ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಹೂಡಿಕೆ ಆಕರ್ಷಿಸಲು ‘ಗೋಲ್ಡನ್‌ ಕ್ಲಾಸ್‌’ ಪಾರ್ಕ್‌ ಸ್ಥಾಪನೆ: ನಿರಾಣಿ

Last Updated 23 ಡಿಸೆಂಬರ್ 2022, 8:20 IST
ಅಕ್ಷರ ಗಾತ್ರ

ಬೆಳಗಾವಿ: ಗಡಿ ಜಿಲ್ಲೆಯಾದ ಬೆಳಗಾವಿ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕಾ ಹೂಡಿಕೆಯನ್ನು ಆಕರ್ಷಿಸಲು ‘ಗೋಲ್ಡನ್‌ ಕ್ಲಾಸ್‌’ ಕೈಗಾರಿಕಾ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಭಯ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾರಾಷ್ಟ್ರದಲ್ಲೂ ಇದೇ ಮಾದರಿಯಲ್ಲಿ ಗಡಿ ಭಾಗದಲ್ಲಿ ಹೂಡಿಕೆಗೆ ವಿಶೇಷವಾಗಿ ಸ್ಟಾರ್‌ ಕ್ಲಾಸ್‌ ಕೈಗಾರಿಕಾ ಪಾರ್ಕ್‌ ಸ್ಥಾಪಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೂಡಿಕೆ ಮಾಡುವವರಿಗೆ ವಿಶೇಷ ರಿಯಾಯಿತಿ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಆಟೋಮೊಬೈಲ್‌ ಮತ್ತು ಸೆಮಿಕಂಡಕ್ಟರ್‌ ಉದ್ಯಮಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ರಷ್ಯಾದ ಎಲೆಕ್ಟ್ರಿಕ್‌ ವಾಹನ ತಯಾರಿಕಾ ಕಂಪನಿಯೊಂದು ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಮನವೊಲಿಸಲಾಗಿದೆ. ಈ ಕಂಪನಿ ಸುಮಾರು ₹2500 ಕೋಟಿ ಹೂಡಿಕೆ ಮಾಡಲಿದೆ, ಬೆಳಗಾವಿ ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.

ಬೆಳಗಾವಿಯಲ್ಲಿ 700 ಎಕರೆ ಭೂಮಿ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿದ್ದು, ಅದನ್ನು ಕೈಗಾರಿಕಾ ಪಾರ್ಕ್‌ ಸ್ಥಾಪನೆಗೆ ಬಳಸಿಕೊಂಡು, ಅವರಿಗೆ ಬೇರೆ ಕಡೆ 1200 ಎಕರೆ ನೀಡುವ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜತೆ ಮಾತುಕತೆ ನಡೆಸಲಾಗುವುದು ಎಂದೂ ನಿರಾಣಿ ಭರವಸೆ ನೀಡಿದರು.

ಅಲ್ಲದೇ, ಬೆಳಗಾವಿ ತಾಲ್ಲೂಕಿನಲ್ಲಿ ಖಾಸಗಿ ಕೈಗಾರಿಕೋದ್ಯಮಗಳು ಆಟೋಮೊಬೈಲ್‌ ಉದ್ಯಮ ಸ್ಥಾಪಿಸಲು ಮುಂದೆ ಬಂದರೆ ಅವರಿಗೆ ಬೆಂಬಲ ಸೇವೆ ನೀಡಿ, ಕೈಗಾರಿಕಾ ನೀತಿ2020–25 ರಡಿ ಸಿಗುವ ರಿಯಾಯಿತಿ ಹಾಗೂ ಉತ್ತೇಜನ ನೀಡಲಾಗುವುದು. ಜಿಲ್ಲೆಯಲ್ಲಿ ಫೌಂಡ್ರಿ, ಮಿಷನ್‌ ಕಾಂಪೊನೆಂಟ್ಸ್‌, ಸಿಮೆಂಟ್‌, ಸಕ್ಕರೆ, ಬೆಲ್ಲ, ಜನರಲ್ ಎಂಜಿನಿಯರಿಂಗ್‌, ಜವಳಿ, ಕೃಷಿ ಆಧಾರಿತ ಮತ್ತು ಇನ್ನಿತರ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ವಿಷಯ ಪ್ರಸ್ತಾಪಿಸಿದ ಅಭಯ ಪಾಟೀಲ, ಕಳೆದ 35 ವರ್ಷಗಳಿಂದ ಒಂದೇ ಒಂದು ಹೊಸ ಉದ್ಯಮಗಳು ಬಂದಿಲ್ಲ. ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡದೇ ಗಡಿ ಭಾಗದ ಅಭಿವೃದ್ಧಿ ಬಗ್ಗೆ ಭಾಷಣ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಗಡಿ ಭಾಗದಲ್ಲಿ ಉದ್ಯಮಗಳ ಸ್ಥಾಪನೆಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಇಲ್ಲೂ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಬಿಯಾಂಡ್‌ ಬೆಂಗಳೂರು, ಬಿಯಾಂಡ್‌ ಹುಬ್ಬಳ್ಳಿಯಿಂದ ಆಚೆಗೆ ಏನೂ ಆಗುತ್ತಿಲ್ಲ. ಬೆಳಗಾವಿಗೂ ಉದ್ಯಮಗಳನ್ನು ತರುವುದರ ಜತೆಗೆ ಇಲ್ಲಿನ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT