ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡಲಾಗದಿದ್ದರೆ ದನ ಕಾಯಲು ಹೋಗಿ: ಡಾ.ಸುಧಾಕರ್‌

ಬಿಮ್ಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಾ.ಸುಧಾಕರ್‌
Last Updated 21 ನವೆಂಬರ್ 2020, 11:23 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಶುಚಿತ್ವ ಇರುವುದಿಲ್ಲ ಎಂಬ ದೊಡ್ಡ ಆರೋಪವಿದೆ. ಸರಿಯಾಗಿ ಕೆಲಸ ಮಾಡಲಾಗದಿದ್ದರೆ ದನ ಕಾಯಲು ಹೋಗಿ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಇಲ್ಲಿನ ಬಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಮಕ್ಕಳ ವಿಭಾಗದ ನವೀಕೃತ ಕಟ್ಟಡವನ್ನು ಶನಿವಾರ ಉದ್ಘಾಟಿಸಿದ ನಂತರ, ಅಲ್ಲಿನ ಅವ್ಯವಸ್ಥೆ ಬಗ್ಗೆ ರೋಗಿಗಳಿಂದ ದೂರುಗಳು ವ್ಯಕ್ತವಾಗಿದ್ದಕ್ಕೆ ಸಚಿವರು ಕೆಂಡಾಮಂಡಲವಾದರು.

‘ಹೊಸ ಕಟ್ಟಡದಲ್ಲೂ ಶುಚಿತ್ವ ಇಲ್ಲ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಫ್ಯಾನ್ ಇಲ್ಲ. ವೈದ್ಯರು ಬೆಳಿಗ್ಗೆ ಬಂದರೆ ಮತ್ತೆ ನಾಳೆ ಬೆಳಿಗ್ಗೆವರೆಗೂ ಬರುವುದಿಲ್ಲ’ ಎಂದು ರೋಗಿಗಳ ಕುಟುಂಬದವರು ಕೇಳಿದರು.

ಇದರಿಂದ ಅಸಮಾಧಾನಗೊಂಡ ಸಚಿವರು, ‘ಆಸ್ಪತ್ರೆ ನಿರ್ವಹಣೆಗೆಂದು ₹ 36 ಲಕ್ಷ ಕೊಡುತ್ತಿದ್ದೇವೆ. ಸರ್ಕಾರದ್ದೇನು ತಪ್ಪಿದೆ‌. ನಿರ್ವಹಣೆ ಮಾಡುತ್ತಿಲ್ಲವೇಕೆ. ನೀವೆಲ್ಲರೂ ಏನು ಮಾಡುತ್ತಿದ್ದೀರಿ? ಈಗಲೇ ಕೆಲಸದಿಂದ ತೆಗೆಯಲೇ. ನಿಮಗೆ ಸಂಬಳ ಕೊಡುವುದು ಏಕೆ?’ ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಕೌಶಲ ಕಲಿತುಕೊಳ್ಳಬೇಕು

ನಂತರ ವಿಚಾರಸಂಕಿರಣ ಸಭಾಂಗಣ ಮತ್ತು ವೈದ್ಯಕೀಯ ಆಕ್ಸಿಜನ್ ಸಂಗ್ರಹ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ವಿಷಯ ಪರಿಣತಿ ಜೊತೆಗೆ ಆಡಳಿತಾತ್ಮಕ ಕೌಶಲವನ್ನೂ ವೈದ್ಯರು ರೂಢಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದಾಗ್ಯೂ ಜನರಿಗೆ ಉತ್ತಮ ಸೌಕರ್ಯಗಳು ಸಿಗುತ್ತಿಲ್ಲವೇಕೆ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ಹೇಳಿದರು.

‘ಇಲ್ಲಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 350 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರವೇ ಲೋಕಾರ್ಪಣೆ ಆಗಲಿದೆ’ ಎಂದು ತಿಳಿಸಿದರು.

‘ವೈದ್ಯಕೀಯ ಸಿಬ್ಬಂದಿಗೆ 7ನೇ ವೇತನ ಆಯೋಗದ ಪ್ರಕಾರ ಸಂಬಳ, ಪಿಂಚಣಿ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಳ ಮಾಡಲಾಗಿದೆ. ನಾವು ಸೌಕರ್ಯ ಒದಗಿಸಬಹುದು. ಆದರೆ, ಗುಣಮಟ್ಟದ ಚಿಕಿತ್ಸೆ ನೀಡುವುದು ವೈದ್ಯರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಬಿಮ್ಸ್ ಆವರಣದಲ್ಲಿ 500 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವಂತೆ ವೈದ್ಯಕೀಯ ನಿರ್ದೇಶಕರು ಸಚಿವರಿಗೆ ಪ್ರಸ್ತಾವ ಸಲ್ಲಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರೀನ್‌ಬಾನು ಬಳ್ಳಾರಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಇದ್ದರು.

***

ಕ್ಯಾನ್ಸರ್ ಆಸ್ಪತ್ರೆ ಬೇಕು

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ, ‘ಮುಂಬೈ ಕರ್ನಾಟಕದಲ್ಲಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಇಲ್ಲ. ಈ ಕೊರತೆ ನೀಗಿಸಲು ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕು. 500 ಹಾಸಿಗೆಗಳ ನೂತನ ಆಸ್ಪತ್ರೆ ಅಗತ್ಯವಿದೆ. ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಆಸ್ಪತ್ರೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ‘2005ರಲ್ಲಿ ಆರಂಭವಾದ ಬಿಮ್ಸ್‌ನಲ್ಲಿ ಈಗ 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 1,040 ಹಾಸಿಗಗಳ ಸೌಲಭ್ಯವಿದೆ. 3,288 ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 250ಕ್ಕೂ ಅಧಿಕ ಸೋಂಕಿತರ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಲಾಗಿದೆ. 61ಸಾವಿರಕ್ಕೂ ಹೆಚ್ಚಿನವರ ಪರೀಕ್ಷೆ ಮಾಡಲಾಗಿದೆ. 150 ಸೋಂಕಿತರಿಗೆ ಡಯಾಲಿಸಿಸ್ ಕೂಡ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

***

ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಅಧಿಕಾರಿ ಮತ್ತು ಸಿಬ್ಬಂದಿ ಕೌಶಲ ಅಭಿವೃದ್ಧಿಗೆ ತರಬೇತಿ ನೀಡಲಾಗುವುದು
-ಡಾ.ಕೆ. ಸುಧಾಕರ್, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT