ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಮಹಾ’ ನೆರೆಗೆ ನಲುಗಿದ ಜನಜೀವನ

Last Updated 5 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕೃಷ್ಣಾ ಹಾಗೂ ದೂಧ್‌ಗಂಗಾ ನದಿಗಳ ಭೋರ್ಗರೆತಕ್ಕೆ ಸಿಲುಕಿದ ಗಡಿಪ್ರದೇಶ ಚಿಕ್ಕೋಡಿ ತಾಲ್ಲೂಕು ಅಕ್ಷರಶಃ ನಲುಗಿ ಹೋಗಿದೆ. ಎಲ್ಲಿ ನೋಡಿದರಲ್ಲಿ ನೀರೇ ನೀರು ಕಾಣುತ್ತಿದೆ... ಹೊಲ– ಗದ್ದೆ, ಮನೆಗಳಿಗೆ ನೀರು ನುಗ್ಗಿದ್ದು, ಜನರು ಬೀದಿಗೆ ಬಿದ್ದಿದ್ದಾರೆ. ಇದೆಲ್ಲಿ 2005ರ ಪ್ರವಾಹ ಸ್ಥಿತಿ ಪುನರಾವರ್ತನೆಯಾಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ.

ವಾಡಿಕೆಯಂತೆ ಇಲ್ಲಿ ಮಳೆ ಸುರಿಯುತ್ತಿದ್ದರೂ, ನೆರೆಯ ದಕ್ಷಿಣ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಅಪಾಯದ ಸ್ಥಿತಿ ಬಂದೊದಗಿದೆ. ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸೋಮವಾರ 2.90ಲಕ್ಷ ಕ್ಯುಸೆಕ್‌ಗಿಂತಲೂ ಹೆಚ್ಚು ನೀರು ಹರಿದುಬಂದಿದೆ.

ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿಪಾತ್ರದ ತೋಟದ ಮನೆಯಲ್ಲಿರುವವರನ್ನು ಸ್ಥಳಾಂತರಿಸಲಾಗುತ್ತಿದೆ. ದೇಸಾಯಿ ಇಂಗಳಿ ಗ್ರಾಮದ ನದಿಪಕ್ಕದ ಜನರನ್ನು ಬೋಟ್‌ನಲ್ಲಿ ಸಾಗಿಸಲಾಯಿತು. ಹಾಸಿಗೆ– ದಿಂಬು, ದಿನಸಿ ವಸ್ತುಗಳು ಸೇರಿದಂತೆ ಮನೆಯಲ್ಲಿ ಸಾಕಿದ್ದ ಎಮ್ಮೆ, ಕರು, ನಾಯಿ, ಬೆಕ್ಕು, ಕೋಳಿ ಮರಿಗಳನ್ನೂ ದೋಣಿಯಲ್ಲಿ ಹಾಕಿಕೊಂಡು ಸಾಗಿಸಲಾಯಿತು. 50 ಯೋಧರು

‘ನಿನ್ನೆಗಿಂತ ಇವತ್ತು 2 ಅಡಿ ಹೆಚ್ಚು ನೀರು ಬಂದಿದೆ. ಕೊಯ್ನಾ ಜಲಾಶಯದಿಂದ ಇನ್ನೂ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ ಎಲ್ಲರನ್ನೂ ಸ್ಥಳಾಂತರ ಮಾಡುತ್ತಿದ್ದೇವೆ. 14 ವರ್ಷಗಳ ನಂತರ ಇಂತಹ ಗಂಭೀರ ಸ್ಥಿತಿ ಎದುರಾಗಿದೆ’ ಎಂದು ದೇಸಾಯಿ ಇಂಗಳಿ ಗ್ರಾಮದ ರಾಜು ಬಾಮನೆ ನೆನಪಿಸಿಕೊಂಡರು.

ಮಹಾವೀರ ಕೋಳಿ, ಬಾಬು ಕೋಳಿ ಅವರಿಗೆ ಸೇರಿದ ಮನೆಯ ಸಾಮಾನುಗಳನ್ನೂ ದೋಣಿಯ ಮೂಲಕ ನದಿದಂಡೆಗೆ ತಂದು ಇಳಿಸಲಾಯಿತು.

‘2005ರಲ್ಲಿ ಕಲ್ಲೋಳದ ನರಸಿಂಹ ದೇವಾಲಯದ ಕಾಂಪೌಂಡ್‌ಗೆ ನೀರು ತಾಗಿತ್ತು. ಈಗ 200 ಮೀಟರ್‌ ಅಷ್ಟೇ ಬಾಕಿ ಇದೆ. ಸದ್ಯಕ್ಕೆ ಎರಡೂವರೆ ಲಕ್ಷ ಕ್ಯುಸೆಕ್‌ ನೀರು ಬರುತ್ತಿದೆ. ಇದು 4 ಲಕ್ಷ ಕ್ಯುಸೆಕ್‌ ಮಿತಿ ದಾಟಿದರೆ ದೇವಾಲಯಕ್ಕೆ ತಲುಪುತ್ತದೆ. ಆಗ ಗ್ರಾಮದೊಳಗೂ ನೀರು ನುಗ್ಗಲಿದೆ’ ಎಂದು ತುಕಾರಾಮ ಕೋಳಿ ಆತಂಕ ವ್ಯಕ್ತಪಡಿಸಿದರು.

ಜನಜೀವನ ಅಸ್ತವ್ಯಸ್ಥ:ಗ್ರಾಮಗಳ ಯುವಕರು, ಹಿರಿಯರು ತಮ್ಮ ದೈನಂದಿನ ಚಟುವಟಿಕೆಗಳನ್ನು ಬಿಟ್ಟು, ನದಿ ನೀರು ಕಾಯುತ್ತಿದ್ದಾರೆ. ಹೊಲ– ಗದ್ದೆಗಳತ್ತಲೂ ತಲೆಹಾಕಿಲ್ಲ. ಮಾಂಜರಿ ಹಾಗೂ ಅಂಕಲಿ ಪ್ರದೇಶದ 300ಕ್ಕೂ ಹೆಚ್ಚು ಇಟ್ಟಿಗೆಗಳೊಳಗೆ ನೀರು ನುಗ್ಗಿದ್ದು, ಕೆಲಸ ಸ್ಥಗಿತಗೊಂಡಿದೆ.

ಶಾಲೆಗೆ ಚಕ್ಕರ್‌:ಕಳೆದ ಒಂದು ವಾರದಿಂದ ಮಕ್ಕಳು ಶಾಲೆಯ ಮುಖನೋಡಿಲ್ಲ. ಯಾವಾಗ ನೀರು ಬರುತ್ತದೆಯೋ, ಯಾವಾಗ ಸಾಮಾನು ಸರಂಜಾಮುಗಳನ್ನು ಎತ್ತಿಕೊಂಡು ಹೋಗಬೇಕಾಗುತ್ತದೆಯೋ ಎಂದುಕೊಂಡು ಕಾಲಕಳೆಯುತ್ತಿದ್ದಾರೆ.

ನೆಂಟರ ಮನೆಗಳಿಗೆ:ಗ್ರಾಮದ ಎತ್ತರದ ಪ್ರದೇಶಗಳಲ್ಲಿಯೂ ತೋಳ್ಪಟ್ಟಿ ಜನರು ಮನೆಗಳನ್ನು ಹೊಂದಿದ್ದಾರೆ. ತೋಟದ ಮನೆ ಬಿಟ್ಟು, ಗ್ರಾಮದ ಮನೆಗೆ ಬರುತ್ತಿದ್ದಾರೆ. ಇನ್ನು ಕೆಲವರು, ದೂರದ ಗ್ರಾಮಗಳಲ್ಲಿರುವ ತಮ್ಮ ನೆಂಟರ ಮನೆಗೆ ಹೋಗುತ್ತಿದ್ದಾರೆ. ಆದರೆ, ಜಿಲ್ಲಾಡಳಿತವು ತೆರೆದಿರುವ ಗಂಜಿ ಕೇಂದ್ರಗಳ ಸುಳಿದಿಲ್ಲ.

‘ಜಿಲ್ಲಾಧಿಕಾರಿಯವರ ಸೂಚನೆಯಂತೆ ಗಂಜಿ ಕೇಂದ್ರ ತೆರೆದಿದ್ದೇವೆ. ಆಹಾರ, ಹೊದಿಕೆ ವ್ಯವಸ್ಥೆ ಮಾಡಿಕೊಂಡು ಕಾಯುತ್ತಿದ್ದೇವೆ. ಆದರೆ, ಇದುವರೆಗೆ ಯಾರೊಬ್ಬರೂ ಬಂದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಅಪಾರ ಬೆಳೆ ನಾಶ:ನದಿಪಾತ್ರಕ್ಕಿಂತ 200ಮೀಟರ್‌ದಿಂದ– 300 ಮೀಟರ್‌ವರೆಗೆ ನೀರು ವಿಸ್ತರಣೆಯಾಗುತ್ತ ಸಾಗಿದೆ. ಅಕ್ಕಪಕ್ಕದಲ್ಲಿ 4 ಅಡಿಯವರೆಗೆ ಬೆಳೆದುನಿಂತಿದ್ದ ಕಬ್ಬು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿದೆ. ಕುಳಿಯಲ್ಲಿ ನೀರು– ಕೆಸರು ತುಂಬಿ, ಬೆಳೆ ಸಂಪೂರ್ಣ ನಾಶವಾಗಿ ಹೋಗಿದೆ. ಇಂತಹ ಸ್ಥಿತಿ ಚಂದೂರ, ಕಲ್ಲೋಳ, ಮಾಂಜರಿ, ಅಂಕಲಿ, ಮಲ್ಲಿಕವಾಡ, ಯಕ್ಸಂಬಾ, ಸದಲಗಾ, ಬೇಡಕಿಹಾಳ, ಶಮನೇವಾಡಿಯಲ್ಲಿ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT