ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರ ‘ಗ್ಯಾರಂಟಿ’ ನಂಬಬೇಡಿ: ಸಚಿವ ಸತೀಶ ಜಾರಕಿಹೊಳಿ

ಗೋಕಾಕ, ಅರಬಾವಿಯಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ ನಡೆಸಿದ ಸಚಿವರು
Published 28 ಮಾರ್ಚ್ 2024, 16:11 IST
Last Updated 28 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ಗೋಕಾಕ: ‘ಬಿಜೆಪಿಯವರು ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಮೋದಿ ನಾನೇ ಗ್ಯಾರಂಟಿ ಎನ್ನುತ್ತಿದ್ದಾರೆ. ಇವರ ಮೇಲೆ ಯಾವ ಗ್ಯಾರಂಟಿ ಇಟ್ಟುಕೊಳ್ಳಲು ಸಾಧ್ಯ? ಇಲ್ಲಿಯವರೆಗೆ ನೀಡಿದ್ದ ಆಶ್ವಾಸನೆಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಪರ ನಗರದಲ್ಲಿ ಗುರುವಾರ ಜರುಗಿದ, ಗೋಕಾಕ ಮತ್ತು ಅರಬಾವಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದೆ. ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಿದೆ. ಎಲ್ಲ ಗ್ಯಾರಂಟಿಗಳಿಂದಲೂ ಜನರಿಗೆ ಪ್ರಯೋಜನವಾಗಿದೆ. ಹಾಗಾಗಿ ಈ ಬಾರಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕು’ ಎಂದರು.

‘ಭಾವನೆಗಳ ಮೇಲೆ ಜನರು ಬದುಕಲು ಸಾಧ್ಯವಿಲ್ಲ. ಬಿಜೆಪಿಯವರ ಯೋಜನೆಗಳು ಕೇವಲ ಘೋಷಣೆ ಮಾಡುವುದಕ್ಕೆ ಮಾತ್ರ ಸೀಮಿತ. ಅವುಗಳು ಎಂದಿಗೂ ಜಾರಿಯಾಗುವುದಿಲ್ಲ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಬೇಕು. ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹಾಗಾಗಿ ಮೃಮಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಬಹುಮತದಿಂದ ಆರಿಸಿ’ ಎಂದು ವಿನಂತಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಮೃಣಾಲ್‌, ಪ್ರಿಯಾಂಕಾ ಉತ್ಸಾಹಿಗಳಿದ್ದು, ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬಹುಮತದಿಂದ ಆರಿಸಿ ತನ್ನಿ’ ಎಂದರು.

‘ಬಿಜೆಪಿಯವರು ಬರೆ ಬುರುಡೆ ಬಿಡುತ್ತಾರೆ. ಸಬ್ ಕಾ ಸಾತ್ ಅಲ್ಲ, ಅವರದ್ದು ಸಬ್ ಕಾ ಸ್ವಾರ್ಥ್. ನಾವು ಸ್ವಾರ್ಥದ ರಾಜಕಾರಣ ಮಾಡುವುದಿಲ್ಲ. ಸಾಮಾಜಿಕ ಬದ್ಧತೆ, ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಬಿಜೆಪಿಯವರಿಗೆ ನಮ್ಮ ಜಿಲ್ಲೆಯಲ್ಲಿ ಒಬ್ಬರೂ ಅಭ್ಯರ್ಥಿ ಸಿಗಲಿಲ್ಲ, ಹೊರಗಡೆಯಿಂದ ಅಭ್ಯರ್ಥಿ ತರಬೇಕಾಯಿತು. ಇದು ನಮ್ಮ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ’ ಎಂದು ಹೆಬ್ಬಾಳಕರ ಹೇಳಿದರು.

ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ, ಸಿದ್ದಲಿಂಗ ದಳವಾಯಿ, ಅನಿಲಕುಮಾರ ದಳವಾಯಿ, ಬಸನಗೌಡ ಹೊಳೆಯಾಚೆ, ವಿವೇಕ್ ಜತ್ತಿ, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಡಾಂಗೆ, ಗೋಕಾಕ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಕೀರ್ ನದಾಫ್, ರಮೇಶ ಉಟಗಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅರಳಿ, ಅರಬಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೂರ್ಯಕಾಂತ ಮಗದುಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT