ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಡಿಪಿಯು ಕಚೇರಿಗಿಲ್ಲ ಸ್ವಂತ ಕಟ್ಟಡ: ಏಳು ವರ್ಷಗಳಿಂದ ಜಾಗಕ್ಕಾಗಿ ಹುಡುಕಾಟ!

Published 29 ಜನವರಿ 2024, 7:38 IST
Last Updated 29 ಜನವರಿ 2024, 7:38 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಕೇಂದ್ರದ ಸ್ಥಾನಮಾನ ಹೊಂದಲು ಕಾತರವಾಗಿರುವ ಚಿಕ್ಕೋಡಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಯು) ಕಚೇರಿ ಆರಂಭಗೊಂಡು ಏಳು ವರ್ಷ ಕಳೆದಿದೆ. ಆದರೆ, ಇಂದಿಗೂ ಸ್ವಂತ ಕಟ್ಟಡ ಹೊಂದಿಲ್ಲ.

ಈ ಹಿಂದೆ ಬೆಳಗಾವಿ ಶೈಕ್ಷಣಿಕ ಜಿಲ್ಲೆಯೊಂದೇ ಇತ್ತು. ಆದರೆ, ಅಥಣಿ, ರಾಯಬಾಗ ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಆ ಭಾಗದ ಜನರು ಕಚೇರಿ ಕೆಲಸಕ್ಕಾಗಿ ಬೆಳಗಾವಿಗೆ ಬರಲು ಅನಾನುಕೂಲವಾಗುತ್ತಿತ್ತು. ಸಂಜೆ ಸಭೆ ನಡೆದರಂತೂ ದೂರದ ಊರಿನ ಪ್ರಾಚಾರ್ಯರು ಅಂದೇ ಊರಿಗೆ ಹೋಗಲಾಗದೆ, ಬೆಳಗಾವಿಯಲ್ಲಿ ವಾಸ್ತವ್ಯ ಹೂಡುವ ಅನಿವಾರ್ಯತೆ ಇತ್ತು. ಹಾಗಾಗಿ ರಾಜ್ಯ ಸರ್ಕಾರ 2017ರಲ್ಲಿ ಬೆಳಗಾವಿಯಿಂದ ಪ್ರತ್ಯೇಕಿಸಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಚಿಸಿತು.

ಆಗಷ್ಟೇ ಚಿಕ್ಕೋಡಿಯಲ್ಲಿ ಹೊಸದಾಗಿ ನಿರ್ಮಾಣವಾಗಿದ್ದ ಡಿಡಿಪಿಐ ಕಚೇರಿ ಕಟ್ಟಡದಲ್ಲೇ ಡಿಡಿಪಿಯು ಕಚೇರಿ ತಾತ್ಕಾಲಿಕವಾಗಿ ಕಾರ್ಯಾರಂಭ ಮಾಡಿತು. ಆದರೆ, ಈವರೆಗೂ ಅದಕ್ಕೊಂದು ನಿವೇಶನ ಅಥವಾ ಸ್ವಂತ ಕಟ್ಟಡ ಸಿಕ್ಕಿಲ್ಲ. ‘ಚಿಕ್ಕೋಡಿಯಲ್ಲಿ ಸ್ವಂತ ಕಟ್ಟಡದಲ್ಲಿ ಡಿಡಿಪಿಯು ಕಚೇರಿ ನಿರ್ಮಿಸುತ್ತೇವೆ’ ಎಂಬ ಜನಪ್ರತಿನಿಧಿಗಳ ಭರವಸೆ ಇಂದಿಗೂ ಈಡೇರಿಲ್ಲ.

ಕಾಲೇಜುಗಳ ಸಭಾಂಗಣಗಳೇ ಆಶ್ರಯ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ 191 ‌ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿಪೂರ್ವ ಕಾಲೇಜುಗಳಿವೆ. ಡಿಡಿಪಿಐ ಕಚೇರಿಯ ಒಂದು ಭಾಗದಲ್ಲಿ ಇಕ್ಕಟ್ಟಾದ ಸ್ಥಳದಲ್ಲೇ ಡಿಡಿಪಿಯು ಕಚೇರಿ ನಡೆಯುತ್ತಿರುವುದರಿಂದ ವಿವಿಧ ಕೆಲಸಗಳ ನಿಮಿತ್ತ ಬರುವವರಿಗೆ ತೊಂದರೆಯಾಗಿದೆ. ಕಡತಗಳನ್ನು ಇರಿಸಲು ಸೂಕ್ತ ಸ್ಥಳಾವಕಾಶ ಇಲ್ಲದಂತಾಗಿದೆ. ಇನ್ನೂ ಯಾವುದೇ ಸಭೆ–ಸಮಾರಂಭಗಳು, ಕಾರ್ಯಾಗಾರ ನಡೆಸಲು ಇಲ್ಲಿ ವ್ಯವಸ್ಥೆಯಿರದ ಕಾರಣ, ಬೇರೆ ಕಾಲೇಜುಗಳ ಸಭಾಂಗಣಗಳನ್ನೇ ಅಧಿಕಾರಿಗಳು ಆಶ್ರಯಿಸುವಂತಾಗಿದೆ.

ಅನುದಾನ ಕೊರತೆ: ‘ಈ ಹಿಂದೆ ಡಿಡಿಪಿಯು ಕಚೇರಿಗಾಗಿ ಚಿಕ್ಕೋಡಿ ಪುರಸಭೆಗೆ ಸೇರಿದ ಜಾಗ ಗುರುತಿಸಲಾಗಿತ್ತು. ಲೀಸ್‌ ಮಾದರಿಯಲ್ಲಿ ಅದನ್ನು ಪಡೆಯಲು ₹80 ಲಕ್ಷ ಭರಿಸುವಂತೆ ಪುರಸಭೆಯವರು ಕೇಳಿದರು. ಆದರೆ, ಅನುದಾನವಿಲ್ಲದ್ದರಿಂದ ಆ ಜಾಗ ಕೈಬಿಟ್ಟೆವು’ ಎಂದು ಡಿಡಿಪಿಯು ಪಿ.ಐ.ಭಂಡಾರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಡೀ ಪಿಯು ಕಾಲೇಜುಗಳ ನಿರ್ವಹಣೆ ಮಾಡುವ ಡಿಡಿಪಿಯು ಕಚೇರಿ ಸ್ಥಿತಿಯೇ ಹೀಗಾದರೆ, ಸರ್ಕಾರಿ ಪಿಯು ಕಾಲೇಜುಗಳ ಸ್ಥಿತಿ ಏನೋ’ ಎಂದು ಉಪನ್ಯಾಸಕರೊಬ್ಬರು ಪ್ರಶ್ನಿಸಿದರು.

ಈಡೇರದ ಜನಪ್ರತಿನಿಧಿಗಳ ಭರವಸೆ ಸುಗಮ ಕಾರ್ಯನಿರ್ವಹಣೆಗೆ ತೊಡಕು ನಾನಾ ಕೆಲಸಗಳ ನಿಮಿತ್ತ ಕಚೇರಿಗೆ ಬರುವವರ ಪರದಾಟ
ಚಿಕ್ಕೋಡಿ ಡಿಡಿಪಿಯು ಕಚೇರಿ ನಿರ್ಮಾಣಕ್ಕಾಗಿ ಇತ್ತೀಚೆಗೆ ಒಂದು ಜಾಗ ಗುರುತಿಸಿದ್ದೇವೆ. ಅದು ಅಂತಿಮಗೊಂಡ ನಂತರ ಕಾಮಗಾರಿ ಆರಂಭಿಸಲಾಗುವುದು
ಪಿ.ಐ.ಭಂಡಾರೆ ಡಿಡಿಪಿಯು ಚಿಕ್ಕೋಡಿ
ಡಿಡಿಪಿಐ ಕಚೇರಿ ಸಿಬ್ಬಂದಿಗೂ ಸಮಸ್ಯೆ
‘ಎಂಟು ಶೈಕ್ಷಣಿಕ ವಲಯಗಳ ವ್ಯಾಪ್ತಿ ಹೊಂದಿರುವ ಡಿಡಿಪಿಐ ಕಚೇರಿಯಲ್ಲಿ 40ಕ್ಕೂ ಅಧಿಕ ಸಿಬ್ಬಂದಿ ಇದ್ದೇವೆ. ನಮ್ಮ ಕೊಠಡಿಗಳನ್ನೇ ಡಿಡಿಪಿಯು ಕಚೇರಿಯವರು ಬಳಸುತ್ತಿರುವುದರಿಂದ ನಮಗೂ ಸ್ಥಳದ ಅಭಾವ ಎದುರಾಗಿದೆ. ಕೆಲವು ಅಧಿಕಾರಿಗಳಿಗೆ ಕೂಡ್ರಲು ಜಾಗವಿಲ್ಲದಂತಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT