ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೊದಲ ಕಿಸಾನ್ ರೈಲಿಗೆ ಚಾಲನೆ

ರಾಜ್ಯ ಪ್ರಸ್ತಾವ ಸಲ್ಲಿಸಿದರೆ ಪರಿಶೀಲನೆ: ಸಚಿವ ಅಂಗಡಿ
Last Updated 7 ಆಗಸ್ಟ್ 2020, 6:49 IST
ಅಕ್ಷರ ಗಾತ್ರ

ಬೆಳಗಾವಿ: ದೇಶದ ಮೊಟ್ಟ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಹಸಿರುನಿಶಾನೆ ತೋರಿದ ಕಾರ್ಯಕ್ರಮವನ್ನು ಇಲ್ಲಿನ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಚೇರಿಯಲ್ಲಿ ನೇರಪ್ರಸಾರ ಮಾಡಲಾಯಿತು.

ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸಲಿರುವ ರೈಲಿಗೆ ವರ್ಚುವಲ್ ವೇದಿಕೆ ಮೂಲಕ ನವದೆಹಲಿಯಿಂದ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಚಿವ ತೋಮರ್, ‘ಕಿಸಾನ್ ರೈಲು ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸಲು ಸಹಕಾರಿಯಾಗಲಿದೆ. ಪ್ರಧಾನ ಮಂತ್ರಿ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಇಂತಹ‌ ಕಿಸಾನ್ ರೈಲುಗಳು ಪೂರಕವಾಗಿವೆ. ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರ‌ ಕುಸಿತ ತಡೆಯಲು ಸಾಧ್ಯ. ಆದ್ದರಿಂದ ಇಂತಹ ಮಾರ್ಗದ ಅಗತ್ಯವಿದೆ. ಈ ಮೂಲಕ ಇಲಾಖೆಯೂ ರೈತರ ಅಭಿವೃದ್ಧಿಗೆ ಕೈಜೋಡಿಸಿದೆ’ ಎಂದರು.

ರೈಲ್ವೆ ಸಚಿವ ಪಿಯುಷ್ ಗೋಯಲ್, ‘ಮೊದಲ ಕಿಸಾನ್ ರೈಲು ಪ್ರಾಯೋಗಿಕ ಯೋಜನೆಯಾಗಿದೆ. ದೇಶದ ಕೃಷಿಕರಿಗೆ ನೆರವಾಗಲು ಇಲಾಖೆಯು ಮುಂದಾಗಿದೆ. ದೇಶದ ಪ್ರಗತಿಯ ಎಂಜಿನ್ ರೈಲ್ವೆ ಇಲಾಖೆ ಆಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ’ ಎಂದು ಹೇಳಿದರು.

‘ಮೂಲೆ‌ ಮೂಲೆಗಳಿಗೆ ಕೃಷಿ ಉತ್ಪನ್ನಗಳ ಸುಗಮ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ಸಾಧ್ಯವಾಗಲಿದೆ. ಇದರಿಂದ ದೇಶದ ರೈತ ಸಮುದಾಯ ಸ್ವಾವಲಂಬಿ ಆಗುವ ಜೊತೆಗೆ ಪ್ರಗತಿಗೆ ಸಹಕಾರಿಯಾಗಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಿಸಾನ್ ರೈಲು ಮೂಲಕ ಕೃಷಿ ಉತ್ಪನ್ನಗಳನ್ನು ಎಲ್ಲೆಡೆ ತಲುಪಿಸುವುದು ನಮ್ಮ ಆಶಯವಾಗಿದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸುರೇಶ ಅಂಗಡಿ, ‘ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ಇಲ್ಲಿಂದಲೂ ಕಿಸಾನ್ ರೈಲು ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

‘ಪ್ರಧಾನಿ ನೀಡಿದ ಭರವಸೆಯಂತೆ ದೇವಲಾಲಿ-ದಾನಾಪುರ ನಡುವೆ ಕಿಸಾನ್ ರೈಲು ಆರಂಭಿಸಲಾಗಿದೆ. ಪ್ರತಿ ಭಾನುವಾರ ಸಂಚರಿಸಲಿದೆ. ಇದು ರೈತರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ. ಕೃಷಿಕರಿಗೆ ವರದಾನವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT