ಗುರುವಾರ , ಮಾರ್ಚ್ 4, 2021
30 °C

ರಂಗ ಕೌಶಲ ವೃದ್ಧಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಲೆ ಕಲಿತು ಅದರಲ್ಲಿ ಮಗ್ನರಾದರೆ ಪರಿಪೂರ್ಣ ಕಲಾವಿದರಾಗಲು ಸಾಧ್ಯವಾಗುತ್ತದೆ. ಕೌಶಲವಿದ್ದರೆ ಎಲ್ಲಿ ಬೇಕಾದರೂ ಅಭಿನಯ ಮಾಡಬಹುದಾಗಿದೆ’ ಎಂದು ಚಲನಚಿತ್ರ ನಟ ಎಂ.ಕೆ. ಮಠ ಅಭಿಪ್ರಾಯಪಟ್ಟರು.

ನಗರದಲ್ಲಿ ಯುವ ರಂಗ ಸಾಂಸ್ಕೃತಿಕ ಸಂಸ್ಥೆಯಿಂದ ಹಮ್ಮಿಕೊಂಡಿರುವ ಉಚಿತ ಅಭಿನಯ ತರಬೇತಿ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ದೊಡ್ಡ ಅಥವಾ ಸಣ್ಣ ಕಲಾವಿದರು ಎಂಬುದು ಇಲ್ಲ. ನಾವೆಲ್ಲರೂ ಕಲೆಯ ಆರಾಧಾಕರು. ಆ ರೀತಿ ವ್ಯತ್ಯಾಸ ಮಾಡುವುದು ದೊಡ್ಡ ತಪ್ಪು. ರಂಗಭೂಮಿಯಿಂದ ಮನಸ್ಸು, ಭಾಷೆ ಹಾಗೂ ಆಂಗಿಕ ಶುದ್ಧಿ ಆಗುತ್ತದೆ. ಅದು ಕಲಿಸಿಕೊಡುವ ಜ್ಞಾನ ಮತ್ತೆಲ್ಲೂ ಸಿಗುವುದಿಲ್ಲ’ ಎಂದರು.

‘ಯಾವ ಕಲಾವಿದರೂ ಪರಿಪೂರ್ಣ ಆಗಿರುವುದಿಲ್ಲ. ನಾನು ಇನ್ನೂ ಕಲಿಯಬೇಕಿದೆ. ಸಿನಿಮಾ ರಂಗಕ್ಕೂ ರಂಗಭೂಮಿಗೂ ಬಹಳ ವ್ಯತ್ಯಾಸವಿದೆ. ಸಿನಿಮಾ ಲೋಕ ಭ್ರಮಾಲೋಕ. ರಂಗಭೂಮಿ ವಾಸ್ತವ. ಇಲ್ಲಿ ಅಭಿನಯ ಕಲಿತು ಸಿನಿಮಾ ನಟನಾಗುತ್ತೇನೆ ಎಂಬ ಭ್ರಮೆಯಲ್ಲಿ ಬರಬಾರದು’ ಎಂದು ಕಿವಿಮಾತು ಹೇಳಿದರು.

ಪತ್ರಕರ್ತ ಮುರುಗೇಶ ಶಿವಪೂಜಿ, ‘ಸಿನಿಮಾ ಲೋಕದಲ್ಲಿ ಬೆಳೆಯಬೇಕಾದರೆ ರಂಗಭೂಮಿ ಬುನಾದಿಯಾಗಿದೆ. ಇಲ್ಲಿ ಆಸಕ್ತಿಯಿಂದ ನಟನಾ ಕೌಶಲ ಕಲಿಯಯವುದು ಅಗತ್ಯವಿದೆ’ ಎಂದರು.

ರಂಗ ನಿರ್ದೇಶಕ ಬಾಬಾಸಾಹೇಬ ಕಾಂಬಳೆ, ‘ತಿಂಗಳವರೆಗೆ ನಡೆಯಲಿರುವ ಈ ಶಿಬಿರದಲ್ಲಿ 20 ಮಂದಿ ಭಾಗವಹಿಸಿದ್ದಾರೆ. ‘ಸಂತ ಶಿಶುನಾಳ ಷರೀಫ’ ನಾಟಕ ಪ್ರಸ್ತುತಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಪತ್ರಕರ್ತ ಭೈರೋಬಾ ಕಾಂಬಳೆ, ‘ಅಭಿನಯವನ್ನು ಆಸಕ್ತಿಯಿಂದ ಕಲಿತು ಉತ್ತಮ ಕಲಾವಿದರಾಗಲು ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ’ ಎಂದರು.

ರಂಗ ಸಂಘಟಕ ಬಸವರಾಜ ತಳವಾರ, ಜೀವನ್ಮುಖಿ ಪ್ರತಿಷ್ಠಾನದ ಕಿರಣಕುಮಾರ ಪಾಟೀಲ, ಸಂಗಮಿತ್ರಾ ಕಾಂಬಳೆ, ವಿಷ್ಣು ಕಾಮಕರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು