ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಕರ ಅಭಿಪ್ರಾಯ ಸಂಗ್ರಹಿಸಲು ಸೂಚನೆ

ಶೈಕ್ಷಣಿಕ ವರ್ಷದ ರೂಪುರೇಷೆ ರಚನೆ;
Last Updated 2 ಜೂನ್ 2020, 16:34 IST
ಅಕ್ಷರ ಗಾತ್ರ

ಬೆಳಗಾವಿ: ‘ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷವನ್ನು ಯಾವ ರೀತಿ ರೂಪಿಸಬೇಕೆನ್ನುವ ಅಭಿಪ್ರಾಯವನ್ನು ಪಾಲಕರಿಂದ ಸಂಗ್ರಹಿಸಲು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಇದೇ ತಿಂಗಳು 10ರಿಂದ 12ರೊಳಗೆ ತಮ್ಮ ತಮ್ಮ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಬೇಕು. ಈ ಅಭಿಪ್ರಾಯವನ್ನು ನಮಗೆ (ಸರ್ಕಾರ) ಕಳುಹಿಸಿಕೊಟ್ಟರೆ ಇದರ ಆಧಾರದ ಮೇಲೆ ಮುಂದಿನ ಶೈಕ್ಷಣಿಕ ವರ್ಷದ ರೂಪುರೇಷೆಗಳನ್ನು ತಯಾರಿಸಲಾಗುವುದು’ ಎಂದರು.

‘ಮುಖ್ಯವಾಗಿ ಎಲ್‌.ಕೆ.ಜಿ, ಯು.ಕೆ.ಜಿ ಹಾಗೂ ಪ್ರಾಥಮಿಕ ವಿಭಾಗ, ಹಿರಿಯ ಪ್ರಾಥಮಿಕ ವಿಭಾಗ ಹಾಗೂ ಪ್ರೌಢಶಾಲೆಗಳನ್ನು ಎಂದಿನಿಂದ ಆರಂಭಿಸಬೇಕು, ಶಾಲೆಗಳನ್ನು ಶಿಫ್ಟ್‌ ಪ್ರಕಾರ ನಡೆಸಬೇಕೇ ಅಥವಾ ದಿನ ಬಿಟ್ಟು ದಿನ ನಡೆಸಬೇಕೇ, ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದಿನನಿತ್ಯದ ಪ್ರಾರ್ಥನಾ ಸಭೆಯನ್ನು ಹೇಗೆ ಆಯೋಜಿಸಬೇಕು ಎನ್ನುವ ಕುರಿತು ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದ್ದೇನೆ’ ಎಂದು ಹೇಳಿದರು.

‘ಇದೇ ವಿಷಯವಾಗಿ ರಾಜ್ಯದ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ) ಕೂಡ ಸರ್ಕಾರಕ್ಕೆ ವರದಿ ನೀಡಲಿದೆ. ಈ ವರದಿ ಹಾಗೂ ಪಾಲಕರ ಅಭಿಪ್ರಾಯವನ್ನು ಪಡೆದು, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಶಿಕ್ಷಣಾಧಿಕಾರಿಗಳ ಜೊತೆ ಸಭೆ:

‘ಕೊರೊನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಕೈಗೊಳ್ಳಲು ಮತ್ತು ಮಕ್ಕಳಲ್ಲಿ ಪರೀಕ್ಷೆ ಬರೆಯುವ ಬಗ್ಗೆ ಆತ್ಮವಿಶ್ವಾಸ ಮೂಡಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಸಚಿವ ಎಸ್‌.ಸುರೇಶಕುಮಾರ್‌ ಶಿಕ್ಷಣಾಧಿಕಾರಿಗಳ ಸಭೆಯಲ್ಲಿ ಹೇಳಿದರು.

ಎಲ್ಲರಿಗೂ ಸ್ಮಾರ್ಟ್ ಫೋನ್ ಅಥವಾ ನೆಟವರ್ಕ್ ಸಿಗದಿರುವುದರಿಂದ ಮನೆ ಮನೆಗೆ ತೆರಳಿ ಪಾಠ ಮಾಡುವುದರ ಜತೆಗೆ ಗ್ರಾಮದ ದೊಡ್ಡ ಮನೆ ಅಥವಾ ಕಟ್ಟಡಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು "ವಠಾರ ಶಾಲೆ" ನಡೆಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಉಚಿತ ಸ್ಯಾನಿಟೈಸರ್, ಮಾಸ್ಕ್‌:

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್‌ ಪೂರೈಸಲಾಗುವುದು. ಪರೀಕ್ಷಾ ಕೇಂದ್ರದ ಎಲ್ಲ ಶಿಕ್ಷಕರು, ಸಿಬ್ಬಂದಿ ಕೈಗವಸ ಹಾಕಿಕೊಳ್ಳಬೇಕು. ಪ್ರತಿ ಇನ್ನೂರು ಮಕ್ಕಳಿಗೆ ಒಂದು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಂಟೈನ್ಮೆಂಟ್‌ ವಲಯದಲ್ಲಿ ಇಲ್ಲ:

‘ಕಂಟೈನ್ಮೆಂಟ್‌ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿಲ್ಲ. ಈ ವಲಯದಲ್ಲಿದ್ದ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಪರೀಕ್ಷೆಯ ಹಿಂದಿನ ದಿನ ಕಂಟೈನ್ಮೆಂಟ್‌ ವಲಯವಾದರೆ, ಈ ಪ್ರದೇಶಗಳ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಸಮುದಾಯ ಭವನ ಮತ್ತಿತರ ಕಡೆಗಳಲ್ಲಿ ಗುಂಪು ಅಧ್ಯಯನಕ್ಕೆ ಅನುಕೂಲ ಆಗುವಂತೆ ರಾತ್ರಿ ವೇಳೆ ಪಾಠ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಗ್ರಾಮಗಳ ಗ್ರಂಥಾಲಯಗಳನ್ನು ’ಓದುವ ಮನೆ’ಯಾಗಿ ಪರಿವರ್ತಿಸುವ ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಸಿದ್ದಲಿಂಗಯ್ಯ ಹಿರೇಮಠ, ಬೆಳಗಾವಿ ಡಿಡಿಪಿಐ ಎ.ಬಿ‌.ಪುಂಡಲೀಕ, ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT