ಮಂಗಳವಾರ, ಮಾರ್ಚ್ 21, 2023
27 °C

ರಾಮದುರ್ಗ: ಈಶ್ವರಪ್ಪನ ಕೊಳ್ಳದಲ್ಲಿ ಪ್ರಕೃತಿ ಸೊಬಗು

ಚನ್ನಪ್ಪ ಮಾದರ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ (ಬೆಳಗಾವಿ ಜಿಲ್ಲೆ): ರಾಮದುರ್ಗ ಪಟ್ಟಣ ಎಂದರೆ ತಟ್ಟನೆ ನೆನಪಾಗುವುದು ಬೆಟ್ಟ, ಗುಡ್ಡಗಳು. ಏಕೆಂದರೆ, ಇಡೀ ಪಟ್ಟಣ ಬೆಟ್ಟ-ಗುಡ್ಡಗಳಿಂದ ಅವೃತಗೊಂಡಿದೆ. ಯಾವುದೇ ದಿಕ್ಕಿನಿಂದ ಬಂದರೂ ಬೆಟ್ಟ ಹತ್ತಿ ಇಳಿಯಲೇಬೇಕು. ಪ್ರಕೃತಿದತ್ತವಾಗಿ ಸುಂದರವಾಗಿ ಕಾಣುತ್ತದೆ. ಸುತ್ತಮುತ್ತಲಿನ ಗುಡ್ಡಗಳಲ್ಲಿ ಐದು ನೀರಿನ ಝರಿಗಳಿದ್ದು, ಅವು ಸ್ಥಳೀಯರ ಅಚ್ಚುಮೆಚ್ಚಿನ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಸುಮಾರು 10 ಕಿ.ಮೀ. ಅಂತರದಲ್ಲಿ ಐದು ಕೊಳ್ಳಗಳು ಕಾಣಸಿಗುತ್ತವೆ. ಅದರಲ್ಲೂ ಈಶ್ವರಪ್ಪನ ಕೊಳ್ಳ ಬಹಳ ವಿಶೇಷ ಸ್ಥಳ ಎಂದೇ ಹೇಳಬಹುದು. ಇದಕ್ಕೆ ಪ್ರಮುಖ ಕಾರಣ ಬೃಹತ್ ಬಂಡೆಯಲ್ಲಿ ಪ್ರಕೃತಿದತ್ತವಾಗಿ ನಿರ್ಮಾಣವಾದ ಗುಡಿ ಇರುವುದು. ಸುಮಾರು 40 ಅಡಿ ಅಗಲ ಹಾಗೂ 15 ಅಡಿ ಉದ್ದದ ಈ ಪ್ರಕೃತಿದತ್ತ ಗುಡಿ ನೋಡಿದರೆ ಮನಸ್ಸು ಉಲ್ಲಾಸಭರಿತವಾಗುತ್ತದೆ. ಅಲ್ಲಿ ಇತ್ತೀಚೆಗೆ ಈಶ್ವರಲಿಂಗ ಸ್ಥಾಪಿಸಲಾಗಿದೆ. ಹೀಗಾಗಿ ಇದು ಪ್ರವಾಸಿ ತಾಣವಾಗಿ ರೂಪಗೊಂಡಿದೆ.

ಬೆಟ್ಟ–ಗುಡ್ಡಗಳಿಂದ ಆವೃತವಾದ ಈ ದೇವಸ್ಥಾನದ ಹಿಂಭಾಗದಲ್ಲಿ ಪುಷ್ಕರಣಿ ಇದೆ. ಅದು ದೈವ ನಿರ್ಮಿತ ಪುಷ್ಕರಣಿ ಎಂದೇ ಹೆಸರುವಾಸಿ. ಅದು ಬತ್ತಿದ ಇತಿಹಾಸವೇ ಇಲ್ಲದಿರುವುದು ಇದಕ್ಕೆ ಕಾರಣ. ಅಲ್ಲಿನ ನೀರು ಬಹಳ ರುಚಿ. ಇದು ಕೂಡ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಶಿವನ ಮೂರ್ತಿ ಹತ್ತಿರವೇ ಮುಳ್ಳೂರು ಗುಡ್ಡದಲ್ಲಿ ಇರುವ ಈಶ್ವರಪ್ಪನ ಕೊಳ್ಳವೂ ಪ್ರೇಕ್ಷಣೀಯ ಮತ್ತು ಪಿಕ್‌ನಿಕ್‌ ಪಾಯಿಂಟ್‌ ಎಂದು ಗುರುತಿಸಿಕೊಂಡಿದೆ.

ಶ್ವರನ (ಈಶ್ವರಲಿಂಗ) ಮೂರ್ತಿ ಇದೆ. ಅದಕ್ಕೆಂದೆ ಇದನ್ನು ಈಶ್ವರಪ್ಪನ ಕೊಳ್ಳ ಎನ್ನುತ್ತಾರೆ. ಪ್ರತಿ ಅಮವಾಸ್ಯೆ ಮತ್ತು ಸೋಮವಾರದಂದು ಭಕ್ತರು, ಜೋಡಿಗಳು, ನವದಂಪತಿಗಳು ಹೆಚ್ಚಾಗಿ ಬರುತ್ತಾರೆ.

ಇಲ್ಲಿಗೆ ಬರಲು 2 ಕಿ.ಮೀ. ಹಾದಿ ಸುಗಮವಾಗೇನೂ ಇಲ್ಲ. ಕೆಲವೆಡೆ ತೆವಳಿಯೇ ಸಾಗುವ ಅನಿವಾರ್ಯವಿದೆ. ಕಷ್ಟಪಟ್ಟು ಸ್ಥಳಕ್ಕೆ ಬಂದ ಪ್ರವಾಸಿಗರಿಗೆ ಮೋಸ ಆಗುವುದಿಲ್ಲ. ಪ್ರಕೃತಿದತ್ತ ದೇವಸ್ಥಾನ, ಪವಿತ್ರ ಪುಷ್ಕರಣಿ, ಜೋಗದ ರೀತಿಯ ಗುಂಡಿ ಜೊತೆಗೆ ಹಕ್ಕಿಗಳ ಚಿಲಿಪಿಲಿ ಮುದ ನೀಡಿ, ಆಯಾಸ ಮರೆಸುತ್ತದೆ. ಪ್ರಕೃತಿ ನಿರ್ಮಿತ ಜಲಪಾತವನ್ನು (ಮಳೆಗಾಲದಲ್ಲಿ) ನೋಡಬಹುದು. ಅಭಿವೃದ್ಧಿ ಕಾರ್ಯಗಳು ನಡೆದರೆ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಬಹುದಾಗಿದೆ.

‘ಈಶ್ವರಪ್ಪನ ಕೊಳ್ಳ ಜಲಪಾತವು ಮಳೆಗಾಲದಲ್ಲಿ ಖುಷಿ ನೀಡುತ್ತದೆ’ ಎನ್ನುತ್ತಾರೆ ಪ್ರವಾಸಿಗ ಈರಣ್ಣ ಬುಡ್ಡಾಗೋಳ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು