‘ಬದಲಾವಣೆಗಾಗಿ ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ’

ಗುರುವಾರ , ಏಪ್ರಿಲ್ 25, 2019
21 °C
ಚಿತ್ರನಟ ಉಪೇಂದ್ರ ಮನವಿ

‘ಬದಲಾವಣೆಗಾಗಿ ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ’

Published:
Updated:
Prajavani

ಬೆಳಗಾವಿ: ‘ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಹಾಗೂ ಸಕಾರಾತ್ಮಕ ಬದಲಾವಣೆಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕಾರ ನೀಡಬೇಕು’ ಎಂದು ಪಕ್ಷದ ಸಂಸ್ಥಾಪಕ, ಚಲನಚಿತ್ರ ನಟ ಉಪೇಂದ್ರ ಹೇಳಿದರು.

‘ದೇಶದ ಸಮಸ್ಯೆಗಳಿಗೆ 70 ವರ್ಷ ಆಡಳಿತ ನಡೆಸಿದ ಸರ್ಕಾರಗಳೇ ಕಾರಣವಾಗಿವೆ. ಜನಪ್ರತಿನಿಧಿಗಳು ಸಮಸ್ಯೆಗಳನ್ನು ಪರಿಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ, ರಾಜಕೀಯೇತರವಾಗಿ ಕೆಲಸ ಮಾಡುತ್ತಿರುವ ಪ್ರಜಾಕೀಯದ ಪ್ರಯತ್ನವನ್ನು ಮತದಾರರು ಬೆಂಬಲಿಸಬೇಕು’ ಎಂದು ಕೋರಿದರು.

‘ಪ್ರಜೆಗಳಿಂದ, ಪ್ರಜೆಗಳಿಗಾಗಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ವಿಧಾನಸೌಧ ಹಾಗೂ ಸುವರ್ಣ ವಿಧಾನಸೌಧಗಳಿಗೆ ಶ್ರೀಸಾಮಾನ್ಯರಿಗೆ ಮುಕ್ತ ಅವಕಾಶ ನೀಡಲಾಗುತ್ತಿಲ್ಲ. ಇಂದಿಗೂ ಜನರು ರಸ್ತೆಯಲ್ಲಿ ನಿಂತು ಈ ಸೌಧಗಳನ್ನು ನೋಡುತ್ತಿದ್ದಾರೆ. ನಮ್ಮ ರಾಜಕಾರಣಿಗಳು ಈ ಸೌಧಗಳನ್ನು ವ್ಯಾಪಾರ– ವಹಿವಾಟಿನ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆಯೇ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬಳಸುತ್ತಿಲ್ಲ’ ಎಂದು ದೂರಿದರು.

‘ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಲು ನಾವು ರಾಜಕೀಯ ನಾಯಕರಲ್ಲ. ಜನರು ಹೇಳಿದಂತೆ ಕೇಳುವ, ಕೆಲಸ ಮಾಡುವ ಕಾರ್ಮಿಕರು ನಾವು. ಹೀಗಾಗಿ, ಈ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ಒಳಗೊಂಡಿರುವ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ. ಜನರೇ ಪ್ರಣಾಳಿಕೆಗಳನ್ನು ನಿರ್ಧರಿಸಿಕೊಳ್ಳಲಿ ಎಂದು ಖಾಲಿ ಪೇಪರ್ ನೀಡಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

‘ಜನರು ಹೇಳಿದ ಕೆಲಸ ಮಾಡುವವರನ್ನು ಕೊಡುವುದು ನಮ್ಮ ಪಕ್ಷದ ಉದ್ದೇಶ. ನಮ್ಮದು ಜನರ ಪಕ್ಷ. ಚುನಾವಣೆ ವ್ಯಾಪಾರವಲ್ಲ. ಅದೊಂದು ಸಮಾಜಸೇವೆ. ಈ ನಮ್ಮ ವಿಚಾರಗಳನ್ನು ನೋಡಿ ಜನರು ಬೆಂಬಲಿಸಬೇಕು’ ಎಂದರು.

‘ಹಣ, ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ರಾಜಕೀಯ  ಕ್ಷೇತ್ರವನ್ನು ಬಿಡಿಸಬೇಕಾಗಿದೆ. ರಾಜಕೀಯದ ಕೀಯನ್ನು ಜನರು ತೆಗೆದುಕೊಳ್ಳಬೇಕು. ವಿಚಾರವಂತರು, ಪ್ರಾಮಾಣಿಕರಿಗೆ ಅವಕಾಶ ಕೊಡಬೇಕು. ಹಣವಂತರು ಮಾತ್ರ ರಾಜಕೀಯಕ್ಕೆ ಬರಬೇಕು ಎಂಬ ಮನೋಭಾವ ಹೋಗಬೇಕು’ ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮಂಜುನಾಥ ರಾಜಪ್ಪನವರ ಇದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !