ಶುಕ್ರವಾರ, ಏಪ್ರಿಲ್ 3, 2020
19 °C

‘ಮಹಿಳೆಯರ ಬಗ್ಗೆ ಅಸಡ್ಡೆ ಸಲ್ಲದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ದುಡಿಯುವ ಮಹಿಳೆಯರು ಇತರ ಮಹಿಳೆಯರ ಬಗ್ಗೆ ಅಸಡ್ಡೆಯ ಭಾವನೆ ಇಟ್ಟುಕೊಳ್ಳಬಾರದು. ಅವರು ಅಂದುಕೊಂಡಿದ್ದನ್ನು ಸಾಧಿಸಲು ಯಾವ ತೊಂದರೆ ಇದೆಯೋ ಏನೋ?’ ಎಂದು ಶಿಕ್ಷಣ ತಜ್ಞೆ ಬಿಂಬಾ ನಾಡಕರ್ಣಿ ಹೇಳಿದರು.

ಇಲ್ಲಿನ ಕೆಎಲ್‌ಎಸ್‌ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸೋಮವಾರ ನಡೆದ ‘ಗರಿಮೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ವರ್ಷದ ಒಂದು ದಿನ ಮಾತ್ರ ಮಹಿಳೆಯನ್ನು ಗೌರವಿಸುವುದು ಸಲ್ಲದು. ಮಹಿಳಾ ದಿನದ ಹಿಂದಿನ ಸತ್ವವನ್ನು ವರ್ಷವಿಡೀ ನೆನೆಯಬೇಕು. ಮಹಿಳೆಯರಿಗೆ ಸದಾ ಗೌರವ ನೀಡಬೇಕು’ ಎಂದರು.

‘ವ್ಯಕ್ತಿ ತನ್ನ ಮನೋಭಾವ ಬದಲಾಯಿಸಿಕೊಳ್ಳುವುದರಿಂದ ಜೀವನವನ್ನೇ ಬದಲಿಸಿಕೊಳ್ಳಬಹುದು. ಇದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ಸನ್ಮಾನಿತರಾದ ಉರಗ ಸಂರಕ್ಷಕಿ ನಿರ್ಜರಾ ಚಿಟ್ಟಿ ಮಾತನಾಡಿ, ‘ದೇಶದಲ್ಲೇ ಅತಿ ಹೆಚ್ಚು ಹಾವು ಹಿಡಿದು ಅವುಗಳನ್ನು ಅರಣ್ಯ ಪ್ರದೇಶಗಳಿಗೆ ಮರಳಿಸಿದ ಮಹಿಳೆಯರಲ್ಲಿ ನಾನು ಮೊದಲಿಗಳು. ಪತಿ ಆನಂದ ಚಿಟ್ಟಿ ಐದು ವರ್ಷ ತರಬೇತಿ ನೀಡಿದರು. ನಾನು ಎಂಟು ವರ್ಷಗಳಿಂದ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದೇನೆ. ಪುರುಷರು ಮನೆಯಲ್ಲಿರುವ ಮಹಿಳೆಯರಿಗೆ ಬೆಂಬಲ ನೀಡಬೇಕು. ಅವರ ಆಯ್ಕೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

ಸನ್ಮಾನ ಸ್ವೀಕರಿಸಿದ ಯುವ ಛಾಯಾಗ್ರಾಹಕಿ ತೃಪ್ತಿ ಕಾಮತ್‌, ‘ಕೆಲವು ಕೆಲಸಗಳನ್ನು ಪುರುಷರು ಮಾತ್ರ ಮಾಡಬಹುದು; ಮಹಿಳೆಯರು ಮಾಡಬಾರದು ಎಂಬ ತಪ್ಪು ಕಲ್ಪನೆಗಳು ಸಮಾಜದಲ್ಲಿವೆ. ಇವುಗಳಿಗೆ ನಾವು ಒಳಗಾಗಬಾರದು. ಕೆಲಸದಿಂದ ಜನ ನಮ್ಮನ್ನು ಗುರುತಿಸುವಂತಾಗಬೇಕು. ಇಷ್ಟವಾದ ಕ್ಷೇತ್ರ ಆಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ಅನಿಲ ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಡಾ.ಪ್ರಸನ್ನ ಕುಮಾರ ಹಾಗೂ ಸ್ವಯಂಸೇವಕ ಪವನ ನಾಯಕ ವಿದ್ಯಾರ್ಥಿಗಳಿಗೆ ತಂಬಾಕು ನಿಷೇಧದ ಪ್ರಮಾಣ ಬೋಧಿಸಿದರು.

ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಪರಬ ಸ್ವಾಗತಿಸಿದರು. ಪ್ರಿಯಾಂಕಾ ರಾಠಿ ಪರಿಚಯಿಸಿದರು. ಮೇಘಾ ಸೋಮಣ್ಣನವರ ನಿರೂಪಿಸಿದರು. ಅನುಜಾ ಬೆಳಗಾಂವಕರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)