ಗುರುವಾರ , ಮಾರ್ಚ್ 30, 2023
24 °C

ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಚೇರಿ ರದ್ದತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಚೇರಿ ರದ್ದತಿಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೋಮವಾರ ಪತ್ರ ಬರೆದಿದೆ.

‘ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣೆ ಸಮಿತಿಯು ಕೆಲವೊಂದು ಮಹತ್ವದ ಶಿಫಾರಸುಗಳ ವರದಿಯನ್ನು ಸಲ್ಲಿಸಿದೆ. ಮೊದಲ ಹಂತದಲ್ಲಿ ಕಂದಾಯ, ಆಹಾರ ಮತ್ತು ರಸ್ತೆ ಸಾರಿಗೆ ಇಲಾಖೆಗಳ ಬಗ್ಗೆ ಸಲಹೆಗಳನ್ನು ನೀಡಿದ್ದು ಇವುಗಳಲ್ಲಿ ಕೆಲವು ಜನಪರವಾಗಿವೆ. ಕೆಲವು ಜನ ವಿರೋಧಿಯಾಗಿವೆ. ಇವುಗಳನ್ನು ತೀವ್ರವಾಗಿ ಹಾಗೂ ಸಕಾರಣವಾಗಿ ವಿರೋಧಿಸುತ್ತೇವೆ’ ಎಂದು ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.

‘ರಾಜ್ಯದ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ರಾಜ್ಯ ಮಟ್ಟದಲ್ಲಿ ಕಂದಾಯ ಸಚಿವಾಲಯ ರಚಿಸಬೇಕೆಂಬ ಶಿಫಾರಸು ಸಂವಿಧಾನದ ಮೂಲ ತತ್ವವಾದ ಅಧಿಕಾರ ವಿಕೇಂದ್ರಿಕರಣದ ವಿರೋಧಿಯಾಗಿದೆ. ಇಂತಹ ಕ್ರಮವು ಜನರಿಗಾಗಲಿ, ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತಕ್ಕಾಗಲಿ ಅನುಕೂಲಕರವಲ್ಲ. ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರಿನಿಂದ ಹೊರಗೆ ಹೋಗಲು ಇಚ್ಛಿಸುವದಿಲ್ಲವೆಂಬ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಈ ಹಿಂದೆ ಅಸ್ತಿತ್ವದಲ್ಲಿದ್ದ ವಿಭಾಗಾಧಿಕಾರಿಗಳ ಕಚೇರಿ ರದ್ದುಗೊಳಿಸಲಾಗಿತ್ತು. ಅವುಗಳಿಗೆ ಅಧಿಕ ಅಧಿಕಾರಗಳಿದ್ದವು. ನಂತರ ಮತ್ತೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಸ್ಥಾಪಿಸಲಾಯಿತು. ಆದರೆ, ಈ ಕಚೇರಿಗಳಿಗೆ ಹೆಚ್ಚಿನ ಅಧಿಕಾರ ನೀಡಿಲ್ಲ. ಪ್ರಾದೇಶಿಕ ಆಯುಕ್ತರಿಗೆ ಸದ್ಯ ಏಳೆಂಟು ಜಿಲ್ಲೆಗಳು ಬರುತ್ತವೆ. ಇದರ ಬದಲಿಗೆ ಮೂರ್ನಾಲ್ಕು ಜಿಲ್ಲೆಗಳಿಗೆ ಒಂದರಂತೆ ಕಚೇರಿಗಳನ್ನು ಸ್ಥಾಪಿಸಿ ಜಿಲ್ಲಾಧಿಕಾರಿ ಮೇಲೆ ಮೇಲುಸ್ತುವಾರಿ ಹಾಗೂ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸುವ ಅಧಿಕಾರ ಹಾಗೂ ಹೊಣೆಗಾರಿಕೆಯನ್ನು ಕೊಡಬೇಕು. ಅಲ್ಲದೇ ವಿಭಾಗಾಧಿಕಾರಿ ಮಟ್ಟದಲ್ಲಿ ಕಂದಾಯ ನ್ಯಾಯಾಲಯ ಸ್ಥಾಪಿಸಬೇಕು. ಇದರಿಂದ ಜನರು ತಮ್ಮ ಕಂದಾಯ ಪ್ರಕರಣಗಳ ಸಲುವಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ’ ಎಂದು ಸಲಹೆ ನೀಡಿದ್ದಾರೆ.

‘ವಿಧಾನಸೌಧದಲ್ಲಿರುವ ಪ್ರಮುಖ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವ ಕುರಿತು ಸರ್ಕಾರವು ಗಂಭೀರ ಚಿಂತನೆ ನಡೆಸಿರುವಾಗ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ಬೆಂಗಳೂರಿನಲ್ಲಿ ಕೇಂದ್ರಿಕರಣಗೊಳಿಸುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ಈ ಸಂಬಂಧದ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬಾರದು’ ಎಂದು ಒತ್ತಾಯಿಸಿದ್ದಾರೆ.

‘800ಕ್ಕೂ ಹೆಚ್ಚು ಸೇವೆಗಳನ್ನು ಸೇವಾ ಸಿಂಧು ಎನ್ನುವ ಒಂದೇ ಜಾಲತಾಣ ಹಾಗೂ ತಂತ್ರಾಂಶ ನೀಡುವ, ಆಹಾರ ಧಾನ್ಯಗಳನ್ನು ಮನೆಯ ಬಾಗಿಲಿಗೆ
ತಲುಪಿಸುವ ಯೋಜನೆ, ಜನಸಂಖ್ಯೆ ರಹವಾಸ, ಬೆಲೆ ಹಾಗೂ ರೈತಾಪಿ ಪತ್ರಗಳ ರದ್ದತಿ, ರಸ್ತೆ ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ ವಾಹನಗಳನ್ನು ಮಾರಲು ನ್ಯಾಯಾಲಯದ ಅನುಮತಿಗೆ ಕಾಯುವುದು ಬೇಡ ಎನ್ನುವ ಶಿಫಾರಸುಗಳು ಸ್ವಾಗತಾರ್ಹವಾಗಿವೆ. ಆದರೂ ಎಲ್ಲ ಶಿಫಾರಸುಗಳನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಜನರಿಂದ ಸಲಹೆ–ಸೂಚನೆಗಳನ್ನು ಪಡೆದ ನಂತರವೇ ಶಿಫಾರಸುಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು