ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ವಾರ ಲಾಕ್‌ಡೌನ್‌ ವಿಸ್ತರಿಸಿ: ಮುಖ್ಯಮಂತ್ರಿಗೆ ಸಚಿವ ಕಾರಜೋಳ ಮನವಿ

Last Updated 10 ಜೂನ್ 2021, 7:05 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಕೋವಿಡ್–19 ಪಾಸಿಟಿವಿಟಿ ದರ ಶೇ.9ರ ಆಸುಪಾಸಿನಲ್ಲಿದೆ. ಹೀಗಾಗಿ, ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿಯೊಂದಿಗೆ ಲಾಕ್‌ಡೌನ್ ಅನ್ನು ಇನ್ನೊಂದು ವಾರ ವಿಸ್ತರಿಸಬೇಕು’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕೋರಿದರು.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಬೆಳಗಾವಿಯೂ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಆಟೊಮೊಬೈಲ್, ಕಟ್ಟಡ ನಿರ್ಮಾಣದಂತಹ ಪ್ರಮುಖ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಇನ್ನೊಂದು ವಾರ ಲಾಕಡೌನ್ ಮುಂದುವರಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ಪಡಿತರ ವಿತರಣೆ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಸಂಭವನೀಯ ಕೋವಿಡ್ 3ನೇ ಅಲೆಯ ನಿರ್ವಹಣೆಗೆ ಮಕ್ಕಳ ಆಸ್ಪತ್ರೆಯನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಒಟ್ಟಾರೆ 135 ತಂಡಗಳನ್ನು ರಚಿಸಿಕೊಂಡು ಇದುವರೆಗೆ 1,300ಕ್ಕೂ ಗ್ರಾಮಗಳಲ್ಲಿ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ‍್ಯಾಟ್) ಮಾಡಲಾಗಿದೆ. ಇತರ ಪರೀಕ್ಷೆ ಸೇರಿದಂತೆ ಒಟ್ಟಾರೆ ಕೋವಿಡ್ ಪಾಸಿಟಿವಿಟಿ ದರ ಶೇ.8.9ರಷ್ಟಿದೆ. ಗಡಿ ಭಾಗದ ದೊಡ್ಡ ಜಿಲ್ಲೆ ಆಗಿರುವುದರಿಂದ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಇನ್ನೂ ಒಂದು ವಾರ ಲಾಕ್‌ಡೌನ್ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಆದ್ದರಿಂದ ಮುಂದುವರಿಸಬೇಕು’ ಎಂದು ಮುಖ್ಯಮಂತ್ರಿ ಮನವರಿಕೆಗೆ ಪ್ರಯತ್ನಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆ ಇದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಶೇ.10 ಹಾಗೂ ಅದಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ. ಇನ್ನೊಂದು ವಾರ ಅವಕಾಶ ಸಿಕ್ಕರೆ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಗೊಳಿಸಲು ಅನುಕೂಲ ಆಗಲಿದೆ’ ಎಂದು ತಿಳಿಸಿದರು.

‘ರ‍್ಯಾಟ್‌ನಲ್ಲಿ ಪಾಸಿಟಿವಿಟಿ ದರ ಶೇ.4ಕ್ಕಿಂತ ಕಡಿಮೆ ಇದೆ. ಆದರೆ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿ ಕಂಡುಬಂದಿದೆ. ಇನ್ನೊಂದು ವಾರ ಕಾಲಾವಕಾಶ ಬೇಕು’ ಎಂದರು.

ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಲಾಕ್‌ಡೌನ್‌ ಅನ್ನು ಎಷ್ಟು ದಿನ ಮುಂದುವರಿಸುವುದು? ಹೀಗೆ ಮುಂದುವರಿಸುತ್ತಾ ಹೋದರೆ ಆರ್ಥಿಕ ಪರಿಸ್ಥಿತಿ, ಜನಸಾಮಾನ್ಯರ ಪರಿಸ್ಥಿತಿ ಏನಾಗಲಿದೆ?’ ಎಂದು ಕೇಳಿದರು.

‘ಕೆಲವು ಕಡೆಗಳಲ್ಲಿ ಲಾಕ್‌ಡೌನ್ ಮುಂದುವರಿಸಿ, ಕೆಲವೆಡೆ ಅನ್‌ಲಾಕ್ ಮಾಡಿದರೆ ಎಲ್ಲ ಕಡೆ ಹರಡುವುದಿಲ್ಲವೇ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT