ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಅರಭಾವಿ ದುರದುಂಡೀಶ್ವರರ ಜಾತ್ರೆ ಸಂಭ್ರಮ

ಏ.2ರಿಂದ 4ರವರೆಗೆ ವಿವಿಧ ಕಾರ್ಯಕ್ರಮ
Last Updated 1 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಜಾತ್ರೆಯು ಏ. 2ರಿಂದ 4ರವರೆಗೆ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ನಡೆಯಲಿದೆ.

ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶ್ರೀಮಠದ ನೂತನ ಮಹಾದ್ವಾರದ ಉದ್ಘಾಟನೆ, ಪಲ್ಲಕ್ಕಿ ಉತ್ಸವ, ಚಿಂತನ ಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕಲಾವಿದ ಜಿ.ಎ. ಪತ್ತಾರ ವಿರಚಿತ ‘ಶ್ರೀದುರದುಂಡೀಶ್ವರರ ಚಿತ್ರ ಸಂಪುಟ’ ಪುಸ್ತಕ ಬಿಡುಗಡೆ ಮಾಡಲಾಗುವುದು.

ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆ ಹೊಂದಿರುವ ಮಠಗಳಲ್ಲಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ ಪ್ರಮುಖವಾದುದು. ಜ್ಞಾನ, ವೈರಾಗ್ಯ ಹಾಗೂ ಭಕ್ತಿಯ ಪ್ರತೀಕವಾಗಿ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳೊಂದಿಗೆ ತ್ರಿವಿಧ ದಾಸೋಹದ ತಾಣವಾಗಿದೆ; ಭಾವೈಕ್ಯದ ಪ್ರತೀಕವಾಗಿದೆ.

ಐತಿಹ್ಯ:ದುರದುಂಡೀಶ್ವರರ ಮೂಲನಾಮ ಶಿವಲಿಂಗೇಶ್ವರರು ಎನ್ನುತ್ತದೆ ಪುರಾಣ. ಶಿವಲಿಂಗೇಶ್ವರರು ಬಾಲ್ಯದಲ್ಲೆ ವೈರಾಗ್ಯ ತಾಳಿ, ಹಿಮಾಲಯದಲ್ಲಿ ತಪಸ್ಸು ಮಾಡಿ ಲೋಕ ಸಂಚಾರ ಮಾಡುತ್ತಾ ಅರುಣಾಚಲದ ಕುಂಭಳೇಶ್ವರರ ಆಜ್ಞೆಯಂತೆ ಕರ್ನಾಟಕದ ಢಪಳಾಪೂರಕ್ಕೆ ಬಂದರು. ಅಲ್ಲಿ ಗುರುಲಿಂಗೇಶ್ವರರಿಂದ ಯೋಗಾಂಗ ಲಕ್ಷಣ, ಶಿವಯೋಗಿ ಸಿದ್ಧಾಂತವನ್ನು, ಅಂಗ ಲಿಂಗ ಸಾಮರಸ್ಯದ ಮೂಲ ಮೊದಲಾದ ವಿದ್ಯೆ ಕಲಿತರು. ಅಲ್ಲಿಂದ ತೇರದಾಳದ ಅಲ್ಲಮ ಪ್ರಭು ಆಶ್ರಮಕ್ಕೆ ಬಂದು ತತ್ವಾಲಾಪದಲ್ಲಿ ಕೆಲ ದಿನ ಕಳೆದರು. ಶ್ರೀಗಳ ಆಣತಿಯಂತೆ ಘಟಪ್ರಭಾ ನದಿ ತೀರದಲ್ಲಿರುವ (ಈಗಿನ ಗೋಕಾಕ ಫಾಲ್ಸ್) ಮಹಾಲಿಂಗಾಲಯಗಿರಿಗೆ ಬಂದು ನೆಲೆಸಿದರು. ಊರೂರು ಸಂಚರಿಸುತ್ತಾ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾ ಪಕ್ಕದ ದುರದುಂಡಿಯಲ್ಲಿ ಹರಿಯುತ್ತಿರುವ ಹಳ್ಳದ ಪ್ರದೇಶದಲ್ಲಿ ನೆಲೆಸಿದರು. ಶಿವಲಿಂಗೇಶ್ವರರು ಆದಿ ದುರದುಂಡೀಶ್ವರರಾದರು.

ತಪಸ್ಸಿಗಾಗಿ ದುರದುಂಡಿಯಿಂದ 4 ಮೈಲಿ ದೂರದಲ್ಲಿರುವ ದಟ್ಟಕಾನನ ಪ್ರದೇಶವಾಗಿದ್ದ ಅರಭಾವಿಗಿರಿಗೆ ಬಂದರು. ಶಿವ ಸಮಾಧಿಯಲ್ಲಿ ಲಿಂಗಲೀನರಾದ ಸ್ಥಳವೇ ಈಗಿನ ಅರಭಾವಿಯ ಶ್ರೀಮಠವಾಗಿದೆ.

ಆಕರ್ಷಕ ದೇವಸ್ಥಾನ:ಮೂಲ ದುರದುಂಡೀಶ್ವರರು ಶಿವ ಸಮಾಧಿ ಹೊಂದಿದ ಗದ್ದುಗೆಯು ಈಗ ಸುಂದರ ಶಿಲ್ಪಕಲಾ ಮಂದಿರವಾಗಿದೆ. ಸುಂದರ ಅಲಂಕೃತ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ. ಮಂದಿರದ ಪ್ರತಿ ಕಂಬವೂ 14 ಅಡಿ ಎತ್ತರ ಇವೆ. ಒಟ್ಟು 32 ಕಂಬಗಳಿವೆ. ಮಧ್ಯದಲ್ಲಿ ಮಂಟಪವಿದೆ. 8 ಅಡಿ ಚೌಕಾಕಾರದ ಗರ್ಭಗುಡಿ, ನಡುವೆ ಶಿವ ಜಂಗಮ ದುರದುಂಡೀಶ್ವರರ ಶೂನ್ಯ ಸಿಂಹಾಸನದ ರಜತ ಮಂಟಪದಲ್ಲಿ ಆದಿ ದುರದುಂಡೀಶ್ವರರ ಬೆಳ್ಳಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇಗುಲದ ಮುಂಭಾಗದ ಶಿಲ್ಪಾಕೃತಿಗಳು ಕಣ್ಮನ ಸೆಳೆಯುತ್ತವೆ. ಶಿಲೆಯಿಂದ ಮಹಾದ್ವಾರ ನಿರ್ಮಿಸಲಾಗಿದೆ. ಈಗಿನ 11ನೇ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಶ್ರೀಮಠದ ಪರಂಪರೆ ಮುಂದುವರಿಸಿಕೊಂಡು ಬರುತ್ತಿದ್ದು, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

*
ಸಿದ್ದಲಿಂಗ ಶ್ರೀಗಳು ‍ಪಿಯು, ಪದವಿ ಕಾಲೇಜು ಪ್ರಾರಂಭಿಸಿ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಪ್ರೇರಣೆಯಾಗಿದ್ದಾರೆ.
–ಸುರೇಶ್ ಮುದ್ದಾರ, ಪ್ರಾಚಾರ್ಯ, ಮಹಾಂತ ಶಿವಯೋಗಿ ಪದವಿ ಕಾಲೇಜು, ಅರಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT