ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿಗಳನ್ನು ನೆಡಲಿಲ್ಲ, ಮಚ್ಚುತ್ತಿವೆ ಗುಂಡಿಗಳು!

ಲಕ್ಷಾಂತರ ರೂಪಾಯಿ ಪೋಲು: ಆರೋಪ
Last Updated 10 ಆಗಸ್ಟ್ 2021, 11:24 IST
ಅಕ್ಷರ ಗಾತ್ರ

ತೆಲಸಂಗ (ಬೆಳಗಾವಿ ಜಿಲ್ಲೆ): ಅಥಣಿ ತಾಲ್ಲೂಕಿನ 46 ಗ್ರಾಮ ಪಂಚಾಯ್ತಿಗಳ ಮೂಲಕ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಕ್ಷ ಸಸಿ ನೆಡಲು ಹಾಕಿಕೊಂಡ ಜಿಲ್ಲಾ ಪಂಚಾಯ್ತಿಯ ಯೋಜನೆ ಕುಂಟುತ್ತಿದೆ. ಗುಂಡಿಗಳನ್ನು ತೆಗೆಯಲಾಗಿದೆ. ಆದರೆ, ಸಸಿಗಳನ್ನು ನೆಡಲಾಗಿಲ್ಲ.

ರಸ್ತೆ ಬದಿ ಸೇರಿದಂತೆ ವಿವಿಧೆಡೆ ಲಕ್ಷ ಕುಣಿ(ಗುಂಡಿ)ಗಳನ್ನು ತೋಡಲಾಗಿದೆ. ಇಲ್ಲಿಯವರೆಗೂ ಸಸಿಗಳನ್ನು ನೆಟ್ಟಿಲ್ಲ. ತೋಡಿಸಿದ ಕುಣಿಗಳೆಲ್ಲ ಮುಚ್ಚುತ್ತಿವೆ. ಅಲ್ಲಲ್ಲಿ ಹುಲ್ಲು ಬೆಳೆದು ನಿಂತಿದೆ. ಸದ್ಯಕ್ಕೆ ಅಲ್ಲಿ ಸಸಿ ನೆಡಬೇಕಾದರೆ ಮತ್ತೆ ಗುಂಡಿ ತೋಡಬೇಕಾದ ಮತ್ತು ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾದ ಸ್ಥಿತಿ ಇದೆ! ಇಷ್ಟನ್ನು ಮಾಡಿಸಿದರೂ ಮಳೆಗಾಲ ಮುಗಿಯುವ ಕೊನೆ ದಿನಗಳಲ್ಲಿ ನೆಟ್ಟ ಸಸಿ ಈ ಬರದ ನಾಡಿನಲ್ಲಿ ಬೆಳೆಯುವುದು ಕಷ್ಟಸಾಧ್ಯವಾಗಲಿ ಎನ್ನುತ್ತಾರೆ ಸಾರ್ವಜನಿಕರು.

‘ಕುಣಿ ತೋಡಿಸಿ, ಸಸಿ ನೆಟ್ಟು ಅದಕ್ಕೆ ರಕ್ಷಣೆ ನೀಡಬೇಕು ಮತ್ತು ನೀರುಣಿಸಬೇಕು. ಇದು ಜೂನ್ ಅಂತ್ಯದವರೆಗೆ ಮುಗಿಯಬೇಕು. ಆಗ ಅವು ಚೆನ್ನಾಗಿ ಬೆಳೆಯುತ್ತವೆ. ಮಳೆಯಿಂದಲೂ ಅನುಕೂಲ ಆಗುತ್ತದೆ. ಹೀಗೆ ಯೋಜನೆ ರೂಪಿಸದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕುಣಿ ತೋಡಿಸಿ ಸಸಿ ನೆಡುವಂತೆ ಅರಣ್ಯ ಇಲಾಖೆಗೆ ತಿಳಿಸಿ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಹಣ ಪೋಲಾಗಿದೆ. ಕೊರೊನಾದಂತ ಕಷ್ಟ ಕಾಲದಲ್ಲಿ ಲಕ್ಷಾಂತರ ರೂಪಾಯಿ ಪೋಲು ಮಾಡಿದ್ದು ಸರಿಯಲ್ಲ’ ಎನ್ನುವುದು ಪ್ರಜ್ಞಾವಂತರ ಹೇಳಿಕೆಯಾಗಿದೆ.

ಕುಣಿಯಿಂದ ಕುಣಗೆ ಕ‌ನಿಷ್ಠ 10 ಅಡಿಯಾದರೂ ಅಂತರ ಇರಬೇಕು. ಇದು ಪಾಲನೆಯಾಗಿಲ್ಲ. ಕೆಲವೆಡೆ ಒಂದೂವರೆ ಅಡಿಗಳಷ್ಟೂ ಆಳ ಮಾಡಿಲ್ಲ. ಮಳೆ ನೀರು ಹರಿದು ಕುಣಿಗಳಲ್ಲಿ ಮಣ್ಣು ತುಂಬಿದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

‘ಈ ಕೆಲಸಕ್ಕೆ ಅಲ್ಲಲ್ಲಿ ಕೂಲಿಕಾರರ ಬದಲಿ ಜೆಸಿಬಿ ಬಳಕೆ ಮಾಡಿ ಅಕ್ರಮ ಎಸಗಲಾಗಿದೆ. ಈ ಬಗ್ಗೆ ಮತ್ತು ವಿಳಂಬದ ಕುರಿತು ತನಿಖೆ ನಡೆಸಬೇಕು’ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಸಸಿಗಳನ್ನು ಯಾರು ನೆಡಬೇಕು ಎನ್ನುವುದೇ ಇನ್ನೂ ತೀರ್ಮಾನವಾಗಿಲ್ಲ ಎನ್ನುವುದು ತಿಳಿದುಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಥಣಿ ತಾ.ಪಂ. ಇಒ ಶೇಖರ ಕರಿಬಸಪ್ಪಗೋಳ, ‘ವಿಷಯದ ಕುರಿತು ಆರ್.ಎಫ್.ಒ. ಜೊತೆ ಮಾತನಾಡಿದ್ದೆ. ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದಿದ್ದರು. ಏನು ನಿರ್ಧಾರವಾಗಿದೆ ಎನ್ನುವುದನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ವರ್ಷಕ್ಕೆ ಇಂತಿಷ್ಟು ಗಿಡ ನೆಡುವ ಯೋಜನೆ ರೂಪಿಸಿಕೊಂಡು ಅದಕ್ಕೆ ಬೇಕಿರುವ ಪೂರಕ ತಯಾರಿಯನ್ನು ಪ್ರತಿ ವರ್ಷವೂ ಇಲಾಖೆಯಿಂದ ಮಾಡುತ್ತೇವೆ. ಸಸಿಗಳು ಸಿದ್ಧ ಇವೆ. ಯಾರು ನೆಡಬೇಕು (ಗ್ರಾಮ ಪಂಚಾಯ್ತಿಯೋ, ನಮ್ಮ ಇಲಾಖೆಯೋ) ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ’ ಎಂದು ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT