ಗುರುವಾರ , ಮೇ 6, 2021
23 °C
ಸೋಮವಾರದವರೆಗೆ 4.29 ಲಕ್ಷ ಮಂದಿ ಪಡೆದಿದ್ದಾರೆ

ಕೋವಿಡ್ ಹೆಚ್ಚಳ; ಲಸಿಕೆಗೆ ಬೇಡಿಕೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್–19 ಹರಡುವಿಕೆ ಹೆಚ್ಚಾಗುತ್ತಿರುವುದರಿಂದಾಗಿ, ಆ ಸೋಂಕು ನಿರೋಧಕ ಶಕ್ತಿ ಒದಗಿಸುತ್ತದೆ ಎಂದು ಸರ್ಕಾರ ತಿಳಿಸಿರುವ ಲಸಿಕೆಗೆ (ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್) ಬೇಡಿಕೆ ಕಂಡುಬಂದಿದೆ.

ಆರಂಭದಲ್ಲಿ ಹಿಂದೇಟು ಹಾಕುತ್ತಿದ್ದವರು ಕೂಡ ಈಗ ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳತ್ತ ಬರುತ್ತಿದ್ದಾರೆ. ಜಾಗೃತಿ ಮೂಡಿರುವುದು ಒಂದೆಡೆಯಾದರೆ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಉಂಟಾಗಿರುವ ಆತಂಕವೂ ಮತ್ತೊಂದು ಕಾರಣವಾಗಿದೆ. ಕೆಲವು ಹಳ್ಳಿಗಳಲ್ಲಿ ಜನರೇ ವಾಹನ ವ್ಯವಸ್ಥೆ ಮಾಡಿಕೊಂಡು ಬಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಸೋಮವಾರದವರೆಗೆ ಜಿಲ್ಲೆಯಲ್ಲಿ 1ನೇ ಹಾಗೂ 2ನೇ ಹಂತದ ಡೋಸ್‌ ಪಡೆದವರ ಸಂಖ್ಯೆ 4,29,968 ಆಗಿದೆ. ಹೀಗೆ ಲಸಿಕೆ ಹಾಕಿಸಿಕೊಂಡವರಿಗೆ ಗಂಭೀರ ಸ್ವರೂಪದ ಆರೋಗ್ಯ ತೊಂದರೆ ಕಾಣಿಸಿಕೊಂಡಿದ್ದು ವರದಿಯಾಗಿಲ್ಲ ಎನ್ನುತ್ತದೆ ಆರೋಗ್ಯ ಇಲಾಖೆ.

ಆರಂಭದಲ್ಲಿ ಇರಲಿಲ್ಲ

ಮೊದಲಿಗೆ, ಕೊರೊನಾ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಆರೋಗ್ಯ ಸೇವಾ ಕ್ಷೇತ್ರದ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಬಳಿಕ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ನಂತರ 60 ವರ್ಷ ಮೇಲಿನವರಿಗೆ ಆದ್ಯತೆ ನೀಡಲಾಯಿತು. ಏ.1ರಿಂದ 4ನೇ ಹಂತದ ಅಭಿಯಾನ ಆರಂಭವಾಗಿದೆ. 45 ವರ್ಷ ಹಾಗೂ ಅದಕ್ಕಿಂತ ಮೇಲಿನವರಿಗೆ ಲಸಿಕೆ ಕೊಡಲಾಗುತ್ತಿದೆ.

ಜಿಲ್ಲೆಯಾದ್ಯಂತ ಅರಿವು ಮೂಡಿಸಿ, ಜನರಿಗೆ ಪ್ರೇರಣೆ ನೀಡಲಾಗುತ್ತಿತ್ತು. ಆರೋಗ್ಯ ಉಪ ಕೇಂದ್ರಗಳಲ್ಲೂ ಶಿಬಿರ ಆಯೋಜಿಸಿ ಲಸಿಕೆ ನೀಡಲಾಗುತ್ತಿತ್ತು. ಆದರೂ ಅಲ್ಲಲ್ಲಿ ಜನರು ಕಾರಣ ಹೇಳಿ ಹಿಂದೇಟು ಹಾಕುತ್ತಿದ್ದರು. ಆದರೆ ಕಲವು ದಿನಗಳಿಂದ ಲಸಿಕಾ ಕೇಂದ್ರಗಳಿಗೆ ಅಪಾರ ಸಂಖ್ಯೆಯ ಜನರು ಬರುತ್ತಿದ್ದಾರೆ. ಸರದಿಯಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಬಿಮ್ಸ್‌ ಆಸ್ಪತ್ರೆ ಜೊತೆಗೆ ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ತಪಾಸಣೆ ಮಾಡಿಸಿಕೊಳ್ಳುವುದಕ್ಕಿಂತಲೂ ಲಸಿಕೆ ಪಡೆಯುವುದಕ್ಕೇ ಜನರು ಆದ್ಯತೆ ನೀಡುತ್ತಿರುವುದು ಕಂಡುಬರುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

200 ಕೇಂದ್ರಗಳಲ್ಲಿ

‘ಜಿಲ್ಲೆಯಲ್ಲಿ 28 ಖಾಸಗಿ ಆಸ್ಪತ್ರೆಗಳು ಸೇರಿದಂತೆ 200 ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ನಿತ್ಯ ಸರಾಸರಿ 15ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಸೋಮವಾರ 23ಸಾವಿರ ಮಂದಿ ಹಾಕಿಸಿಕೊಂಡಿದ್ದಾರೆ. ಬೇಡಿಕೆ ಹೆಚ್ಚುತ್ತಿರುವುದು ನಿಜ. ಸದ್ಯ 32 ಸಾವಿರ ಡೋಸ್ ಲಭ್ಯವಿದೆ. 15ಸಾವಿರ ಡೋಸ್ ಮಂಗಳವಾರ ತಡರಾತ್ರಿವರೆಗೆ ಬಂದು ತಲುಪಲಿದೆ. ಖಾಲಿಯಾದಂತೆಲ್ಲಾ ಇಲಾಖೆಯಿಂದ ಪೂರೈಸಲಾಗುತ್ತಿದೆ. ಸದ್ಯಕ್ಕೆ ಲಸಿಕೆ ಕೊರತೆ ಇಲ್ಲ’ ಎಂದು ಜಿಲ್ಲಾ ಲಸಿಕಾಧಿಕಾರಿ ಡಾ.ಐ.‍ಪಿ. ಗಡಾದ ‘ಪ್ರಜಾವಾಣಿ’ಗೆ ತಿಳಿಸಿದರು.

18 ವರ್ಷ ಮೀರಿದ ಎಲ್ಲರಿಗೂ ಮೇ 1ರಿಂದ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಪ್ರಕಟಿಸಿದೆ. ಆ ವಯೋಮಾನದವರು ಜಿಲ್ಲೆಯಲ್ಲಿ 30 ಲಕ್ಷಕ್ಕೂ ಜಾಸ್ತಿ ಇದ್ದಾರೆ.

***

ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತಿಲ್ಲ!

‘ಲಸಿಕೆಯನ್ನು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಆಂದೋಲನದ ರೀತಿಯಲ್ಲಿ ಮುಂದುವರಿಸಲು ಆಗುತ್ತಿಲ್ಲ. ಕೊರತೆ ಇಲ್ಲ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಸಾಧ್ಯವಾಗುತ್ತಿಲ್ಲ. ಪರಿಣಾಮ ನಿಯಂತ್ರಿತ ಪ್ರಮಾಣದಲ್ಲಿ ನಡೆಸುತ್ತಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಿದ್ದರೆ ಮತ್ತಷ್ಟು ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿತ್ತು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 45 ವರ್ಷ ಮೇಲಿನವರು 13ಲಕ್ಷಕ್ಕೂ ಹೆಚ್ಚಿದ್ದಾರೆ. ಪ್ರಸ್ತುತ ನಡೆದಿರುವಂತೆ ಮುಂದುವರಿದರೆ ಇಷ್ಟೂ ಮಂದಿಗೆ 1ನೇ ಹಂತದ ಡೋಸ್ ನೀಡುವ ಪ್ರಕ್ರಿಯೆಯು ಪೂರ್ಣಗೊಳ್ಳುವುದಕ್ಕೆ ಇನ್ನೂ 20 ದಿನಗಳಿಗೂ ಹೆಚ್ಚಿನ ಸಮಯ ಬೇಕಾಗುತ್ತದೆ. ಲಸಿಕೆಯು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾದರೆ ವೇಗವಾಗಿ ಪ್ರಕ್ರಿಯೆ ಮುಗಿಸಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಸಿಕೆ ಪಡೆದುಕೊಳ್ಳುವುದು ಬಹಳ ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ಅವರು.

***

ಜನರು ಉತ್ಸಾಹದಿಂದ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ದೊಡ್ಡ ಜಿಲ್ಲೆ ಆಗಿರುವುದರಿಂದ ಎಲ್ಲ ಕಡೆಯೂ ಏಕರೂಪವಾಗಿ ಪೂರೈಸುವುದರಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯ ಉಂಟಾಗಿರಬಹುದು. ಆದರೆ, ತೊಂದರೆ ಆಗಿಲ್ಲ
ಡಾ.ಕೆ. ಹರೀಶ್‌ಕುಮಾರ್‌, ಜಿಲ್ಲಾಧಿಕಾರಿ

***

ಆರೋಗ್ಯ ಇಲಾಖೆಯ ಸಲಹೆಗಳೇನು?

* ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು

* ಲಸಿಕೆ ಪಡೆದುಕೊಳ್ಳಬೇಕು

* ಲಸಿಕೆ ಪಡೆದ ನಂತರವೂ ಮಾಸ್ಕ್‌ ಧರಿಸುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು

* ಅನಗತ್ಯವಾಗಿ ಹೊರಗಡೆ ಓಡಾಡಬಾರದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು