ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PU Result: ಬೆಳಗಾವಿ ಜಿಲ್ಲೆಗೆ ಹಿರಿಮೆ ತಂದ ನಾಲ್ವರು ಗ್ರಾಮೀಣ ವಿದ್ಯಾರ್ಥಿನಿಯರು

Published 11 ಏಪ್ರಿಲ್ 2024, 5:57 IST
Last Updated 11 ಏಪ್ರಿಲ್ 2024, 5:57 IST
ಅಕ್ಷರ ಗಾತ್ರ

ಅಥಣಿ: ಟಿವಿ, ಮೊಬೈಲ್‌ ನೋಡುವ ಗೀಳಿನಿಂದ ಹೊರಬಂದರೆ ಯಾರೆಲ್ಲರೂ ಉತ್ತಮ ಫಲಿತಾಂಶ ಪಡೆಯಬಹುದು. ಎಷ್ಟು ಫಲಿತಾಂಶ ಪಡೆಯುತ್ತೇವೆ ಎನ್ನುವುದಕ್ಕಿಂತ, ಫಲಿತಾಂಶ ಪಡೆಯಲು ಹೇಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುವುದು ಮುಖ್ಯ...

ರಾಜ್ಯಕ್ಕೆ ತೃತೀಯ ರ್‍ಯಾಂಕ್‌ ಪಡೆದ ಇಲ್ಲಿನ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರ ಅನುಭವದ ಮಾತುಗಳಿವು.

ವಿಜ್ಞಾನ ವಿಭಾಗದಲ್ಲಿ ಗೌರಿ ಸಂಜೀವ ಸೂರ್ಯವಂಶಿ 596, ವಾಣಿಜ್ಯ ವಿಭಾಗದಲ್ಲಿ ಜಿ.ಕೆ.ದಿವ್ಯಾ 594 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದವರಾದ ಈ ಮಕ್ಕಳು ಯಾವುದೇ ಟ್ಯೂಷನ್‌ಗೂ ಹೋಗದೆ ಶ್ರಮ‍ಪಟ್ಟು ರ್‍ಯಾಂಕ್‌ ಪಡೆದಿದ್ದಾರೆ. ನೆಪಗಳನ್ನು ಬದಿಗಿಟ್ಟು ತನ್ಮಯರಾಗಿ ಓದಿದರೆ ಯಶಸ್ಸು ಒಲಿದುಬರುತ್ತದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ತಮ್ಮ ಯಶಸ್ಸಿನ ಬಗ್ಗೆ ‘‍ಪ್ರಜಾವಾಣಿ’ ಜತೆಗೆ ಸಂತಸ ಹಂಚಿಕೊಂಡ ಗೌರಿ, ‘ಪ್ರತಿ ದಿನದ ಪಾಠಗಳನ್ನು ಅವತ್ತೇ ಓದಿ ಮುಗಿಸಿ ಬಿಡುತ್ತಿದ್ದೆ. ಪ್ರತಿ ದಿನ ನಸುಕಿನ 4ಕ್ಕೆ ಎದ್ದು ಓದುತ್ತಿದ್ದೆ. 8.30ಕ್ಕೆ ಕಾಲೇಜಿಗೆ ಹೋಗುತ್ತಿದ್ದೆ. ಸಂಜೆ 5ಕ್ಕೆ ಮರಳಿ ಮನೆಗೆ ಬಂದರೆ ಒಂದೆರಡು ತಾಸು ವಿಶ್ರಾಂತಿ. ರಾತ್ರಿ 10ಕ್ಕೆ ನಿದ್ದೆಗೆ ಜಾರುವುದು ನನ್ನ ದಿನಚರಿ’ ಎಂದರು.

‘ಕಾಲೇಜಿನಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಕ್ಷಣ ಬಿಟ್ಟು ಬೇರೆ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ. ಪ್ರತಿ ವಾರವೂ ಕಾಲೇಜಿನಲ್ಲಿ ಪರೀಕ್ಷೆಗಳನ್ನು ಇಟ್ಟು ಪುನರ್‌ ಮನನ ಮಾಡುತ್ತಿದ್ದರು. ನಮ್ಮ ತಪ್ಪುಗಳು ನಮಗೇ ಕಾಣಿಸುತ್ತಿದ್ದವು. ಇದು ತಿದ್ದಿಕೊಳ್ಳಲು ಸಹಾಯವಾಯಿತು’ ಎಂಬುದು ಅವರ ಅನಿಸಿಕೆ.

ಭರತನಾಟ್ಯ ಕಲಾವಿದೆಯೂ ಆಗಿರುವ ಗೌರಿ; ಲಲಿತಕಲೆ ವಿಭಾಗದ ಜ್ಯೂನಿಯರ್‌ ಪರೀಕ್ಷೆಯಲ್ಲಿ ಬಾಗಲಕೋಟೆ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವೈದ್ಯಕೀಯ ಕೋರ್ಸ್‌ ಆಯ್ದುಕೊಳ್ಳಬೇಕು ಎಂಬ ಹಂಬಲ ಅವರದು. ಸಿಇಟಿಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅವರ ತಂದೆ ಸಂಜೀವ ಪಿಟಿಒ, ತಾಯಿ ಶೋಭಾ ಶಿಕ್ಷಕಿ.

ಕಷ್ಟದಲ್ಲೂ ಕೈ ಹಿಡಿದ ಶ್ರದ್ಧೆ: ‘ಮನೆಯಲ್ಲಿ ಕಷ್ಟವಿದೆ. ಬಡ ಕುಟುಂಬ ನಮ್ಮದು. ನಾನು ತಾಯಿ ಜತೆಗೆ ಇದ್ದು ಅಥಣಿಯಲ್ಲಿ ಓದಿದ್ದೇನೆ. ಕಲಿಕೆ ಮೇಲಿನ ಶ್ರದ್ಧೆಯೇ ನಾನು ರ್‍ಯಾಂಕ್‌ ಗಳಿಸಲು ಕಾರಣ’ ಎನ್ನುತ್ತಾರೆ ದಿವ್ಯಾ.

‘ಚಾರ್ಟರ್ಡ್‌ ಅಕೌಂಟಂಟ್‌ ಆಗಬೇಕು ಎಂಬುದು ನನ್ನ ಗುರಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶೇ 96.80 ಅಂಕ ಪಡೆದಿದ್ದೆ. ಆದರೆ, ನನ್ನ ಗುರಿ ಬಿಡಬಾರದು ಎಂದು ವಾಣಿಜ್ಯ ವಿಭಾಗ ಆಯ್ದುಕೊಂಡೆ. ಸ್ಪಷ್ಟವಾದ ಗುರಿ, ನಿರ್ದಿಷ್ಟವಾದ ಮಾರ್ಗದರ್ಶನ ಇದ್ದುದರಿಂದ ಯಶಸ್ಸು ಗಳಿಸಿದ್ದೇನೆ. ತಡರಾತ್ರಿ 1ರವರೆಗೆ ಓದುವುದು, ಬೆಳಿಗ್ಗೆ 6ಕ್ಕೆ ಏಳುವುದು ನನ್ನ ದಿನಚರಿ. ಸೈಕ್ಲಿಂಗ್‌, ಡಾನ್ಸಿಂಗ್‌, ಡ್ರಾಯಿಂಗ್‌ ಹವ್ಯಾಸಗಳೂ ಇವೆ’ ಎಂದರು.

ಇವರ ತಂದೆ ಜಿ.ಕೆ.ಗುರುಬಸವರಾಜಯ್ಯ ಮಂಡ್ಯದಲ್ಲಿ ಖಾಸಗಿ ಕಂಪನಿ ಉದ್ಯೋಗಿ, ತಾಯಿ ಕರುಣಾ ಗೃಹಿಣಿ.

ಪ್ರತಿ ಶನಿವಾರ ಲಿಖಿತ ಪರೀಕ್ಷೆ ಸೋಮವಾರ ನೀಟ್‌ ಪರೀಕ್ಷೆ ರೂಢಿ ಮಾಡಿಸಿದ್ದೇವೆ. ನಿರ್ದಿಷ್ಟ ಗ್ರಾಫ್‌ನೊಂದಿಗೆ ಪಾಠ ಪ್ರವಚನ ಮುಗಿಸಿ ರಿವಿಜನ್‌ ಮಾಡಿಸಿದ್ದೇ ಯಶಸ್ಸಿಗೆ ಕಾರಣ
ಎಲ್.ಎನ್.ಬಣಜವಾಡ ಕಾಲೇಜು ಸಂಸ್ಥಾಪಕ
ಹಳ್ಳಿ ಕುಸುಮಗಳಿಗೆ 5ನೇ ರ್‍ಯಾಂಕ್‌
ಸವದತ್ತಿ: ಸವದತ್ತಿಯ ಕುಮಾರೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಕೊಟ್ರೆಪ್ಪ ಗುಲಗಂಜಿ (592) ಅಂಕ ಹಾಗೂ ಮುನವಳ್ಳಿಯ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಂಗವ್ವ ನಾಗೇಶ ಸುಣಧೋಳಿ (592) ಇಬ್ಬರೂ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ್‍ಯಾಂಕ್‌ ಪಡೆದಿದ್ದಾರೆ. ‘ನನ್ನ ತಂದೆ– ತಾಯಿ ಕೂಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನವಿದ್ದರೂ ನನ್ನ ಓದಿಗೆ ಏನೂ ಕಡಿಮೆ ಮಾಡಲಿಲ್ಲ. ಕಠಿಣ ಪರಿಶ್ರಮದಿಂದ ಓದಿದ್ದೇನೆ. ನಮ್ಮ ಶ್ರದ್ಧೆ ನಮ್ಮ ಕೈ ಬಿಡುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ’ ಎನ್ನವುದು ವಿಜಯಲಕ್ಷ್ಮಿ ಮಾತು. ಕನ್ನಡ ಭೂಗೋಳ ವಿಜ್ಞಾನ ಶಿಕ್ಷಣಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ 100 ಹಿಂದಿ 96 ಇತಿಹಾಸ 98 ರಾಜ್ಯಶಾಸ್ತ್ರದಲ್ಲಿ 98 ಅಂಕಗಳನ್ನು ಅವರು ಪಡೆದಿದ್ದಾರೆ. ಐಎಎಸ್‌ ಮಾಡಬೇಕು ಎಂಬದು ಅವರ ಮುಂದಿನ ಗುರಿ. ಮುನವಳ್ಳಿಯ ಗಂಗವ್ವ ನಾಗೇಶ ಸುಣಧೋಳಿ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದರೂ ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ. ನಿರಂತರ ಓದಿನಿಂದಲೇ ಯಶಸ್ಸಿ ಸಾಧಿಸಿದ್ದೇನೆ ಎಂಬುದು ಅವರ ಮನದಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT