ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ, ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ (ಪಿಎಲ್ಡಿ) ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮೇಲುಗೈ ಸಾಧಿಸಿದ್ದಾರೆ. ಎರಡೂ ಸ್ಥಾನಗಳಿಗೆ ಲಕ್ಷ್ಮಿ ಬಣದವರೇ ಅವಿರೋಧವಾಗಿ ಆಯ್ಕೆಯಾಗಿದ್ದು, ಜಾರಕಿಹೊಳಿ ಸಹೋದರರಿಗೆ ಹಿನ್ನಡೆಯಾದಂತಾಗಿದೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಬಣದವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಶಾಸಕ ಸತೀಶ ಜಾರಕಿಹೊಳಿ ಬಣದ ನಿರ್ದೇಶಕರು ಬಂದಿದ್ದರಾದರೂ ಉಮೇದುವಾರಿಕೆ ಸಲ್ಲಿಸಲಿಲ್ಲ.

ಅಧ್ಯಕ್ಷರಾಗಿ ಮಹಾದೇವ ಯಲ್ಲಪ್ಪ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಬಾಪುಸಾಹೇಬ ಮಹಮ್ಮದಲಿ ಜಮಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಮಂಜುಳಾ ನಾಯಕ ನಂತರ ಘೋಷಿಸಿದರು.

ಈ ಜಟಾಪಟಿಯಲ್ಲಿ ಗೆದ್ದವರಾರು, ಸೋತವರಾರು ಎನ್ನುವ ವಿಶ್ಲೇಷಣೆಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಆರಂಭವಾಗಿವೆ. ತಮ್ಮ ಆಪ್ತ ಬಾಪುಗೌಡ ಪಾಟೀಲರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವುದು ಲಕ್ಷ್ಮಿ ಯೋಜನೆಯಾಗಿತ್ತು. ಇದಕ್ಕೆ ಸತೀಶ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈಶ್ವರ್ ಖಂಡ್ರೆ, ಲಕ್ಷ್ಮಿ ಬಣದ ಬೇರೊಬ್ಬರ ಆಯ್ಕೆಗೆ ಸಲಹೆ ನೀಡಿದರು. ಮೇಲ್ನೋಟಕ್ಕೆ ಲಕ್ಷ್ಮಿಗೆ ಜಯವಾಗಿದ್ದರೂ, ಸತೀಶ ಹಟ ಗೆದ್ದಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಫಲ ಕೊಟ್ಟ ಸಂಧಾನ: ಚುನಾವಣೆ ವಿಷಯವಾಗಿ ಕಾಂಗ್ರೆಸ್ನವರೇ ಆದ ಲಕ್ಷ್ಮಿ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಎಚ್ಚೆತ್ತ ಹೈಕಮಾಂಡ್, ಸಂಘರ್ಷ ಶಮನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಕಳುಹಿಸಿತ್ತು. ಎರಡೂ ಬಣಗಳೊಂದಿಗೆ ಸಂಧಾನ ಸಭೆ ನಡೆಸಿದ ಖಂಡ್ರೆ, ‘ಎಲ್ಲ ಸಮಸ್ಯೆಗಳೂ ಬಗೆಹರಿದಿವೆ. ಲಕ್ಷ್ಮಿ, ಸತೀಶ ಹಾಗೂ ರಮೇಶ ಒಪ್ಪಿದವರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ವಿವಾದ ಸುಖಾಂತ್ಯ ಕಂಡಿದೆ; ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗುತ್ತಾರೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಂಧಾನ ಸಭೆಯಿಂದ ದೂರ ಉಳಿದರು. ‘ರಮೇಶ, ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪೂಜೆಗೆ ಹೋಗಿದ್ದಾರೆ. ಹೀಗಾಗಿ, ಬಂದಿಲ್ಲ. ಆ ವಿಷಯವನ್ನು ನನಗೆ ತಿಳಿಸಿದ್ದಾರೆ. ಅವರೊಂದಿಗೆ ಮೊಬೈಲ್ನಲ್ಲಿ ಚರ್ಚಿಸಿಯೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ’ ಎಂದು ಖಂಡ್ರೆ ಸ್ಪಷ್ಟಪಡಿಸಿದರು.

ಇದರೊಂದಿಗೆ, ಲಕ್ಷ್ಮಿ– ಜಾರಕಿಹೊಳಿ ಸಹೋದರರ ನಡವಿನ ಜಟಾಪಟಿ ತಾತ್ಕಾಲಿಕವಾಗಿ ಶಮನವಾದಂತಾಗಿದೆ. ಮೇಲ್ನೋಟಕ್ಕೆ ಬಗೆಹರಿದಂತೆ ಕಂಡರೂ, ಅಸಮಾಧಾನ ಮುಂದುವರಿದಿದೆ. ಸಂಧಾನ ಸಭೆಯಿಂದ ಸಚಿವ ರಮೇಶ ಜಾರಕಿಹೊಳಿ ದೂರ ಉಳಿದು, ‘ಎಲ್ಲದಕ್ಕೂ ನನ್ನ ಸಮ್ಮತಿ ಇಲ್ಲ’ ಎನ್ನುವ ಸಂದೇಶ ರವಾನಿಸಿದ್ದಾರೆ.

ಪ್ರತಿಷ್ಠೆ ಮಾಡಿದರು: ಹಿಂದೆಲ್ಲಾ ಸದ್ದಿಲ್ಲದೇ ನಡೆಯುತ್ತಿದ್ದ ಈ ಚುನಾವಣೆಯನ್ನು ಲಕ್ಷ್ಮಿ ಹಾಗೂ ಸತೀಶ ಈ ಬಾರಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅವಿರೋಧ ಆಯ್ಕೆಗೆ ಸತೀಶ ಪಟ್ಟು ಹಿಡಿದಿದ್ದರು. ರಮೇಶ್ ಕೂಡ ಅವರ ಬೆಂಬಲಕ್ಕೆ ನಿಂತಿದ್ದರು. ‘ಚುನಾವಣೆ ನಡೆಯಲಿ, ತಾಕತ್ತಿದ್ದವರು ಗೆಲ್ಲಲಿ’ ಎಂದು ಲಕ್ಷ್ಮಿ ಸವಾಲು ಒಡ್ಡಿದ್ದರು.

‘ಲಿಂಗಾಯತ ಮಹಿಳೆಗೆ, ಆಡಳಿತಾರೂಢ ಪಕ್ಷದ ಶಾಸಕಿಗೆ ಅನ್ಯಾಯವಾಗುತ್ತಿದೆ; ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡಲಾಗುತ್ತಿದೆ’ ಎಂದು ಲಕ್ಷ್ಮಿ ಜಾತಿ ದಾಳವನ್ನೂ ಉರುಳಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸತೀಶ, ‘ಅವರನ್ನು ಜಾರಕಿಹೊಳಿ ಕುಟುಂಬ ಬೆಳೆಸಿದೆ. ಶಾಸಕಿಯಾದ ನಂತರ ಜಾತಿ ನೆನಪಾಗಿದೆ’ ಎಂದು ಟೀಕಿಸಿದ್ದರು. ‘ಹೊಸದಾಗಿ ಶಾಸಕಿಯಾಗಿದ್ದೀರಿ; ಬಹಳ ಮೆರೆಯಬೇಡಿ. ಸತೀಶ ಕಾಲ ಕಸವಾಗಲೂ ನೀವು ಲಾಯಕ್ಕಿಲ್ಲ. ಶೋ ಪೀಸ್ ಆಟ ನಡೆಯಲ್ಲ’ ಎಂದು ರಮೇಶ ತಿರುಗೇಟು ಕೊಟ್ಟಿದ್ದರು.

‘ಈ ಚುನಾವಣೆಯಲ್ಲಿ ನಮಗೆ ಅವಮಾನವಾದರೆ, ಗಂಭೀರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಜಾರಕಿಹೊಳಿ ಸಹೋದರರು ಎಚ್ಚರಿಕೆ ನೀಡಿದ್ದರಿಂದ, ಸರ್ಕಾರ ಅತಂತ್ರಗೊಳಿಸುವ ತಂತ್ರ ರೂಪಿಸಿದ್ದಾರೆಯೇ ಎಂಬ ಚರ್ಚೆ, ವಿಶ್ಲೇಷಣೆಗಳು ಕೇಳಿಬಂದಿದ್ದವು.

ನೀವೇ ನೋಡ್ತೀರಲ್ಲಾ?

‘ಈಗ ಪಿಎಲ್ಡಿ ಬ್ಯಾಂಕ್ ಸಮಸ್ಯೆಯಷ್ಟೇ ಬಗೆಹರಿದಿದೆ. ಜಿಲ್ಲೆಯಲ್ಲಿ ಇನ್ನೂ ಹಲವು ಸಮಸ್ಯೆಗಳಿವೆ. ಆ ಕುರಿತು ಹೈಕಮಾಂಡ್ ಬಳಿ ಚರ್ಚಿಸಲಾಗುವುದು. ಏನಾಗುತ್ತದೆ ಎನ್ನುವುದನ್ನು ನೀವೇ ನೋಡುತ್ತೀರಲ್ಲಾ?’ ಎಂದು ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.

‘ಸ್ಥಳೀಯವಾಗಿ ಹೊಂದಾಣಿಕೆ ಸಮಸ್ಯೆ ಇತ್ತು. ವಾರದಿಂದಲೂ ಇದನ್ನು ವರಿಷ್ಠರಿಗೆ ಹೇಳುತ್ತಿದ್ದೆವು. ಈಗ ಬಗೆಹರಿಸಿದ್ದಾರೆ. ಈ ಚುನಾವಣೆ ಸಣ್ಣದು. ಆದರೆ, ರಾಜಕೀಯ ತಿರುವು ತೆಗೆದುಕೊಂಡಿದ್ದರಿಂದ ಈ ಮಟ್ಟಕ್ಕೆ ಬೆಳೆಯಿತು. ಅವಿರೋಧ ಆಯ್ಕೆಯಾಗಿ ಲಕ್ಷ್ಮಿ ನಮ್ಮೊಂದಿಗಲ್ಲದಿದ್ದರೂ 14 ಜನ ನಿರ್ದೇಶಕರ ಜೊತೆಯಾದರೂ ಮಾತನಾಡಬೇಕಾಗಿತ್ತು. ಆದರೆ, ಮಾತನಾಡದೆ ಗುಂಪುಗಾರಿಕೆ ಮಾಡಿದರು’ ಎಂದು ಟೀಕಿಸಿದರು.

‘ಮುಖಂಡರಲ್ಲಿ ಸಂವಹನ ಕೊರತೆಯಿಂದ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಅವುಗಳನ್ನು ಬಗೆಹರಿಸಿದ್ದೇವೆ. ಇದರಿಂದ ಸರ್ಕಾರ ಅಥವಾ ಪಕ್ಷಕ್ಕೆ ಯಾವುದೇ ಧಕ್ಕೆ ಇಲ್ಲ’ ಎಂದು ಈಶ್ವರ ಖಂಡ್ರೆ ಹೇಳಿದರು.

ಅವಿರೋಧ ಆಯ್ಕೆಯಾದವರು ಒಮ್ಮತದ ಅಭ್ಯರ್ಥಿಗಳಾಗಿದ್ದಾರೆ. ವಿವಾದ ಸುಖಾಂತ್ಯ ಕಂಡಿದೆ. ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ.

-ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ಚುನಾವಣೆಯಲ್ಲಿ ನಮಗೆ ಮುಖಭಂಗವಾಗಿಲ್ಲ. ನಾವು ಹೇಳಿದವರೇ ಆಯ್ಕೆಯಾಗಿದ್ದಾರೆ. ಸಮಸ್ಯೆ ಬಗೆಹರಿಸಿಯೇ ಕೊಲ್ಲಾಪುರಕ್ಕೆ ಹೋಗಿದ್ದೆ

-ರಮೇಶ ಜಾರಕಿಹೊಳಿ, ಪೌರಾಡಳಿತ ಸಚಿವ

ಚುನಾವಣೆ ಫಲಿತಾಂಶದಿಂದ ನನ್ನ ಪ್ರತಿಷ್ಠೆಗೆ ಧಕ್ಕೆಯಾಗಿಲ್ಲ. ಅವಿರೋಧ ಆಯ್ಕೆಯಾಗಬೇಕು ಎಂದು ಹೇಳುತ್ತಿದ್ದೆ. ಅದೇ ರೀತಿ ಆಗಿದೆ. ಇದಕ್ಕೆ ನಮ್ಮ ಸಹಮತವಿದೆ

-ಸತೀಶ ಜಾರಕಿಹೊಳಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.