ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಜಲಾಶಯಗಳ ಒಡಲು

ಕುಡಿಯಲು ಮಾತ್ರ ಲಭ್ಯವಿರುವ ನೀರು
Published 13 ಮೇ 2024, 4:27 IST
Last Updated 13 ಮೇ 2024, 4:27 IST
ಅಕ್ಷರ ಗಾತ್ರ

ಬೆಳಗಾವಿ/ಹೊಸಪೇಟೆ: ಮಳೆ ಕೊರತೆ, ಬರ ಛಾಯೆ ಮತ್ತು ಅತಿಯಾದ ಬಿಸಿಲಿನಿಂದ ನೀರು ಆವಿಯಾಗುತ್ತಿದ್ದು, ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಬಹುತೇಕ ಕಡೆ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಸಕಾಲಕ್ಕೆ ಮುಂಗಾರು ಮಳೆಯಾಗದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ.

ನಾಲ್ಕು ಜಿಲ್ಲೆಗಳ ಜನರ ದಾಹ ನೀಗಿಸುವ ಸವದತ್ತಿ ತಾಲ್ಲೂಕಿನ ಜಲಾಶಯದಲ್ಲಿ ಸದ್ಯ ಡೆಡ್‌ಸ್ಟೋರೇಜ್‌ ಹೊರತುಪಡಿಸಿ, 4.59 (ಲೈವ್‌ ಸ್ಟೋರೇಜ್‌) ನೀರು ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1.6 ಟಿಎಂಸಿ ನೀರು ಕಡಿಮೆ ಸಂಗ್ರಹವಿರುವ ಕಾರಣ, ಮಲಪ್ರಭೆಯನ್ನೇ ನೆಚ್ಚಿಕೊಂಡ ಊರುಗಳಲ್ಲಿ ಜಲಸಂಕಷ್ಟ ತಲೆದೋರಿದೆ. ಕುಡಿಯಲು ಮಾತ್ರ ನೀರು ಲಭ್ಯವಿದ್ದು, ಕೃಷಿಗಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

2022ರಲ್ಲಿ ಉತ್ತಮ ಮಳೆಯಾಗಿದ್ದರಿಂದ ತುಂಗಭದ್ರಾ ಜಲಾಶಯ ಉಕ್ಕಿ ಹರಿದಿತ್ತು. ಮಳೆಗಾಲದಲ್ಲಿ 405 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿದು ಹೋಗಿತ್ತು. ಆದರೆ, ಕಳೆದ ವರ್ಷ ಮಳೆಗಾಲದಲ್ಲಿ ಮಳೆಯಾಗದ ಕಾರಣ ಜಲಾಶಯದಲ್ಲಿ 89 ಟಿಎಂಸಿ ಅಡಿಯವರೆಗೆ ಮಾತ್ರ ಭರ್ತಿಯಾಗಿತ್ತು. ಹೀಗಾಗಿ 105.79 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಮೇ 9ರ ವೇಳೆಗೆ, 3.43 ಟಿಎಂಸಿ ಅಡಿ (ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇ.3ರಷ್ಟು) ಮಾತ್ರವೇ ನೀರು ಉಳಿದಿದೆ. ಸದ್ಯ 12 ಕ್ಯೂಸೆಕ್‌ ನೀರನ್ನು ಮಾತ್ರ ಹೊಸಪೇಟೆಯ ರಾಯ, ಬಸವ ಕಾಲುವೆಗಳಿಗೆ ಹರಿ ಬಿಡಲಾಗುತ್ತಿದ್ದು, ಮಳೆ ಬರುವವರೆಗೆ ಲಭ್ಯವಿರುವ ನೀರನ್ನು ನಿರ್ವಹಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಇತರ ಜಲಾಶಯಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯದ ಪ್ರಮುಖ 14 ಜಲಾಶಯಗಳು 895.62 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಆದರೆ, ಸದ್ಯಕ್ಕೆ 193.06 ಟಿಎಂಸಿ ಅಡಿ (ಶೇ 22) ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಗೆ 236.18 ಟಿಎಂಸಿ ಅಡಿ ಸಂಗ್ರಹವಿತ್ತು. ಈ ಜಲಾಶಯಗಳಿಗೆ ನಿತ್ಯ 658 ಕ್ಯೂಸೆಕ್‌ ಒಳಹರಿವು ಇದ್ದರೆ, 13,749 ಕ್ಯೂಸೆಕ್‌ ಹೊರಹರಿವು ಇದೆ.

ಕಡಿಮೆ ನೀರು ಸಂಗ್ರಹವಿರುವ ಜಲಾಶಯಗಳಲ್ಲಿ ತುಂಗಭದ್ರಾ ಮುಂದಿದ್ದರೆ, ಸೂಪಾ, ವಾರಾಹಿ, ಭದ್ರಾ ನಂತರದ ಸ್ಥಾನದಲ್ಲಿವೆ. ವಾಣಿವಿಲಾಸ ಸಾಗರ, ನಾರಾಯಣಪುರ ಜಲಾಶಯಗಳಲ್ಲಿ ಹೆಚ್ಚಿನ ಸಮಸ್ಯೆಯಿಲ್ಲ.

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ಬತ್ತಿದೆ– ಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ಬತ್ತಿದೆ– ಪ್ರಜಾವಾಣಿ ಚಿತ್ರ

ಈಗ ಲಭ್ಯವಿರುವ ನೀರು ಕುಡಿಯುವ ಉದ್ದೇಶಕ್ಕೆ ಇನ್ನೆರಡು ತಿಂಗಳಿಗೆ ಸಾಕಾಗಲಿದೆ. ಆದರೆ ಜನರೂ ಜಾಗರೂಕತೆಯಿಂದ ಬಳಸಿ ಸಹಕರಿಸಬೇಕು.

–ವಿವೇಕ ಮುದಿಗೌಡರ ಕಾರ್ಯನಿರ್ವಾಹಕ ಎಂಜಿನಿಯರ್‌ ನವಿಲುತೀರ್ಥ ಜಲಾಶಯ

ತುಂಗಭದ್ರಾ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರಿನ ಸಂಗ್ರಹ ಇಲ್ಲದಿದ್ದರೆ ಎರಡನೇ ಬೆಳೆಗೆ ನೀರು ಹರಿಸಲು ಅಸಾಧ್ಯ. ಈ ಬಾರಿ 23 ಟಿಎಂಸಿ ಅಡಿ ನೀರು ಮಾತ್ರ ಇತ್ತು

-ಎಂ.ಎಸ್.ಗೋಡೇಕರ್‌ ಇಇ ಕರ್ನಾಟಕ ನೀರಾವರಿ ನಿಗಮ ವಡ್ಡರಹಟ್ಟಿ ವಿಭಾಗ

ಜಲಾಶಯಗಳಲ್ಲಿ ನೀರಿನ ಮಟ್ಟ (ಮೇ 9ರವರೆಗೆ) (ಟಿಎಂಸಿನಲ್ಲಿ)

ಜಲಾಶಯ;ನೀರು ಸಂಗ್ರಹ ಸಾಮರ್ಥ್ಯ;ಲಭ್ಯವಿರುವ ನೀರು;ಕಳೆದ ವರ್ಷ ಲಭ್ಯವಿದ್ದ ನೀರು; ಈಗಿನ ಸಾಮರ್ಥ್ಯ ಶೇ ಲಿಂಗನಮಕ್ಕಿ;151.75;17.78;26.49;12 ಸೂಪಾ;145.33;38.03;50.50;26ವಾರಾಹಿ;31.10;4.57;3.49;15ಹಾರಂಗಿ;8.50;2.97;2.67;35ಹೇಮಾವತಿ;37.10;9.22;17.57;25ಕೆಆರ್‌ಎಸ್‌;49.45;10.78;13.27;22ಕಬಿನಿ;19.52;6.63;4.69;34ಭದ್ರಾ;71.54;13.34;29.55;19ತುಂಗಭದ್ರಾ;105.79;3.43;2.83;3ಘಟಪ್ರಭಾ;51.00;15.51;7.98;30ಮಲಪ್ರಭಾ;37.73;8.02;9.80;21ಆಲಮಟ್ಟಿ;123.08;30.14;24.57;24ನಾರಾಯಣಪುರ;33.31;15.70;16.18;47ವಾಣಿವಿಲಾಸ ಸಾಗರ;30.42;16.94;26.61;56

ಭತ್ತದ ಕಣಜಕ್ಕೆ ಹೊಡೆತ

ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ರಾಯಚೂರು ಮಸ್ಕಿ ಸಿರುವಾರ ದೇವದರ್ಗ ಇತರೆಡೆ ಈ ಬಾರಿ ಎರಡನೇ ಬೆಳೆಗೆ ನೀರು ಸಿಗಲೇ ಇಲ್ಲ. ಹೀಗಾಗಿ ಭತ್ತದ ಕೃಷಿ ನಡೆಯಲಿಲ್ಲ. ಇದರ ಜತೆಗೆ ಭತ್ತವನ್ನೇ ಅವಲಂಬಿಸಿರುವ ರೈಸ್‌ಮಿಲ್‌ಗಳಿಗೂ ಕೆಲಸ ಇಲ್ಲದಂತಾಯಿತು. ಇದರಿಂದ ಒಂದು ಇಡೀ ಋತುವಿನಲ್ಲಿ ರೈಸ್‌ಮಿಲ್‌ ಕಾರ್ಮಿಕರಿಗೂ ಕೆಲಸ ಇಲ್ಲದಂತಾಯಿತು ಎಂಬ ಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ ಈ ಭಾಗದ ರೈತರು ಮತ್ತು ಉದ್ಯಮಿಗಳು. ವಿಜಯನಗರ ಅರಸರ ಕಾಲದಲ್ಲೇ ನಿರ್ಮಾಣವಾದ ಹೊಸಪೇಟೆ ತಾಲ್ಲೂಕಿನ ರಾಯ ಬಸವ ಕಾಲುವೆಗಳಲ್ಲಿ 15 ದಿನ ನೀರು ಬಿಟ್ಟು ಇನ್ನುಳಿದ 15 ದಿನ ನೀರು ಸ್ಥಗಿತಗೊಳಿಸುವ ವಿಧಾನ ಅನುಸರಿಸಲಾಗಿದೆ. ಹೀಗಾಗಿ ವಾರ್ಷಿಕ ಬೆಳೆಗಳಾದ ಕಬ್ಬು ಬಾಳೆ ಗಿಡಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗಿದೆ. ತುಂಗಭದ್ರಾ ಜಲಾಶಯದಲ್ಲಿನ 2.5 ಟಿಎಂಸಿ ಅಡಿ ನೀರನ್ನು ಡೆಡ್‌ ಸ್ಟೋರೇಜ್‌ ಎಂದು ಪರಿಗಣಿಸಲಾಗಿದ್ದು ಹೊಸಪೇಟೆ ನಗರದ ಕುಡಿಯುವ ನೀರು ಮತ್ತು ಕೆಲವು ಕೈಗಾರಿಕೆಗಳ ಅಗತ್ಯದ ನೀರು ಪೂರೈಕೆ ಈ ಹಂತದಲ್ಲೂ ಸಾದ್ಯವಿದೆ ಎಂಬ ಸಮಾಧಾನ ಮಾತ್ರ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT