ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮುಂಚೂಣಿ ಯೋಧರಿಗೆ ‘ಅಸ್ತ್ರ’ಗಳ ಕೊರತೆ

ಸುರಕ್ಷಾ ಪರಿಕರ ಇಲ್ಲ, ಸಂಬಳವೂ ಸರಿಯಾಗಿ ಬರುತ್ತಿಲ್ಲ!
Last Updated 6 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ನಾವು ಹೆಸರಿಗಷ್ಟೇ ಕೊರೊನಾ ಯೋಧರು. ನಮಗೆ ಸಿಕ್ಕಿರುವ ಸೌಲಭ್ಯ ಮಾತ್ರ ಶೂನ್ಯ. ಲಾಕ್‌ಡೌನ್ ಶುರುವಾದ ನಂತರ ಉಚಿತ ಲಸಿಕೆ ಬಿಟ್ಟರೆ ಬೇರೇನನ್ನೂ ನಾವು ಕಂಡಿಲ್ಲ. ಎರಡು ತಿಂಗಳಿಂದ ಸಂಬಳವೂ ಸಿಕ್ಕಿಲ್ಲ. ಆದರೆ, ತುರ್ತು ಸೇವೆ ಎಂದು ಹೇಳಿಕೊಂಡು ಹಗಲಿರುಳು ದುಡಿಯುವುದು ತಪ್ಪಿಲ್ಲ’.

– ಇದು ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯೊಬ್ಬರ ಮಾತಿದು.

ಜಿಲ್ಲೆಯ ಬಹುತೇಕ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೋವು ಕೂಡ ಇದೇ ಆಗಿದೆ. ಯೋಧರಿಗೆ ಬೇಕಾದ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸುವಲ್ಲೂ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಿಲ್ಲ.

ಜಿಲ್ಲೆಯಲ್ಲಿ 3,300 ಮಂದಿ ‘ಅಶಾ’ಗಳಿದ್ದಾರೆ. 5,331 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 5ಸಾವಿರ ಸಹಾಯಕಿಯರು ಇದ್ದಾರೆ. ಕೋವಿಡ್ ಭೀತಿಯ ನಡುವೆಯೂ ಮನೆಗಳಿಗೆ ತೆರಳಿ ಸಮೀಕ್ಷೆಯನ್ನೂ ನಡೆಸುತ್ತಿದ್ದಾರೆ. ಅವರಿಗೆ ಸಂಬಳ ಮತ್ತು ಸುರಕ್ಷಾ ಪರಿಗಳನ್ನು ಒದಗಿಸಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಹಲವು ಕೊರತೆಗಳ ನಡುವೆ ಅವರು ಕೆಲಸ ಮಾಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತವರಲ್ಲೇ ಅಂಗನವಾಡಿ ನೌಕರರು ಹಲವು ತೊಂದರೆ ಎದುರಿಸುತ್ತಿದ್ದಾರೆ.

ಎನ್‌ಜಿಒಗಳು, ಮುಖಂಡರು ಹಾಗೂ ದಾನಿಗಳು ನೀಡಿದ ಸುರಕ್ಷಾ ಪರಿಕರಗಳಲ್ಲೇ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಉತ್ತಮ ಸ್ಪಂದನೆ ಸಿಕ್ಕಿಲ್ಲ ಎನ್ನುವ ಕೊರಗು ಅವರಲ್ಲಿದೆ. ಸ್ಥಳೀಯ ಕಾರ್ಯಪಡೆಯವರಿಗೆ ಇವರ ಕೆಲಸ ಬೇಕು. ಆದರೆ, ಸೌಲಭ್ಯ ಕಲ್ಪಿಸುವ ಗೊಡವೆ ಬೇಡವಾಗಿದೆ. ಪರಿಣಾಮ ಆ ಕಾರ್ಯಕರ್ತೆಯರು ಅತಂತ್ರವಾಗಿದ್ದಾರೆ.

ಮಾಮನಿ ನೆರವು
ಸವದತ್ತಿ:
ತಾಲ್ಲೂಕಿನ 343 ಅಂಗನವಾಡಿಗಳ 330 ಕಾರ್ಯಕರ್ತೆಯರು ಲಸಿಕೆ ಪಡೆದು ಮುಂಚೂಣಿಯಲ್ಲಿ ಕೊರೊನಾ ಕೆಲಸ ನಿರ್ವಹಿಸುತ್ತಿದ್ದಾರೆ. ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಿದ್ದು ಪ್ರಾಣಾಪಾಯವಾಗಿಲ್ಲ. ಹೃದಯಾಘಾತದಿಂದ ಇಬ್ಬರು ನಿಧನರಾಗಿದ್ದಾರೆ. ಸಾವಿರ ಜನಸಂಖ್ಯೆಗೆ ಒಬ್ಬ ಆಶಾರಂತೆ ಒಟ್ಟು 293 ಆಶಾ ಕಾರ್ಯಕರ್ತೆಯರು ಕರ್ತವ್ಯದಲ್ಲಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ 8 ಸಾವಿರ ಮಾಸ್ಕ್‌, ಸ್ಯಾನಿಟೈಸರ್‌ ನೀಡಿ ನೆರವಾಗಿದ್ದಾರೆ.

ಮಾಸ್ಕ್, ಸಾನಿಟೈಸರ್ ಮಾತ್ರ ಅಸ್ತ್ರ
ಮೂಡಲಗಿ:
ಮೂಡಲಗಿ ತಾಲ್ಲೂಕಿನಲ್ಲಿ ಒಟ್ಟು 558 ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ 32 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷದಿಂದ ಕೊರೊನಾ ಸೋಂಕು ನಿಯಂತ್ರಣದಲ್ಲಿ ತಮ್ಮ ಪ್ರಾಣದ ಹಂಗು ಬಿಟ್ಟು ಸಾರ್ವಜನಿಕರ ಸೇವೆ ಮಾಡುತ್ತಿರುವ ಬಗ್ಗೆ ಬಹಳಷ್ಟು ಆಶಾ ಕಾರ್ಯಕರ್ತೆಯರು ಅಭಿಮಾನಪಟ್ಟುಕೊಂಡರು.

‘ಮನೆ, ಮನೆಗೆ ಭೇಟಿ ನೀಡಿ ಕಟುಂಬದಲ್ಲಿ ಮಡುಗಟ್ಟಿರುವ ಕೊರೊನಾ ದುಗಡನ್ನು ದೂರ ಮಾಡುವ ಕೆಲಸ ಸಮಾಧಾನ ತರಿಸುತ್ತದೆ’ ಎಂದು ಶಕುಂತಲಾ ಗೊಲಶೆಟ್ಟಿ, ಆಶಾ ಸುಗಮಗಾರ್ತಿ, ನಿರ್ಮಲಾ ದರೂರು ಹೇಳಿದರು.

‘ಗೌರವಧನ ಕಡಿಮೆ ಇದೆ. ರಜೆ ಸಿಗುವುದಿಲ್ಲ. ಮಾಸ್ಕ್ ಮತ್ತು ಸಾನಿಟೈಜರ್ ಮಾತ್ರ ನಮ್ಮ ಅಸ್ತ್ರಗಳು. ಹೀಗಾಗಿ ಸೋಂಕು ತಗಲುವ ಆತಂಕ ಕಾಡುತ್ತದೆ’ ಎಂದು ಕೆಲವರು ಅಳಲು ತೋಡಿಕೊಂಡರು.

ಸೌಲಭ್ಯ ಮಾತ್ರ ಶೂನ್ಯ
ಖಾನಾಪುರ:
ತಾಲ್ಲೂಕಿನಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ಎಲ್ಲ ನಾಗರಿಕರ ಆರೋಗ್ಯ ಸೇವೆ ಒದಗಿಸುವುದು, ಸೊಂಕಿತರ ಮನೆ-ಮನೆ ಭೇಟಿ, ಮಾಹಿತಿ ಸಂಗ್ರಹ, ಹಿರಿಯ ನಾಗರಿಕರಿಗೆ ಲಸಿಕೆ ವಿತರಣೆ, ವೃದ್ಧರು, ಗರ್ಭಿಣಿ-ಬಾಣಂತಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಹಲವು ಸಂಘ-ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅವರ ಸೇವೆ ಗುರುತಿಸಿ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ವಿತರಿಸಿದ್ದು ಬಿಟ್ಟರೆ ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಮೇಲಾಗಿ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ. ಕೋವಿಡ್ ಸೊಂಕಿತರ ಜೊತೆ ಸಂಪರ್ಕ ಹೊಂದುವ ಅನಿವಾರ್ಯತೆ ಇರುವ ಕಾರಣ ಕುಟುಂಬದ ಸದಸ್ಯರೊಂದಿಗೂ ಬೇರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋವಿಡ್ ನಮಗೂ ಆತಂಕ, ಅವಮಾನ, ಸಂಕಟ, ಸಂದಿಗ್ಧತೆ ಮತ್ತು ಸಂಕಷ್ಟಗಳನ್ನು ತಂದೊಡ್ಡಿದೆ ಎನ್ನುತ್ತಾರೆ ಅವರು.

ಅಗತ್ಯ ಪರಿಕರಗಳನ್ನು ನೀಡಬೇಕು
ರಾಮದುರ್ಗ:
ಕೋವಿಡ್ ನಿರ್ವಹಣೆಯಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಬಳಸಿಕೊಳ್ಳುವ ಸರ್ಕಾರ ಅವರಿಗೆ ಸೂಕ್ತ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ಚುನಾಯಿತ ಪ್ರತಿನಿಧಿಗಳು ಮಾತ್ರ ಬೆದರಿಕೆ ಹಾಕಿ ಕೆಲಸ ತೆಗೆದುಕೊಳ್ಳುತ್ತಿದ್ದಾರೆ. ಕೆಲಸ ಕಳೆದುಕೊಳ್ಳುವ ಭಯದಲ್ಲಿ ಜೀವ ಕಳೆದುಕೊಳ್ಳಲು ಮುಂದಾಗಿದ್ದರೆ.

ಸುರಕ್ಷಾ ಪರಿಕರಗಳನ್ನು ವ್ಯವಸ್ಥೆ ಮಾಡಬೇಕು ಎಂದು ಹಿರಿಯ ಅಧಿಕಾರಿಗಳು ಹೇಳಿಹೋದರೆ ಹೊರತು ಯಾವುದೇ ಕ್ರಮವೂ ಜರುಗಿಲ್ಲ. ಆದರೆ, ಅನೇಕ ಸಂಘ ಸಂಸ್ಥೆಗಳು, ದಾನಿಗಳು ಅವರ ರಕ್ಷಣೆಗೆ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಸುರಕ್ಷಾ ಪರಿಕರಗಳನ್ನು ಒದಗಿಸಿದ್ದಾರೆ. ಪಟ್ಟಣದ ಕೆಲವರಿಗೆ ಅವೂ ಸಿಕ್ಕಿಲ್ಲ.

ನಿರೀಕ್ಷೆಯಲ್ಲಿ...
ಗೋಕಾಕ
: ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪಾತ್ರ ಬಹು ಮಹತ್ವದ್ದಾಗಿದೆ. ಆದರೆ, ಅವರಿಗೆ ಸುರಕ್ಷಾ ಪರಿಕರಗಳನ್ನು ಒದಗಿಸುವ ಕೆಲಸ ಸರ್ಕಾರದಿಂದ ಸಮರ್ಪಕವಾಗಿ ನಡೆದಿಲ್ಲ. ಬಹುತೇಕರಿಗೆ ಹಲವು ತಿಂಗಳಿಂದ ಸಂಬಳವೇ ಇಲ್ಲ. ಭವಿಷ್ಯದಲ್ಲಿ ತಮ್ಮ ಸೇವೆ ಕಾಯಂ ಆಗಬಹುದು; ವೇತನ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಅವರು.

ಅವರ ಗೋಳು ದೇವರಿಗೆ ಪ್ರೀತಿ
ಎಂ.ಕೆ. ಹುಬ್ಬಳ್ಳಿ:
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಮನೆ-ಮನೆಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗೋಳು ಆ ದೇವರಿಗೆ ಪ್ರೀತಿ ಎಂಬಂತಾಗಿದೆ.

ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳ ಪಡೆಯುವ ಆಶಾ ಕಾರ್ಯರ್ತೆಯರು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಕಳೆದೆರಡು ತಿಂಗಳಿಂದ ವೇತನ ಬಂದಿಲ್ಲ. ಅಗತ್ಯ ಸುರಕ್ಷತಾ ಕಿಟ್‌ಗಳ ಕೊರತೆ ಆಗಾಗ ಕಾಡುತ್ತಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಮನೆ-ಮನೆಗೆ ತೆರಳುವ ಇವರು, ಸುರಕ್ಷತೆ ದೃಷ್ಟಿಯಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಇತರ ಇಲಾಖೆಗಳೊಂದಿಗೆ ಪ್ರಮುಖ ಪಾತ್ರ ವಹಿಸಿ ಕಾರ್ಯನಿರ್ವಹಿಸುತ್ತಿರುವ ನಮಗೆ ಸರ್ಕಾರ ಸೂಕ್ತ ವೇತನ ನೀಡಬೇಕು ಎನ್ನುವ ಒತ್ತಾಯ ಅವರದಾಗಿದೆ.

‘ಕಾರ್ಯಕ್ರಮ ಭಾರ’ದಿಂದ ಕುಗ್ಗಿರುವ ಕಾರ್ಯಕರ್ತೆಯರು
ಚನ್ನಮ್ಮನ ಕಿತ್ತೂರು:
ಯಾವುದೇ ಕಾರ್ಯಕ್ರಮವಿರಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೇ ಸರ್ಕಾರಕ್ಕೆ ಆಶ್ರಯ ಎಂಬಂತಾಗಿದೆ.

ಅಂಗವಿಕಲರ ಗಣತಿ, ಬಾಣಂತಿಯರ ಗಣತಿ, ಅವರಿಗೆ, ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಸರ್ಕಾರದ ವಿವಿಧ ಕಾರ್ಯಕ್ರಮಗಳ ಜಾಗೃತಿ, ಚುನಾವಣೆ ಕೆಲಸ, ಕೊರೊನಾ ಸೋಂಕಿತ ಸಂದರ್ಭದಲ್ಲಿ ಅವರ ಆರೋಗ್ಯ ವಿಚಾರಿಸುವುದು, ಇಂಥವರ ಮಾಹಿತಿ ತಾಲ್ಲೂಕು ಆಡಳಿತಕ್ಕೆ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳ ಭಾರಕ್ಕೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅಕ್ಷರಶಃ ಕುಗ್ಗಿ ಹೋಗಿದ್ದಾರೆ.

ಇಷ್ಟೆಲ್ಲ ಮಣ ಭಾರದ ಕೆಲಸ ಪಡೆಯುವ ಸರ್ಕಾರ ಸಂಬಳವನ್ನಾದರೂ ಸರಿಯಾದ ಸಮಯಕ್ಕೆ ನೀಡುತ್ತದೆಯೇ ಎಂದರೆ, ಇಲ್ಲ ಎಂಬ ಅಳಲು ಅವರದು. ಮನೆ ಜವಾಬ್ದಾರಿ ಜೊತೆಗೆ ಕೆಲವು ತಿಂಗಳಿಂದ ಸಂಬಳವಿಲ್ಲದೆ ದುಡಿಯುತ್ತಿರುವ ಈ ಕಾರ್ಯಕರ್ತೆಯರು ಶ್ರಮದ ದುಡಿಮೆಗೆ ತಕ್ಕ ಮತ್ತು ನಿಗದಿತ ಸಂಬಳ ನಿರೀಕ್ಷೆಯಲ್ಲಿದ್ದಾರೆ.

ರಾಯಬಾಗ ತಾಲ್ಲೂಕಿನಲ್ಲೂ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಕೋವಿಡ್ ಸೋಂಕಿನ ವಿರುದ್ಧ ಸೆಣಸುತ್ತಿರುವ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ವಿಮೆ ಕಲ್ಪಿಸಿದೆ. ಆದರೆ, ನಮ್ಮನ್ನು ಕಡೆಗಣಿಸಿದೆ ಎಂಬ ಕೊರಗು ಅಂಗನವಾಡಿ ಕಾರ್ಯಕರ್ತೆಯರಲ್ಲಿದೆ.

(ಪ್ರಜಾವಾಣಿ ತಂಡ: ಎಂ. ಮಹೇಶ, ಪ್ರದೀಪ ಮೇಲಿನಮನಿ, ಬಿ.ಎಂ. ಶಿರಸಂಗಿ, ಚನ್ನಪ್ಪ ಮಾದರ, ರಾಮೇಶ್ವರ ಕಲ್ಯಾಣಶೆಟ್ಟಿ, ಬಾಲಶೇಖರ ಬಂದಿ, ಎಸ್. ವಿಭೂತಿಮಠ, ಪ್ರಸನ್ನ ಕುಲಕರ್ಣಿ, ಆನಂದ ಮನ್ನಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT