ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಂಕಷ್ಟದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿರುವ ಸೋಂಕಿತ ಸರ್ಕಾರವಿದು: ಡಿಕೆಶಿ

ಜಿಲ್ಲಾ ‘ಕಾಂಗ್ರೆಸ್‌ ಭವನ’ ಉದ್ಘಾಟನೆ
Last Updated 2 ಅಕ್ಟೋಬರ್ 2020, 15:13 IST
ಅಕ್ಷರ ಗಾತ್ರ

ಬೆಳಗಾವಿ: ‘ಕೊರೊನಾ ಸಂಕಷ್ಟದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿರುವ ಸೋಂಕಿತ ಸರ್ಕಾರವಿದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದರು.

ಇಲ್ಲಿ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ನಿರ್ಮಿಸಿರುವ ಕಾಂಗ್ರೆಸ್‌ ಜಿಲ್ಲಾ ಘಟಕದ ಕಚೇರಿ ‘ಕಾಂಗ್ರೆಸ್‌ ಭವನ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಚಳವಳಿ ಅ. 3ರಿಂದ ಆರಂಭವಾಗಲಿದೆ. ರಾಜ್ಯದಿಂದ ಕನಿಷ್ಠ 50 ಲಕ್ಷ ಮಂದಿ ರಾಷ್ಟ್ರಪತಿಗೆ ಪತ್ರ ಕಳುಹಿಸಬೇಕು. ಈ ಸರ್ಕಾರಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು’ ಎಂದು ಹೇಳಿದರು.

‘ಅದ್ಭುತವಾದ ಭವನ ನಿರ್ಮಾಣಕ್ಕೆ ಹೆಚ್ಚಿನ ಶ್ರಮ ವಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ದೊಡ್ಡ ನಮಸ್ಕಾರ ಹೇಳುತ್ತೇನೆ’ ಎಂದು ಶ್ಲಾಘಿಸಿದರು.

ನಿರ್ಲಕ್ಷ್ಯ ಸಲ್ಲದು:

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆ. 2-3 ಜಿಲ್ಲೆ ಮಾಡಬಹುದಾದಷ್ಟು ದೊಡ್ಡದು. ಆದರೆ, ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ನವರ ಕಾಟದಿಂದಾಗಿ ನಾವು ವಿಭಜನೆಗೆ ಮುಂದಾಗಲಿಲ್ಲ’ ಎಂದು ತಿಳಿಸಿದರು.

‘ಕೋವಿಡ್–19 ದೊಡ್ಡ ರೋಗ. ಅದರೊಂದಿಗೆ ನಾವು ಬದುಕಬೇಕು. ಹೀಗಾಗಿ ಮಾಸ್ಕ್ ಧರಿಸುವುದು ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಲಕ್ಷ್ಯ ಸಲ್ಲದು’ ಎಂದು ಸಲಹೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಮನೆ ಮನೆಗೆ ಮುಟ್ಟಿಸಬೇಕು. ಕಾರ್ಯಕರ್ತರು ಚುನಾವಣಾ ಯೋಧರಾಗಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಹಾಗೆಂದು ಸುಮ್ಮನಿರಬಾರದು. ಈ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಬೇಕು’ ಎಂದು ತಿಳಿಸಿದರು.

ಸಂದೇಹವಿಲ್ಲ:

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ನಾನು ಜಿಲ್ಲಾ ಘಟಕದ ಅಧ್ಯಕ್ಷೆಯಾಗಿದ್ದಾಗ ಕಾಮಗಾರಿಗೆ ಚಾಲನೆ ನೀಡಿದ್ದೆ. ಅದನ್ನು ಸತೀಶ ಜಾರಕಿಹೊಳಿ ಪೂರ್ಣ ಮಾಡಿದ್ದಾರೆ. ಮುಂಚೂಣಿ ಘಟಕದವರಿಗೆ ಪ್ರತ್ಯೇಕ ಚೇಂಬರ್‌ ಮಾಡಿಸಿದ್ದಾರೆ. ಈ ರೀತಿಯ ನಾಯಕರಿದ್ದರೆ ಪಕ್ಷ ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ’ ಎಂದರು.

ಸದ್ಬಳಕೆ ಮಾಡಿಕೊಳ್ಳಿ:

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ, ‘ಈ ಭವನವನ್ನು ಕಾರ್ಯಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು. ಮುಂಚೂಣಿ ಘಟಕದವರು ನಿತ್ಯ ಚಟುವಟಿಕೆ ನಡೆಸಿ, ಪಕ್ಷ ಬಲಪಡಿಸಬೇಕು’ ಎಂದು ಸೂಚಿಸಿದರು.

‘ಹಣ ಖರ್ಚು ಮುಖ್ಯವಲ್ಲ. ಪಕ್ಷ ಗುರಿ ಮುಟ್ಟುವುದು ಮುಖ್ಯ ನನಗೆ. ನವೆಂಬರ್‌ನಿಂದ ರಾಜ್ಯದಾದ್ಯಂತ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ಡಾ.ಅಂಜಲಿ ನಿಂಬಾಳ್ಕರ್, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮುಖಂಡರಾದ ಐ‌.ಜಿ. ಸನದಿ, ವೀರಣ್ಣ ಮತ್ತಿಕಟ್ಟಿ, ಫಿರೋಜ್ ಸೇಠ್, ಅಶೋಕ ಪಟ್ಟಣ, ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಮಾಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT