ಮಂಗಳವಾರ, ಜೂಲೈ 7, 2020
28 °C
ಹಿಂದೆ ವ್ಯಾಪಾರಿ, ಈಗ ಉದ್ಯಮಿ

‘ಸಿಹಿ’ ನೀಡಿದ ಬೇವಿನ ಹಿಂಡಿ

ಪರಶುರಾಮ ನಂದೇಶ್ವರ Updated:

ಅಕ್ಷರ ಗಾತ್ರ : | |

Prajavani

ಅಥಣಿ (ಬೆಳಗಾವಿ ಜಿಲ್ಲೆ): ಈ ಭಾಗದಲ್ಲಿನ ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿರುವುದನ್ನು ಗಮನಿಸಿದ ತಾಲ್ಲೂಕಿನ ಅನಂತಪುರ ಗ್ರಾಮದ ಅಜಿತ ಬನಸೋಡೆ ಸಾವಯವ ಗೊಬ್ಬರ ತಯಾರಿಕೆ (ಬೇವಿನ ಹಿಂಡಿ) ಉದ್ಯಮ ಆರಂಭಿಸಿ, ಕೃಷಿಕರಿಗೆ ನೆರವಾಗುತ್ತಿದ್ದಾರೆ; ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

15 ವರ್ಷಗಳಿಂದ ರಾಸಾಯನಿಕ ಗೊಬ್ಬರಗಳ ವ್ಯಾಪಾರಿಯಾಗಿದ್ದ ಅವರು ಈಗ ಉದ್ಯಮಿಯಾಗಿದ್ದರೆ. ಸುಮಿತ ಅಗ್ರೊ ಬಯೊಟೆಕ್ ಎಂಬ ಕಂಪನಿ ಸ್ಥಾಪಿಸಿ ಮೂರು ವರ್ಷದಿಂದ ನಿರ್ವಹಿಸುತ್ತಿದ್ದಾರೆ. ₹ 85 ಲಕ್ಷ ಹೂಡಿಕೆ ಮಾಡಿ, ಸ್ವಂತ ಉದ್ದಿಮೆ ಕಂಡುಕೊಂಡಿದ್ದಲ್ಲದೇ, ಇತರರಿಗೂ ನೆರವಾಗಿದ್ದಾರೆ.

ವಾಣಿಜ್ಯ ಪದವಿ ವ್ಯಾಸಂಗದ ನಂತರ ಗೊಬ್ಬರ ಸೇರಿದಂತೆ ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರುತ್ತಿದ್ದರು. 2016ರಲ್ಲಿ ಅಥಣಿಯಲ್ಲಿ ಕೈಗಾರಿಕಾ ಸ್ಥಳದಲ್ಲಿ 5 ಗುಂಟೆ ಜಮೀನು ತೆಗೆದುಕೊಂಡು ಅಲ್ಲಿ ಉದ್ಯಮ ಶುರು ಮಾಡಿದ್ದಾರೆ. ಬೇವಿನ ಹಿಂಡಿ ಹಾಗೂ ಪಾಸ್ಪೇಟ್ ಎನ್ನುವ ಎರಡು ಉತ್ಪನ್ನಗಳನ್ನು ಅವರ ಕಂಪನಿಯಲ್ಲಿ ತಯಾರಿಸಲಾಗುತ್ತದೆ. 15 ವರ್ಷಗಳಿಂದ ಇವರ ಸಂಪರ್ಕದಲ್ಲಿರುವ ರೈತರು ಇವರಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

ವರ್ಷದಲ್ಲಿ ₹ 1 ಕೋಟಿಯಷ್ಟು ವಹಿವಾಟು ನಡೆಸಿದ್ದಾರೆ. ಚಿಕ್ಕೋಡಿ, ರಾಯಬಾಗ, ಅಥಣಿ, ಹಾರೊಗೇರಿ, ಗೋಕಾಕ ಮೊದಲಾದ ಕಡೆಗಳಿಗೂ ವಹಿವಾಟು ವಿಸ್ತರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೂ ಇವರು ಗೊಬ್ಬರ ಕಳುಹಿಸುತ್ತಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸೊಸೈಟಿಗಳಿಗೆ, ಖಾಸಗಿ ಡೀಲರ್‌ಗಳಿಗೆ ಹಾಗೂ ನೇರವಾಗಿ ರೈತರಿಗೂ ಮಾರಾಟ ಮಾಡುತ್ತಾರೆ.

40 ಕೆ.ಜಿ. ತೂಕದ ಗೊಬ್ಬರದ ಮೂಟೆಗಳನ್ನು ಇವರು ಸಿದ್ಧಪಡಿಸುತ್ತಾರೆ. ಒಂದಕ್ಕೆ ₹ 850 ಬೆಲೆ ಇದೆ. ‘ನಮ್ಮಲ್ಲಿನ ಗೊಬ್ಬರ ಮಳೆಗಾಲದಲ್ಲಿ ಹೆಚ್ಚು ಮಾರಾಟವಾಗುತ್ತದೆ. ನಂತರ ಬಿತ್ತನೆ ಮಾಡುವಾಗ ಮತ್ತು ಮಧ್ಯಂತರವಾಗಿ ಬೆಳೆಗೆ ಗೊಬ್ಬರ ಹಾಕುವ ಸಮಯದಲ್ಲಿ ಹೆಚ್ಚು ಬೇಡಿಕೆ ಇರುತ್ತದೆ. ಬಿತ್ತನೆ ಸಮಯ ಸಮೀಪ ಬಂದಿರುವುದರಿಂದ ಉತ್ಪನ್ನಗಳನ್ನು ತಯಾರಿಸಿ ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇವಿನಹಿಂಡಿಯನ್ನು ಬೇವಿನ ಬೀಜದಿಂದ ತಯಾರಿಸಲಾಗುತ್ತದೆ. ಇದು ಸಾವಯವ ಗೊಬ್ಬರವಾಗಿರುವುದರಿಂದ ರೈತರು ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಭೂಮಿಯ ಸತ್ವ ಹಾಳಾಗುವುದನ್ನು ಕೂಡ ತ‍ಪ್ಪಿಸಬಹುದು’ ಎನ್ನುತ್ತಾರೆ ಅವರು.

ಅವರ ಉದ್ದಿಮೆಯಿಂದ 10 ಮಂದಿಗೆ ಕೆಲಸ ಸಿಕ್ಕಿದೆ. ಸಂಪರ್ಕಕ್ಕೆ: 9008579603.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು