ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರ ಸಮಾಜದ ಸಾಧಕರಿಗೆ ಸನ್ಮಾನ

Last Updated 8 ಏಪ್ರಿಲ್ 2022, 14:13 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿ ಪದಕಕ್ಕೆ ಭಾಜನವಾದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬೆಳಗಾವಿ ಉತ್ತರ ವಲಯದ ಇನ್‌ಸ್ಪೆಕ್ಟರ್‌ ಅಡಿವೇಶ ಗುದಿಗೊಪ್ಪ ಹಾಗೂ ಸಂಕೇಶ್ವರದ ಪಿಎಸ್ಐ ಗಣಪತಿ ಕೊಂಗನೊಳ್ಳಿ ಅವರನ್ನು ಭಗೀರಥ ಉಪ್ಪಾರ ಸಮಾಜದಿಂದ ಇಲ್ಲಿ ಗುರುವಾರ ಸತ್ಕರಿಸಲಾಯಿತು.

ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಮತ್ತು ಜಿಲ್ಲಾ ಉಪ್ಪಾರ ಅಭಿವೃದ್ಧಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ, ಇತ್ತೀಚಿಗೆ ಯೂನಿಯನ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಧಾರವಾಡದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಲಕ್ಷ್ಮಣ ಉಪ್ಪಾರ ಮತ್ತು ಇದೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಬೆಳಗಾವಿಯ ಹೇಮಾ ಇಡಗಲ್ ಅವರನ್ನೂ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮಣ ಉಪ್ಪಾರ, ‘ಹಿಂದುಳಿದ ಉಪ್ಪಾರ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳು ನಡೆಯುತ್ತಿವೆ. ಸಮಾಜವು ಶೈಕ್ಷಣಿಕವಾಗಿ ಜಾಗೃತಿ ಹೊಂದುತ್ತಿದೆ. ಈ ಕಾರಣದಿಂದಾಗಿ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಭವಿಷ್ಯವು ಉಜ್ವಲವಾಗಿರಲಿದೆ ಎನ್ನುವುದಕ್ಕೆ ಇವೆಲ್ಲವೂ ಸಾಕ್ಷಿಯಾಗಿವೆ’ ಎಂದು ಹೇಳಿದರು.

‘ಕ್ಲಾಸಿಕ್ ಸಂಸ್ಥೆ 25 ವರ್ಷಗಳಿಂದ ಧಾರವಾಡದಲ್ಲಿ ಸೇವೆ ಸಲ್ಲಿಸುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆದಿದ್ದಾರೆ. ಸಂಸ್ಥೆ ವತಿಯಿಂದ ಹೊರಬರುವ ಸ್ಪರ್ಧಾಸ್ಫುರ್ತಿ ಪತ್ರಿಕೆಯನ್ನು ಲಕ್ಷಾಂತರ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಮೆಚ್ಚಿಕೊಂಡಿದ್ದಾರೆ’ ಎಂದರು.

ಸನ್ಮಾನ ಸ್ವೀಕರಿಸಿದ ಅಡಿವೇಶ ಗುದಿಗೊಪ್ಪ ಮಾತನಾಡಿ, ‘ಸಮುದಾಯದ ಯುವಕರು ಸಾಧನೆ ಮಾಡಲು ಯಾರನ್ನೂ ಅವಲಂಬಿಸಬಾರದು. ಸ್ವಂತ ಪರಿಶ್ರಮದಿಂದ ಸಾಧಿಸಿ ನಾಡಿಗೆ ಮತ್ತು ಸಮುದಾಯಕ್ಕೆ ಹೆಸರು ತರಬೇಕು’ ಎಂದು ತಿಳಿಸಿದರು.

ಗಣಪತಿ ಕೊಂಗನೊಳ್ಳಿ, ‘ಸಮಾಜದ ಯುವಕರು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳುವ ಅಗತ್ಯವಿದೆ. ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಸಾಧಕರಿಂದ ಸ್ಫೂರ್ತಿ ಪಡೆದು ತಮ್ಮ ಸ್ಥಾನ ಗುರುತಿಸಿಕೊಳ್ಳಬೇಕು’ ಎಂದು ಹೇಳಿದರು.

ಉಪ್ಪಾರ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಉಪ್ಪಾರ, ಕಾರ್ಯದರ್ಶಿ ಬಿ.ಪಿ. ಮೇಲ್ಮಟ್ಟಿ, ಹಿರಿಯ ಅಧಿಕಾರಿಗಳಾದ ಸುಭಾಷ ಸಂಪಗಾವಿ ಮತ್ತು ಕೆ.ಎಲ್. ಗುಡೆನ್ನವರ ಮಾತನಾಡಿದರು. ವಕೀಲ ಎನ್.ಆರ್. ಲಾತೂರ, ಹಿರಿಯ ಅಧಿಕಾರಿ ಎಂ.ಆರ್. ಮುಂಜಿ, ಉದಯ ಇಡಗಲ್, ಡಾ.ಭೂಪಾಲ ಅಲಕನೂರೆ, ಬಾಲರಾಜ ಮಾಳೆಪ್ಪಗೋಳ, ವಿನಾಯಕ ಮದಲಭಾವಿ, ಉದಯ ಹೊನಕುಪ್ಪಿ, ಸಂತೋಷ ಉಪ್ಪಾರ ಉಪಸ್ಥಿತರಿದ್ದರು.

ಸ್ವಾತಿ ಕಿಡದಾಳ ಪ್ರಾರ್ಥಿಸಿದರು. ಶಿಕ್ಷಕಿ ಉಮಾ ಉಪ್ಪಾರ ನಿರೂಪಿಸಿದರು. ರವೀಂದ್ರ ಉಪ್ಪಾರ ಪರಿಚಯಿಸಿದರು. ಬಸವರಾಜ ತುಳಸಿಗೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT