ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಬರ: ಮೀನಿನ ಮರಿ ಬಿತ್ತನೆ, ಮೀನಿನ ಉತ್ಪಾದನೆ ಕುಸಿತ

ಮೀನುಗಾರಿಕೆ ಮೇಲೂ ಬರದ ಎಫೆಕ್ಟ್‌: ಮೀನಿನ ಮರಿ ಬಿತ್ತನೆ, ಮೀನಿನ ಉತ್ಪಾದನೆಯೂ ಕುಸಿತ
Published 7 ಫೆಬ್ರುವರಿ 2024, 4:27 IST
Last Updated 7 ಫೆಬ್ರುವರಿ 2024, 4:27 IST
ಅಕ್ಷರ ಗಾತ್ರ

ಬೆಳಗಾವಿ: ವರುಣ ಕೈಕೊಟ್ಟಿದ್ದರಿಂದ ಈ ಬಾರಿ ತಲೆದೋರಿದ ‘ಬರ’ದ ಪರಿಸ್ಥಿತಿ ಮೀನುಗಾರಿಕೆಗೂ ಹೊಡೆತ ನೀಡಿದೆ. ಕೆರೆಗಳಲ್ಲಿ ನೀರಿಲ್ಲದ್ದರಿಂದ ಮೀನಿನ ಮರಿ ಬಿತ್ತನೆ ಮತ್ತು ಉತ್ಪಾದನೆ ಪ್ರಮಾಣ ಕುಸಿತ ಕಂಡಿದೆ. ಮೀನು ಸಾಕಾಣಿಕೆಯನ್ನೇ ಆಶ್ರಯಿಸಿಕೊಂಡಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳನ್ನು ಒಳಗೊಂಡ ಮೀನುಗಾರಿಕೆ ಇಲಾಖೆಯ ಬೆಳಗಾವಿ ವಲಯದಲ್ಲಿ 2023–24ನೇ ಸಾಲಿನಲ್ಲಿ 785 ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆಗೆ ಗುರಿ ಹೊಂದಲಾಗಿತ್ತು. ಆದರೆ, ನೀರಿನ ಅಭಾವದಿಂದ 522 ಕೆರೆಗಳಲ್ಲಷ್ಟೇ ಬಿತ್ತನೆ ಪ್ರಕ್ರಿಯೆ ನಡೆದಿದೆ. ಹಾವೇರಿಯಲ್ಲಿ ಅತಿ ಹೆಚ್ಚು(179) ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆಯಾಗಿದ್ದರೆ, ಗದಗದಲ್ಲಿ ಅತಿ ಕಡಿಮೆ(34) ಕೆರೆಗಳಲ್ಲಿ ಬಿತ್ತನೆಯಾಗಿದೆ. ಧಾರವಾಡದಲ್ಲಿ 105, ವಿಜಯಪುರದಲ್ಲಿ 48, ಬಾಗಲಕೋಟೆಯಲ್ಲಿ 34 ಕೆರೆಗಳಲ್ಲಿ ಮೀನಿನ ಮರಿ ಬಿತ್ತಲಾಗಿದೆ.

70 ಸಾವಿರ ಟನ್‌ ಉತ್ಪಾದನೆ: 2022–23ರಲ್ಲಿ 618 ಕೆರೆಗಳಲ್ಲಿ 3.33 ಕೋಟಿ ಮೀನಿನ ಮರಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 1.03 ಲಕ್ಷ ಟನ್‌ ಮೀನಿನ ಉತ್ಪಾದನೆಯಾಗಿತ್ತು. ಈ ಸಲ 4.47 ಕೋಟಿ ಮೀನಿನ ಮರಿ ಬಿತ್ತಿ, 1.26 ಲಕ್ಷ ಟನ್‌ ಮೀನು ಉತ್ಪಾದನೆಯ ಗುರಿ ಹೊಂದಿದ್ದು, ಈವರೆಗೆ 3.13 ಕೋಟಿ ಮರಿ ಬಿತ್ತನೆ ಮಾಡಲಾಗಿದೆ. 70 ಸಾವಿರ ಟನ್ ಮೀನು ಉತ್ಪಾದನೆ ಮಾಡಲಾಗಿದೆ. ಪ್ರಸಕ್ತ ವರ್ಷ ಮುಗಿಯಲು ಎರಡು ತಿಂಗಳಷ್ಟೇ ಇದ್ದು, ಮೀನಿನ ಮರಿ ಉತ್ಪಾದನೆಯಲ್ಲಿ ಈವರೆಗೆ ಶೇ 55ರಷ್ಟು ಸಾಧನೆಯಾಗಿದೆ.

ಯಾವ್ಯಾವ ತಳಿ?: ‘ಕೆರೆ ಸಹಕಾರಿ ಸಂಘದವರು ಕೆಲವು ಕೆರೆಗಳನ್ನು ಮೀನುಗಾರಿಕೆಗೆ ಬಳಸಿಕೊಂಡರೆ, ಇನ್ನೂ ಕೆಲವು ಕೆರೆಗಳನ್ನು ಇ–ಟೆಂಡರ್‌ ಮೂಲಕ ಹಲವರು ಗುತ್ತಿಗೆಗೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯದ ಯೋಜನೆ, ಬೆಳಗಾವಿಯ ಹಿಡಕಲ್‌ನ ಘಟಪ್ರಭಾ ಮೀನು ಮರಿ ಉತ್ಪಾದನೆ ಕೇಂದ್ರ, ಧಾರವಾಡ ಜಿಲ್ಲೆಯ ನೀರಸಾಗರ ಮೀನು ಮರಿ ಪಾಲನಾ ಕೇಂದ್ರ ಮತ್ತಿತರ ಕಡೆಯಿಂದ ಕಾಟ್ಲಾ, ರೋಹು, ಮೃಗಾಲ, ಹುಲ್ಲುಗೆಂಡೆ, ಬೆಳ್ಳಿ ಗೆಂಡೆ, ಸಾಮಾನ್ಯ ಗೆಂಡೆ ತಳಿಯ ಮೀನಿನ ಮರಿ ತಂದು ಬಿತ್ತನೆ ಮಾಡಿದ್ದಾರೆ. ‍ಜಲವಿಸ್ತೀರ್ಣ ಆಧರಿಸಿ ಕೆರೆಗಳ ಗುತ್ತಿಗೆಗೂ ದರ ನಿಗದಿಗೊಳಿಸಲಾಗಿದೆ. ಬರದ ಪರಿಸ್ಥಿತಿಯಿಂದಾಗಿ ನಿರೀಕ್ಷಿಸಿದಷ್ಟು ಮೀನಿನ ಮರಿ ಉತ್ಪಾದನೆಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪಿ.ಸುಧೀರ
ಪಿ.ಸುಧೀರ
ಬರದ ಮಧ್ಯೆಯೂ ಹಲವು ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆ ಮಾಡಿದ್ದೇವೆ. ಉತ್ಪಾದನೆ ಪ್ರಮಾಣವೂ ಅಷ್ಟೊಂದು ಅಪಾಯಕಾರಿಯಾಗಿಲ್ಲ. ಮೀನುಗಾರರಿಗೆ ವಿವಿಧ ಯೋಜನೆ ತಲುಪಿಸುತ್ತಿದ್ದೇವೆ
ಪಿ.ಸುಧೀರ ಜಂಟಿನಿರ್ದೇಶಕ ಮೀನುಗಾರಿಕೆ ಇಲಾಖೆ ಬೆಳಗಾವಿ ವಲಯ
ಳೆದ ವರ್ಷ ಉತ್ಪಾದನೆಯಾದ ಮೀನುಗಳಿಂದ ಉತ್ತಮ ಆದಾಯ ಕೈಗೆಟುಕಿತ್ತು. ಈ ಸಲ ಹಲವು ಕೆರೆಗಳಲ್ಲಿ ನೀರಿಲ್ಲದೆ ಉತ್ಪಾದನೆ ಕುಸಿದಿದೆ
ಅಣ್ಣಾಸಾಬ ಭೋವಿ ಅಧ್ಯಕ್ಷ ವೇದಗಂಗಾ ಮೀನುಗಾರರ ರೈತ ಉತ್ಪಾದಕರ ಕಂಪನಿ ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT