ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರ ಕೈಗೆ ಕೆಲಸವಿತ್ತ ಪದವೀಧರ ಸಂಕೇತ ಮಾಂಜರೇಕರ

ಅಕ್ಷರ ಗಾತ್ರ

ಚಿಕ್ಕೋಡಿ: ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯೊಬ್ಬ ಇತರರ ಬಳಿ ನೌಕರಿಯ ಬೆನ್ನು ಬೀಳದೇ, ಉದ್ಯಮಶೀಲರಾಗುವ ಜೊತೆಗೆ ಹಲವರಿಗೆ ಉದ್ಯೋಗ ನೀಡುವ ಮೂಲಕ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.‌

ಪಟ್ಟಣದ ಸಂಕೇತ ವಿಜಯ ಮಾಂಜರೇಕರ ತಮ್ಮ ಕಾಲಿನ ಮೇಲೆ ನಿಲ್ಲುವುದರೊಂದಿಗೆ, ಇತರರಿಗೂ ಆಸರೆಯಾಗಿದ್ದಾರೆ. 2005ರಲ್ಲಿ ಬಿಇ ಮೆಕ್ಯಾನಿಕಲ್ ವಿಷಯದಲ್ಲಿ ಜಿಐಟಿ ಕಾಲೇಜಿನ ಟಾಪರ್‌ ಆಗಿದ್ದರು. ತಾವು ವಿದ್ಯಾರ್ಥಿ ದೆಸೆಯಿಂದಲೂ ಅಂದುಕೊಂಡಂತೆ ನೌಕರಿಗಾಗಿ ಅಲೆಯದೇ ಸ್ವಯಂ ಉದ್ಯಮ ಆರಂಭಿಸುವ ಮೂಲಕ ಗ್ರಾಮೀಣ ಭಾಗದ ಒಂದಷ್ಟು ನಿರುದ್ಯೋಗಿ ಯುವಕರ ಕೈಗೆ ಕೆಲಸ ಕೊಡಲು ಮುಂದಾದರು.

ಚಿಕ್ಕೋಡಿಯಲ್ಲಿ ಹೊಂಡಾ ಕಂಪನಿಯ ಡೀಲರ್‌ಶಿಪ್‌ ಪಡೆದಿದ್ದಾರೆ. ಅದರಲ್ಲಿ 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಜೊತೆಗೆ ಸಿವಿಲ್‌ ಗುತ್ತಿಗೆದಾರರಾದ ತಂದೆ ವಿಜಯ ಮಾಂಜರೇಕರ ಅವರ ಗುತ್ತಿಗೆ ಕಾಮಗಾರಿಗಳನ್ನೂ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ. ಸ್ಟೋನ್‌ ಕ್ರಷರ್, ಎಂ. ಸ್ಯಾಂಡ್‌ ತಯಾರಿಕೆ ಮತ್ತು ಪೇವರ್‌ ಬ್ಲಾಕ್‌ ತಯಾರಿಸುವ ಘಟಕಗಳನ್ನೂ ಆರಂಭಿಸಿದ್ದು, ಅಲ್ಲಿಯೂ ನೂರಕ್ಕೂ ಹೆಚ್ಚು ಮಂದಿಗೆ ಕೆಲಸ ಸಿಕ್ಕಿದೆ.

2008ರಲ್ಲಿ ಹೊಂಡಾ ಕಂಪನಿಯ ದ್ವಿಚಕ್ರವಾಹನಗಳ ಸಬ್‌ ಡೀಲರ್‌ಶಿಫ್‌ ಪಡೆದಿದ್ದ ಅವರು, ಐದು ವರ್ಷಗಳ ಅವಧಿಯಲ್ಲಿ ಕಂಪೆನಿಯ ಉತ್ಪನ್ನಗಳ ಮಾರಾಟ ಮತ್ತು ಸೇವೆಯನ್ನು ಅತ್ಯುತ್ತಮ ದರ್ಜೆಯಲ್ಲಿ ನಿರ್ವಹಿಸಿದರು. ಈ ಕಾರ್ಯಕ್ಷಮತೆಯನ್ನು ಪರಿಗಣಿಸಿದ ಕಂಪನಿಯು ಸಂಕೇತ ಅವರಿಗೆ 2013ರಲ್ಲಿ ಮೆರಿಟ್‌ ಆಧಾರದಲ್ಲಿ ಚಿಕ್ಕೋಡಿ, ಅಥಣಿ, ರಾಯಬಾಗ ಮತ್ತು ಹುಕ್ಕೇರಿ ತಾಲ್ಲೂಕುಗಳನ್ನು ಒಳಗೊಂಡು ಹೊಂಡಾ ಕಂಪೆನಿಯ ಡೀಲರ್‌ಶಿಪ್ ಕೊಟ್ಟಿದೆ.

‘ವಿಭಾಶ್ರೀ ಹೋಂಡಾ’ ಹೆಸರಿನಲ್ಲಿ ಚಿಕ್ಕೋಡಿಯಲ್ಲಿ 2013ರಲ್ಲಿ ಆರಂಭಗೊಂಡಿರುವ ಅವರ ಉದ್ಯಮ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯತ್ತ ಸಾಗುತ್ತಿದೆ. ವರ್ಷವೊಂದಕ್ಕೆ 4,500ರಷ್ಟು ಹೊಂಡಾ ಕಂಪನಿಯ ವಿವಿಧ ಉತ್ಪನ್ನಗಳು ಮಾರಾಟವಾಗುತ್ತಿದ್ದು, ವಾರ್ಷಿಕ ₹ 12 ಕೋಟಿಯಷ್ಟು ವಹಿವಾಟು ನಡೆಯುತ್ತಿದೆ. 200ಕ್ಕೂ ಹೆಚ್ಚು ಜನರಿಗೆ ಉದ್ಯಮದಲ್ಲಿ ಕೆಲಸ ಒದಗಿಸಲಾಗಿದೆ’ ಎಂದು ಸಂಕೇತ ಹೇಳುತ್ತಾರೆ.

‌‘ಬಿಇ ಮೆಕ್ಯಾನಿಕಲ್ ವಿಭಾಗದಲ್ಲಿ ಬೆಳಗಾವಿಯ ಜಿಐಟಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದೆ. ಮನಸ್ಸು ಮಾಡಿದ್ದರೆ ಒಳ್ಳೆಯ ಕಂಪನಿಯಲ್ಲಿ ಉನ್ನತ ಸ್ಥಾನದ ಉದ್ಯೋಗ ಪಡೆಯಬಹುದಿತ್ತು. ಆದರೆ, ನಾನು ನೌಕರಿ ಮಾಡದೇ, ಸ್ವಯಂ ಉದ್ಯೋಗ ಆರಂಭಿಸಿ ಇತರರಿಗೆ ಉದ್ಯೋಗ ಸೃಷ್ಟಿಸುವ ಕನಸು ಕಂಡಿದ್ದೆ. ಇದರಿಂದಾಗಿ ಯಾವ ಕಂಪನಿಯ ಕ್ಯಾಂಪಸ್‌ ಸಂದರ್ಶನವನ್ನೂ ಎದುರಿಸಲಿಲ್ಲ. ಈಗ ಉದ್ಯಮಿಯಾಗಿ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಸಿರುವ ಆತ್ಮತೃಪ್ತಿ ಇದೆ’ ಎನ್ನುತ್ತಾರೆ ಅವರು.

ಅವರ ಷೋರೂಂನಲ್ಲಿ ನೀಡುವ ಗುಣಮಟ್ಟದ ಸೇವೆ, ಸೌಲಭ್ಯಗಳು, ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳುವ ಕ್ರಮ, ಗ್ರಾಹಕರಿಗಾಗಿ ವಿತರಕರು ನೀಡುವ ಸಮಯ ಮೊದಲಾದವುಗಳನ್ನು ಪರಿಗಣಿಸಿ ಹೊಂಡಾ ಕಂಪನಿಯು ರಾಷ್ಟ್ರಮಟ್ಟದ ‘ಬೆಸ್ಟ್ ಡೀಲರ್ ಇನ್ ಸೌಥ್ ಇಂಡಿಯಾ ಇನ್ ಸಿ.ಎಸ್.ಐ’ ಪ್ರಶಸ್ತಿ ನೀಡಿದೆ. ಚಿಕ್ಕೋಡಿಯಂತಹ ಸಣ್ಣ ಪಟ್ಟಣವೊಂದರ ದ್ವಿಚಕ್ರ ವಾಹನ ವಿತರಕರೊಬ್ಬರು ಈ ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದು ದೇಶದಲ್ಲಿಯೇ ಪ್ರಥಮ ಎನ್ನಲಾಗಿದೆ. ಇದಕ್ಕೂ ಮೊದಲು ಅವರು ‘ಬೆಸ್ಟ್‌ ಪರ್ಫಾರ್ಮೆನ್ಸ್‌ ಇನ್ ಡ್ರೀಮ್ ಸೀರಿಸ್ ಸೇಲ್ಸ್' ಪ್ರಶಸ್ತಿ ಮತ್ತು 2017ರಲ್ಲಿ ಕಸ್ಟಮರ್ ಸರ್ಟಿಫಿಕೇಶನ್ ವಿಭಾಗದಲ್ಲಿ ರಾಜ್ಯದಲ್ಲಿ 3ನೇ ಕ್ರಮಾಂಕಗಳನ್ನು ಪಡೆದಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT