಕಿದರು.

‘ಹಾಗೇನಾದರೂ ಆಗಿದ್ದರೆ ಒಂದು ವರ್ಷದಿಂದ ಬಾಯಿ ಮುಚ್ಚಿಕೊಂಡಿದ್ದರೇಕೆ? ಎಂದು ಕೇಳಿದರು.

‘ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಸರ್ಕಾರ ಸಿದ್ಧವಿದೆ. ತನಿಖೆಯಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಗೃಹ ಸಚಿವರು ಆಸಕ್ತಿ ವಹಿಸಿ ನಿಗಾ ಇಟ್ಟಿದ್ದಾರೆ. ಈ  ಬಗ್ಗೆ ಜನರಿಗೆ ಸಂದೇಹ ಬೇಡ. ರಾಜಕಾರಣಿಗಳ ಮಕ್ಕಳೋ, ಅಧಿಕಾರಿಗಳ ಮಕ್ಕಳೋ ಯಾರೇ ಇದ್ದರೂ ಕ್ರಮವಾಗಲಿದೆ. ಮಾದಕ ವಸ್ತುಗಳ ಜಾಲದಿಂದ ರಾಜ್ಯದ ಯಾವುದೇ ಜಿಲ್ಲೆಯೂ ಹೊರತಾಗಿಲ್ಲ. ಎಲ್ಲವನ್ನೂ ಪತ್ತೆ ಮಾಡಲು ಗೃಹ ಇಲಾಖೆ ಕ್ರಮ ಕೈಗೊಂಡಿದೆ’ ಎಂದರು.

‘ರಾಗಿಣಿ ಪಾಗಿಣಿ ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಚುನಾವಣೆ ವೇಳೆ ಚಲನಚಿತ್ರ ನಟ–ನಟಿಯರು ಪ್ರಚಾರಕ್ಕೆ ಬರುತ್ತಾರೆ. ಈಗ ಬಂಧಿತರಾಗಿರುವ ರಾಗಿಣಿ ಹಾಗೂ ಸಂಜನಾ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜೊತೆ ತೆಗೆಸಿಕೊಂಡಿರುವ ಫೋಟೊಗಳು ಕೂಡ ಹರಿದಾಡುತ್ತಿವೆ. ಆ ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಇದ್ದರೆಂದು ಆ ನಾಯಕರಿಗೆ ಗೊತ್ತಿರುವುದಿಲ್ಲ. ನಮಗೂ ಗೊತ್ತಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಾಕರ್ಷಣೆಗೆ ಅವರನ್ನು ಬಳಸಿಕೊಂಡಿರುತ್ತಾರೆ. ಅವರ ನಿಜ ಬಣ್ಣ ಈಗ ಬಯಲಾಗಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಉಮೇಶ ಕತ್ತಿ ನಮ್ಮ ಸ್ನೇಹಿತರು. ಅವರು ಸಂಪುಟ ಸೇರಿದರೆ ನಮಗೂ ಖುಷಿಯೇ. ಆದರೆ, ಯಾವಾಗ ವಿಸ್ತರಣೆ ಆಗುತ್ತದೆ ಎನ್ನುವುದು ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು