ಬೆಳಗಾವಿ: ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್–ಮಿಲಾದ್ ಹಬ್ಬದ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಮುಸ್ಲಿಮರೊಂದಿಗೆ ಹಿಂದೂಗಳೂ ಭಾಗವಹಿಸಿ ಭಾವೈಕ್ಯತೆ ಮೆರೆದರು.
ನಗರದಲ್ಲಿ ಸೆ.16ರಂದೇ ಈದ್–ಮಿಲಾದ್ ಹಬ್ಬವನ್ನು ಮುಸ್ಲಿಮರು ಆಚರಿಸಿದ್ದಾರೆ. ಅಂದೇ ಬೆಳಿಗ್ಗೆ ಈದ್–ಮಿಲಾದ್ ಮೆರವಣಿಗೆ ನಡೆಯಬೇಕಿತ್ತು. ಆದರೆ, ಅದರ ಮಾರನೇ ದಿನವೇ( ಸೆ.17) ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇತ್ತು.
ಹಾಗಾಗಿ ಗಣೇಶನ ಮೆರವಣಿಗೆ ಮೊದಲು ಅದ್ದೂರಿಯಾಗಿ ನಡೆಯಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೂ ಅನುಕೂಲವಾಗಲೆಂದು ಮುಸ್ಲಿಮರು ಈದ್ ಮೆರವಣಿಗೆಯನ್ನು ಸೆ.22ಕ್ಕೆ ಮುಂದೂಡಿ ಸಾಮರಸ್ಯದ ಸಂದೇಶ ಸಾರಿದ್ದರು. ಹಾಗಾಗಿ ಭಾನುವಾರ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಅದ್ದೂರಿ ಮೆರವಣಿಗೆ: ಇಲ್ಲಿನ ಹಳೇ ಪಿ.ಬಿ. ರಸ್ತೆಯಿಂದ ಹೊರಟ ಮೆರವಣಿಗೆ, ಕೇಂದ್ರೀಯ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮನ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಾಗಿ, ಕ್ಯಾಂಪ್ ಪ್ರದೇಶದಲ್ಲಿನ ಹಜರತ್ ಸೈಯದ್ ಅಸದ್‌ಖಾನ್ ದರ್ಗಾ ಆವರಣ ತಲುಪಿತು. ಅಲ್ಲದೆ, ನಗರದ ವಿವಿಧ ಬಡಾವಣೆಗಳಲ್ಲೂ ಪ್ರತ್ಯೇಕವಾಗಿ ಮೆರವಣಿಗೆ ನಡೆದವು.
ಮುಖ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು, ಉತ್ಸಾಹದಿಂದ ಹೆಜ್ಜೆಹಾಕಿದರು. ಮಕ್ಕಳು, ಯುವಕರು ಸಾಂಪ್ರದಾಯಿಕ ದಿರಿಸಿನಲ್ಲಿ ಗಮನಸೆಲೆದರು. ಮೆರವಣಿಗೆಯುದ್ದಕ್ಕೂ ಇಸ್ಲಾಂ ಧರ್ಮದ ಧ್ವಜಗಳು ರಾರಾಜಿಸಿದವು.
ಬೆಳಿಗ್ಗೆಯಿಂದ ನಗರದಲ್ಲಿ ಬಿಸಿಲಿನ ವಾತಾವರಣವಿತ್ತು. ಸಂಜೆ 4ಕ್ಕೆ ಜೋರಾಗಿ ಮಳೆ ಸುರಿಯಿತು. ಆದರೂ, ಮೆರವಣಿಗೆಯಿಂದ ಕದಲದ ಜನರು, ‘ಕವ್ವಾಲಿ’ಗಳಿಗೆ ಕುಣಿದು ಕುಪ್ಪಳಿಸಿದರು. ಸಂಗೀತವಾದ್ಯಗಳನ್ನು ನುಡಿಸಿ ಖುಷಿಪಟ್ಟರು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮೆರವಣಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಧರ್ಮಗುರು ಮುಫ್ತಿ ಮಂಜೂರ್ ಆಲಂ ಅವರು, ಹಬ್ಬದ ಮಹತ್ವ ಸಾರಿದರು.
ಶಾಸಕ ಆಸೀಫ್ ಸೇಠ್, ‘ಇಸ್ಲಾಂ ಧರ್ಮದ ಆಶಯದಂತೆ ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳೋಣ. ಮಾನವೀಯ ಮೌಲ್ಯ ಬೆಳೆಸಿಕೊಳ್ಳೋಣ’ ಎಂದರು.
ಮಾಜಿ ಶಾಸಕ ಫಿರೋಜ್ ಸೇಠ್, ‘ಬೆಳಗಾವಿಯಲ್ಲಿ ಸರ್ವಧರ್ಮೀಯರು ಸೇರಿಕೊಂಡು ಎಲ್ಲ ಹಬ್ಬ ಆಚರಿಸುತ್ತ ಬಂದಿದ್ದೇವೆ. ಈ ಪರಂಪರೆ ಹೀಗೆ ಮುಂದುವರಿಸಿಕೊಂಡು ಹೋಗೋಣ. ಇದೇ ವೃತ್ತದಲ್ಲಿ ದೀಪಾವಳಿಯಲ್ಲಿ ಸಿಹಿ ಹಂಚೋಣ’ ಎಂದು ತಿಳಿಸಿದರು.
ಧರ್ಮಗುರು ಪೀರಸಾಬ್ ಸಯ್ಯದ್ ಕಾಶೀಮ್ ಅಶ್ರಫ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಮುಖಂಡರಾದ ವಿಕಾಸ ಕಲಘಟಗಿ, ಬಾಬುಲಾಲ ರಾಜಪುರೋಹಿತ, ಸಂಜಯ ಭಂಡಾರಿ ಇತರರಿದ್ದರು.
ಪೊಲೀಸರು ಇಡೀ ನಗರದಾದ್ಯಂತ ಭದ್ರತೆ ಕೈಗೊಂಡಿದ್ದರು.
––––––––––
ಸಿಹಿ ಪದಾರ್ಥಗಳ ವಿತರಣೆ: ಈದ್–ಮಿಲಾದ್ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಉದ್ಯಮಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರು, ಕುಡಿಯುವ ನೀರು, ತಂಪು–ಪಾನೀಯಗಳು, ಉಪಾಹಾರ ಮತ್ತು ಸಿಹಿ ಪದಾರ್ಥಗಳನ್ನು ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.