ಬುಧವಾರ, ಸೆಪ್ಟೆಂಬರ್ 22, 2021
21 °C
ಹಣ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು

PV Web Exclusive| ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೈಸೇರದ ‘ತುರ್ತು ಪರಿಹಾರ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನೆರೆ ಮತ್ತು ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡವರಿಗೆ ತುರ್ತು ಪರಿಹಾರವಾಗಿ ₹10 ಸಾವಿರ ಬಿಡುಗಡೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿ 11 ದಿನಗಳಾದರೂ ಹಣವು ಸಂತ್ರಸ್ತರ ಕೈಸೇರಿಲ್ಲ.

‘ಮನೆಯನ್ನು ಸಂಪೂರ್ಣ ಕಳೆದುಕೊಂಡವರಿಗೆ ₹ 5 ಲಕ್ಷ, ಭಾಗಶಃ ಹಾನಿಯಾಗಿದ್ದರೆ ₹ 3 ಲಕ್ಷ, ಅಲ್ಪ ಹಾನಿಯಾಗಿದ್ದರೆ ₹ 50ಸಾವಿರ ನೀಡಲಾಗುತ್ತದೆ.  ಕಳೆದ ವರ್ಷ ಮನೆ ಕಳೆದುಕೊಂಡು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದರೆ ಅದಕ್ಕೆ ಬಾಕಿ ಇರುವ ಹಣ ಪಾವತಿಗೂ ಆದೇಶ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಮೊದಲ ಕಂತಿನ ಪರಿಹಾರ ನೀಡುವ ಪ್ರಕ್ರಿಯೆಯೂ ಆರಂಭವಾಗಿಲ್ಲ. ಇದರಿಂದ ಸಂತ್ರಸ್ತರು ಅತಂತ್ರ ಸ್ಥಿತಿಯಲ್ಲೇ ಇದ್ದಾರೆ.

ಬೆಳಗಾವಿ, ಉತ್ತರಕನ್ನಡ, ಬಾಗಲಕೋಟೆ ಸೇರಿದಂತೆ 13 ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, 1,228 ಮನೆಗಳು ಪೂರ್ಣ ಕುಸಿದಿವೆ. 9,310 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 2.03 ಲಕ್ಷ ಹೆಕ್ಟೇರ್ ಬೆಳೆ ಹಾಳಾಗಿದೆ. 7,705 ಕಿ.ಮೀ. ರಸ್ತೆ, 794 ಸೇತುವೆ, 385 ಶಾಲಾ ಕೊಠಡಿಗಳು, 43 ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದೆ. 33,548 ವಿದ್ಯುತ್‌ ಕಂಬಗಳು ಬಿದ್ದಿವೆ. 7,581 ಪರಿವರ್ತಕಗಳು ಕೆಟ್ಟಿವೆ.

ಪಟ್ಟಿಯೇ ಸಿದ್ಧವಾಗಿಲ್ಲ:

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಜಿಲ್ಲೆಯೊಂದರಲ್ಲೇ 14 ತಾಲ್ಲೂಕುಗಳ 201 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ನೆರೆಯಲ್ಲಿ ಸಿಲುಕಿದ್ದ 1,50,015 ಜನರನ್ನು ಹಾಗೂ 67,329 ಜಾನುವಾರುಗಳನ್ನು ರಕ್ಷಿಸಲಾಗಿದೆ. 1,19,422 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅಲ್ಲಲ್ಲಿ 324 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಗೂ 5,003 ಭಾಗಶಃ ಹಾನಿಗೊಳಗಾಗಿವೆ. ₹ 2,800 ಕೋಟಿ ಹಾನಿ ಅಂದಾಜಿಸಲಾಗಿದೆ. ಇಲ್ಲಿ ನಷ್ಟ ಅನುಭವಿಸಿದವರ ಪಟ್ಟಿ ಸಿದ್ಧಪಡಿಸಿ ₹10ಸಾವಿರ ತುರ್ತು ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳುವುದಕ್ಕೂ ವಿಳಂಬ ಮಾಡಲಾಗುತ್ತಿದೆ.

ಅಧಿಕಾರಿಗಳು, ಸಂತ್ರಸ್ತರ ವಿವರ ಪಡೆಯುವ ಕಾರ್ಯವನ್ನೇ ಮುಗಿಸಿಲ್ಲ. ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಸಂತ್ರಸ್ತರಾದ 22 ಹಳ್ಳಿಗಳ ಜನರು ತಾತ್ಕಾಲಿಕ ಶೆಡ್‌ನಲ್ಲೇ ಇದ್ದಾರೆ. ಕೆಲವರು ಸಂಬಂಧಿಕರ ಮನೆಗಳಲ್ಲಿದ್ದಾರೆ. ಅಥಣಿಯಲ್ಲಿ ಕಾಳಜಿ ಕೇಂದ್ರಗಳನ್ನು ಮುಂದುವರಿಸಲಾಗಿದೆ.

ಖಾತೆಗಳಿಗೆ ಜಮಾ ಮಾಡ್ತೀವಿ: ‘ಪರಿಹಾರ ವಿತರಣೆಯಲ್ಲಿ ಅಕ್ರಮ ಆಗದಿರಲೆಂದು, ಸಂತ್ರಸ್ತರ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ನೇರವಾಗಿ ಹಣ ಹಾಕಲಾಗುವುದು. ಪೂರ್ಣ ಮನೆ ಬಿದ್ದಿದ್ದರೆ ಮಾತ್ರ ₹ 10ಸಾವಿರ ತುರ್ತು ಪರಿಹಾರ ಸಿಗಲಿದೆ. ಅವರ ಪಟ್ಟಿಯನ್ನು ಸಮರ್ಪಕ ಮಾಹಿತಿಯೊಂದಿಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ  ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಚಿಕ್ಕೋಡಿ ವಿಭಾಗದಲ್ಲಿ ಮತ್ತು ಗೋಕಾಕ ಹಾಗೂ ಹುಕ್ಕೇರಿ ತಾಲ್ಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ. ಮನೆ ಕಳೆದುಕೊಂಡವರ ಬ್ಯಾಂಕ್‌ ಖಾತೆ, ಆಧಾರ್‌ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಸಹಿತ ಸಂಪೂರ್ಣ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

-------

ತಯಾರಿ ನಡೆದಿದೆ

ಸಂತ್ರಸ್ತರಿಗೆ ಪರಿಹಾರ ಪಾವತಿಸಲು ಬೇಕಾದ ಪೂರ್ವ ತಯಾರಿ ನಡೆಸಲಾಗುತ್ತಿದೆ. ಅರ್ಹರಿಗೆ ಅವರವರ ಖಾತೆಗಳಿಗೆ ಶೀಘ್ರದಲ್ಲೇ ಹಣ ಜಮಾ ಮಾಡಲಾಗುವುದು.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

-------

ಪರಿಹಾರ ಬಂದಿಲ್ಲ

ಕೃಷ್ಣಾ ನದಿ ಪ್ರವಾಹದಿಂದ ನಮ್ಮ ಮನೆ ಬಿದ್ದಿದೆ. ನಾವು ಕಲ್ಲೋಳದಲ್ಲಿ ಸಂಬಂಧಿಕರ ಮನೆಯಲ್ಲಿದ್ದೇವೆ. ಗ್ರಾಮ ಪಂಚಾಯ್ತಿಯವರಾಗಲಿ ಅಧಿಕಾರಿಗಳಾಗಲಿ ಸಮೀಕ್ಷೆಯನ್ನೂ ನಡೆಸಿಲ್ಲ. ₹ 10ಸಾವಿರ ಪರಿಹಾರವೂ ಸಿಕ್ಕಿಲ್ಲ.

–ರಾವಸಾಬ ಶಂಕರ ಕೋರೆ, ಮಾಂಜರಿ, ಚಿಕ್ಕೋಡಿ ತಾಲ್ಲೂಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು