ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಶಾಲೆಯತ್ತ ಸುಳಿಯದ 217 ಮಕ್ಕಳು

ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ, ದುಡಿಮೆಗಾಗಿ ಪಾಲಕರೊಂದಿಗೆ ಹೊರರಾಜ್ಯದತ್ತ ಮುಖಮಾಡಿದ ಪುಟಾಣಿಗಳು
Published 26 ಡಿಸೆಂಬರ್ 2023, 6:36 IST
Last Updated 26 ಡಿಸೆಂಬರ್ 2023, 6:36 IST
ಅಕ್ಷರ ಗಾತ್ರ

ಬೆಳಗಾವಿ: ಮಕ್ಕಳನ್ನು ಶಾಲೆಯತ್ತ ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾನಾ ಕಾರ್ಯಕ್ರಮ ರೂಪಿಸುತ್ತಿದೆ. ಆದರೂ, ಹಲವು ಮಕ್ಕಳು ಶಾಲೆಯತ್ತ ಮುಖಮಾಡುತ್ತಲೇ ಇಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿ 6ರಿಂದ 18 ವರ್ಷ ವಯಸ್ಸಿನ 217 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕಳೆದ ವರ್ಷ ಶಾಲಾ ಶಿಕ್ಷಣ ಇಲಾಖೆಯು 6ರಿಂದ 14ರ ವಯೋಮಾನದ ಮಕ್ಕಳ ಸಮೀಕ್ಷೆ ನಡೆಸಿತ್ತು. ಆಗ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 79, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 29 ಸೇರಿದಂತೆ 108 ಮಕ್ಕಳು ಶಾಲೆಯಿಂದ ದೂರವುಳಿದಿರುವುದು ಗೊತ್ತಾಗಿತ್ತು. ಈ ಸಲ 6ರಿಂದ 18ರ ವಯೋಮಾನದವರ ಸಮೀಕ್ಷೆ ನಡೆದಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 114, ಚಿಕ್ಕೋಡಿಯಲ್ಲಿ 103 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆ ತೊರೆದವರಲ್ಲಿ 14 ಮತ್ತು 15 ವಯೋಮಾನದವರೇ ಅಧಿಕವಾಗಿದ್ದಾರೆ. ಬಾಲಕರಿಗಿಂತ ಬಾಲಕಿಯರ ಪ್ರಮಾಣವೇ ಹೆಚ್ಚಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 7, ಚಿಕ್ಕೋಡಿಯಲ್ಲಿ 8 ಸೇರಿದಂತೆ ಇಡೀ ಜಿಲ್ಲೆಯಲ್ಲಿ 15 ವಲಯಗಳಿವೆ. ಈ ಪೈಕಿ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯಲ್ಲಿ ನಿಪ್ಪಾಣಿ (34), ಚಿಕ್ಕೋಡಿ (32), ಖಾನಾಪುರ, ರಾಮದುರ್ಗ ವಲಯಗಳು (ತಲಾ 25) ಮುನ್ನೆಲೆಯಲ್ಲಿವೆ.

ಏನು ಕಾರಣ?: ‘ಪಾಲಕರ ನಿರಾಸಕ್ತಿ, ಮನೆಗೆಲಸ ಮಾಡುವುದು, ಬಾಲ್ಯದಲ್ಲೇ ಕುಟುಂಬ ನಿರ್ವಹಿಸಬೇಕಾದ ಜವಾಬ್ದಾರಿ ಮತ್ತಿತರ ಕಾರಣಕ್ಕೆ ಮಕ್ಕಳು ಶಾಲೆಗೆ ಬರುತ್ತಿಲ್ಲ. ಬಾಲ್ಯವಿವಾಹದಿಂದಾಗಿ ಕೆಲವು ಬಾಲಕಿಯರು ಶಾಲೆ ತೊರೆದಿದ್ದಾರೆ. ಬರದ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರಕ್ಕೆ ಹೋಗಿರುವ ಪಾಲಕರೊಂದಿಗೆ ಕೆಲವು ಮಕ್ಕಳು ಹೋಗಿರುವುದು ಕಂಡುಬಂದಿದೆ. ದೀರ್ಘಾವಧಿಗೆ ಶಾಲೆ ಬಿಟ್ಟವರಷ್ಟೇ ಅಲ್ಲ; ಯಾವುದೇ ಮಗು ಒಂದು ವಾರಕ್ಕಿಂತ ಅಧಿಕ ಅನಧಿಕೃವಾಗಿ ಗೈರಾದರೂ, ತಕ್ಷಣವೇ ಮನೆಗೆ ಹೋಗಿ ಮಾಹಿತಿ ಪಡೆಯುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸಮೀಕ್ಷಾ ವರದಿ ಆಧರಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗೆ ಭೇಟಿ ಕೊಡುತ್ತೇವೆ. ಹೊರರಾಜ್ಯಕ್ಕೆ ಹೋಗಿರುವ ಮಕ್ಕಳ ಸಂಪರ್ಕಕ್ಕಾಗಿ ಅಲ್ಲಿನ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಮಕ್ಕಳನ್ನು ರಾಜ್ಯಕ್ಕೆ ತಂದು ಶಾಲೆಗೆ ಸೇರಿಸಲು ಯತ್ನಿಸುತ್ತೇವೆ. ಒಂದುವೇಳೆ ಬಾರದಿದ್ದರೆ ಆ ರಾಜ್ಯದ ಶಾಲೆಗಳಲ್ಲಾದರೂ ದಾಖಲಿಸುತ್ತೇವೆ’ ಎಂದು ಬೆಳಗಾವಿ ಪ್ರಭಾರ ಡಿಡಿಪಿಐ ಕೂಡ ಆಗಿರುವ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT