ಶುಕ್ರವಾರ, ಮೇ 29, 2020
27 °C
ಸಂಗೀತ ಕಲಾವಿದರಿಗೆ ಆಹಾರ ಕಿಟ್ ವಿತರಣೆ

ಮಾನವೀಯ ಗುಣವಿಲ್ಲದರು ಮನುಷ್ಯರೆ ಅಲ್ಲ: ಲೇಖಕ ಬಿ.ಎಸ್. ಗವಿಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೊರೊನಾ ವೈರಸ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯಿಂದ ನಡೆದುಕೊಳ್ಳಬೇಕು. ಮನುಷ್ಯತ್ವ ಹಾಗೂ ಮಾನವೀಯತೆ ಬಿಟ್ಟವರು ಮನುಷ್ಯರೆ ಅಲ್ಲ’ ಎಂದು ಎಂದು ಹಿರಿಯ ಲೇಖಕ ಬಿ.ಎಸ್. ಗವಿಮಠ ಹೇಳಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಇಲ್ಲಿನ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೂವತ್ತು ಸಂಗೀತ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಕವಿ ಸಿದ್ದಯ್ಯ ಪುರಾಣಿಕರ ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯನ್ನು ಮರೆಯಬಾರದು. ನಾವು ದಾನ ಮಾಡಿದೆವು; ಅವರು ದಾನ ಮಾಡಿದರು ಎಂಬ ಮಾತೆಲ್ಲ ಸುಳ್ಳು. ಎಲ್ಲವೂ ಮೇಲಿರುವ ಪರಮಾತ್ಮನಿಗೆ ಸೇರಿದ್ದು. ಎರಡು ತಿಂಗಳಿಂದ ಹಸಿದವರತ್ತ ನಮ್ಮ ಚಿತ್ತ ಅಭಿಯಾನ ನಡೆಸಿಕೊಂಡು ಬಂದಿರುವ ಕ್ರಿಯಾ ಸಮಿತಿಯ ಸೇವೆ ಸಾಮಾನ್ಯ ಸಂಗತಿಯಲ್ಲ. ಇದೊಂದು ದಾಖಲೆಯಾಗಿ ಉಳಿಯಲಿದೆ’ ಎಂದರು.

ಹಿರಿಯ ಸಾಹಿತಿ ಶಿರೀಶ ಜೋಶಿ ಮಾತನಾಡಿ, ‘ಸಂಗೀತ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ ಅವರಿಗೆ ಆಹಾರ ಧಾನ್ಯ ಒದಗಿಸಿದ್ದು ರಾಜ್ಯದಲ್ಲಿಯೇ ಇದೇ ಮೊದಲಾಗಿದೆ. ಇಂದು ರಂಗಭೂಮಿ ಹಾಗೂ ಸಂಗೀತ ಕಲಾವಿದರು ನಿಜವಾಗಿಯೂ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ‘ಸಾಹಿತಿಗಳು ಮತ್ತು ಕಲಾವಿದರಿಗೆ ಆರ್ಥಿಕ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಕೊಂಡಿದೆ. ಸರ್ಕಾರದ ಆದೇಶದಂತೆ ಕಲಾವಿದರು, ಸಾಹಿತಿಗಳ ಪಟ್ಟಿಯನ್ನು  ಸಲ್ಲಿಸಲಾಗಿದೆ’ ಎಂದರು.

ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ಎರಡು ತಿಂಗಳಿಂದ ನಡೆದಿರುವ ಅಭಿಯಾನವು ಇನ್ನೂ ಮುಂದುವರಿಯಲಿದೆ. ಹೆಚ್ಚೆಚ್ಚು ದಾನಿಗಳು ಮುಂದೆ ಬರಬೇಕು’ ಎಂದು ಮನವಿ ಮಾಡಿದರು.

ಕ್ರಿಯಾ ಸಮಿತಿಯ ಸಾಗರ ಬೋರಗಲ್ಲ, ಹರೀಶ ಕರಿಗೊಣ್ಣವರ, ವೀರೇಂದ್ರ ಗೋಬರಿ ಇದ್ದರು.

ಗಾಯಕ ಸುರೇಶ ಚಂದರಗಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು