ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ; ಎಂಇಎಸ್‌ಗೆ ನೆಲೆಯೇ ಇಲ್ಲ !

Last Updated 30 ಏಪ್ರಿಲ್ 2019, 14:19 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಮರಾಠಿ ಭಾಷಿಕರು ಸ್ಥಳೀಯ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಡೆ ಒಲವು ಹೊಂದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳತ್ತ ನಿಷ್ಠೆ ತೋರಿಸಿದ್ದಾರೆ. ಇಂತಹ ದ್ವಂದ್ವ ನೀತಿಯು ರಾಜ್ಯ ಪುನರ್‌ವಿಂಗಡಣೆಯಾದಾಗಿನಿಂದಲೂ ನಡೆದುಕೊಂಡು ಬಂದಿದೆ ಎನ್ನುವುದು ವಿಶೇಷ.

1956ರಲ್ಲಿ ಭಾಷಾ ಆಧಾರವಾಗಿ ರಾಜ್ಯಗಳ ಪುನರ್‌ರಚನೆಯಾಯಿತು. ಆಗ ಬೆಳಗಾವಿಯನ್ನು ಮೈಸೂರು (ಕರ್ನಾಟಕ) ರಾಜ್ಯಕ್ಕೆ ಸೇರಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮರಾಠಿಗರು, ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿದ್ದರು. ಇದಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆ ಹುಟ್ಟುಹಾಕಿ, ಹೋರಾಟ ನಡೆಸಿದರು. ಚುನಾವಣಾ ರಾಜಕೀಯಕ್ಕೂ ಧುಮಕಿದರು.

ಬೆಳಗಾವಿ ಉತ್ತರ, ಉಚಗಾಂವ (ಬೆಳಗಾವಿ ದಕ್ಷಿಣ), ಬಾಗೇವಾಡಿ (ಬೆಳಗಾವಿ ಗ್ರಾಮೀಣ), ಖಾನಾಪುರದಲ್ಲಿ ಪ್ರಾಬಲ್ಯ ಹೊಂದಿದ್ದರು. ವಿಧಾನಸಭೆ ಚುನಾವಣೆಗಳಲ್ಲಿ ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ ಯಾಗು ತ್ತಿದ್ದರು. ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಾಗ ಈ ಸದಸ್ಯರು, ‘ಬೆಳಗಾವಿಯನ್ನು ಮಹಾ ರಾಷ್ಟ್ರಕ್ಕೆ ಸೇರಿಸಬೇಕು’ ಎಂದು ಘೋಷಣೆ ಕೂಗಿ ರಾಜ್ಯದಾದ್ಯಂತ ಸುದ್ದಿ ಮಾಡುತ್ತಿದ್ದರು.

ಇದೇ ಉತ್ಸಾಹ ಲೋಕಸಭೆ ಚುನಾವಣೆಯಲ್ಲಿ ಕಾಣುತ್ತಿರಲಿಲ್ಲ. ರಾಜ್ಯ ಪುನರ್‌ ವಿಂಗಡಣೆಯ ನಂತರ ನಡೆದ ಮೊದಲ ಚುನಾವಣೆ 1957ರಲ್ಲಿ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ.ಎನ್‌. ದಾತಾರ್‌ ಗೆಲುವು ಸಾಧಿಸಿದ್ದರು. ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೇರಿದಂತೆ ಜನತಾ ದಳ, ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಆದರೆ, ಒಮ್ಮೆಯೂ ಎಂಇಎಸ್‌ ಅಭ್ಯರ್ಥಿ ಜಯಗಳಿಸಿರಲಿಲ್ಲ.

ಕ್ಷೇತ್ರವಾದ ಚಿಕ್ಕೋಡಿಯಲ್ಲೂ ಇದೇ ಸ್ಥಿತಿ ಇದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಚಿಕ್ಕೋಡಿ– ಸದಲಗಾ, ನಿಪ್ಪಾಣಿ, ರಾಯಬಾಗ, ಅಥಣಿ, ಕಾಗವಾಡ, ಹುಕ್ಕೇರಿ, ಕುಡಚಿ, ಸಂಕೇಶ್ವರ (ಯಮಕನಮರಡಿ) ವಿಧಾನಸಭಾ ಕ್ಷೇತ್ರದಲ್ಲೂ ರಾಷ್ಟ್ರೀಯ ಪಕ್ಷಗಳೇ ಜಯ ಸಾಧಿಸಿವೆ.

ಶಕ್ತಿ ವಿಭಜನೆ: ಎಂಇಎಸ್‌ ಪ್ರಾಬಲ್ಯ ಇರುವ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿವೆ. ಬೆಳಗಾವಿ ಕ್ಷೇತ್ರದ ಇನ್ನುಳಿದ ಐದು ಕ್ಷೇತ್ರಗಳಾದ ಗೋಕಾಕ, ಅರಬಾವಿ, ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಮರಾಠಿಗರು ನಗಣ್ಯರಾಗಿದ್ದಾರೆ. ಹೀಗಾಗಿ ಇಲ್ಲಿ ಗೆಲುವು ಕಷ್ಟ ಎನ್ನುವುದನ್ನು ಅರಿತ ಎಂಇಎಸ್‌ ಮುಖಂಡರು, ಲೋಕಸಭೆಗೆ ಹೆಚ್ಚು ಒತ್ತು ನೀಡಿಲ್ಲ.

ಖಾನಾಪುರ ಕ್ಷೇತ್ರವು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಇಲ್ಲಿಯೂ ಇನ್ನುಳಿದ ಕ್ಷೇತ್ರಗಳಲ್ಲಿ ಕನ್ನಡಿಗರ ಪ್ರಾಬಲ್ಯ ಹೆಚ್ಚಾಗಿರುವುದರಿಂದ ಮರಾಠಿ ಭಾಷಿಕರ ಮತಗಳು ಪ್ರಭಾವ ಬೀರಿಲ್ಲ.

ಬಿಜೆಪಿ ಒಲವು: ಮರಾಠಿ ಭಾಷಿಕರಲ್ಲಿ ಹಳೆಯ ತಲೆಮಾರಿನ ಜನರನ್ನು ಬಿಟ್ಟರೆ, ಇಂದಿನ ತಲೆಮಾರಿನವರು ಬಿಜೆಪಿಯತ್ತ ಹೆಚ್ಚು ಒಲವು ಹೊಂದಿದ್ದಾರೆ. 1990ರ ದಶಕದ ನಂತರ ಬಿಜೆಪಿಯ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯ ಜೊತೆಗೆ ಲೋಕಸಭೆ ಚುನಾವಣೆ ಯಲ್ಲೂ ಕೇಸರಿ ಪಕ್ಷದತ್ತ ವಾಲಿದ್ದಾರೆ. ಹೀಗಾಗಿ ಎಂಇಎಸ್‌ಗೆ ನೆಲೆಯೇ ಇಲ್ಲದಂತಾಗಿದೆ.

‘ಮರಾಠಿ ಸಂಸ್ಕೃತಿಗಾಗಿ ಸ್ಪರ್ಧೆ’
ಇಂದಿನ ತಲೆಮಾರಿನ ಯುವಕರು ರಾಷ್ಟ್ರೀಯ ಪಕ್ಷಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ನಾವು ಮರಾಠಿ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಸೋಲು– ಗೆಲುವಿಗಾಗಿ ಅಲ್ಲ. ವಿಕಾಸ ಕಲಘಟಗಿ, ಎಂಇಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT