ಶನಿವಾರ, ಫೆಬ್ರವರಿ 27, 2021
28 °C

ಬೆಳಗಾವಿ: ಮಲಪ್ರಭಾ ಉಗಮ ಸ್ಥಳದಲ್ಲಿ ಒಂದೇ ದಿನದಲ್ಲಿ 335 ಮಿ.ಮೀ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಲಪ್ರಭಾ ಉಗಮಸ್ಥಳವಾಗಿರುವ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿದ್ದು, ದಿನದ 24 ಗಂಟೆಗಳಲ್ಲಿ 335 ಮಿ.ಮೀ ಮಳೆಯಾಗಿದೆ. ಮಲಪ್ರಭಾ ನದಿ ಜಲಾನಯನ ಪ್ರದೇಶದ ಹಳ್ಳ– ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಕಳಸಾ– ಬಂಡೂರಿ ನಾಲೆಗಳೂ ಭರ್ತಿಯಾಗಿ ಹರಿಯುತ್ತಿವೆ.

ಪಶ್ಚಿಮ ಘಟ್ಟ ಪ್ರದೇಶದಿಂದ ಆವೃತವಾಗಿರುವ ಜಾಂಬೋಟಿಯಲ್ಲಿ 228 ಮಿ.ಮೀ ಮಳೆಯಾಗಿದೆ. ಪಕ್ಕದ ಅಸೋಗಾದಲ್ಲಿ 211 ಮಿ.ಮೀ, ನಾಗರಗಾಳಿಯಲ್ಲಿ 206 ಮಿ.ಮೀ, ಲೋಂಡಾದಲ್ಲಿ 191 ಮಿ.ಮೀ, ಖಾನಾಪುರದಲ್ಲಿ 172 ಮಿ.ಮೀ ಸೇರಿದಂತೆ ಒಟ್ಟು ಖಾನಾಪುರದಲ್ಲಿ 1,944 ಮಿ.ಮೀ ಮಳೆಯಾಗಿದೆ.

ಮಲಪ್ರಭಾ ನದಿ ಹರಿಯುವ ಎಂ.ಕೆ. ಹುಬ್ಬಳ್ಳಿಯಲ್ಲಿ 132 ಮಿ.ಮೀ ಮಳೆಯಾಗಿದ್ದು, ನೀರಿನ ಹರಿವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದೇ ದಿನದಲ್ಲಿ 39,992 ಕ್ಯುಸೆಕ್‌ ನೀರು ನವಿಲುತೀರ್ಥ ಜಲಾಶಯ ಸೇರಿದೆ.

ಬೆಳಗಾವಿ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, 1,454 ಮಿ.ಮೀ ಮಳೆಯಾಗಿದೆ. ಬೆಳಗಾವಿಯಲ್ಲಿ 136 ಮಿ.ಮೀ ಮಳೆಯಾಗಿದ್ದರೆ, ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯವಿರುವ ಪ್ರದೇಶದಲ್ಲಿ 182 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನಲ್ಲಿ ಹರಿಯುವ ಮಾರ್ಕಂಡೇಯ ನದಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಹುಕ್ಕೇರಿ ತಾಲ್ಲೂಕಿನ ಬುಗಟೆಆಲೂರದಲ್ಲಿ 163 ಮಿ.ಮೀ ಮಳೆಯಾಗಿದೆ.

ಭಾರೀ ಮಳೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಧಿಕಾರಿ ಮನವಿ
ಬೆಳಗಾವಿ:
ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿ ದಂಡೆಯ ಗ್ರಾಮಸ್ಥರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಜಲಾಶಯದಿಂದ ಕೃಷ್ಣಾ ನದಿಗೆ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ 3 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಇದು 4 ಲಕ್ಷ ಕ್ಯುಸೆಕ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಿಡಕಲ್ ಜಲಾಶಯ ಕೂಡ ಭರ್ತಿಯಾಗಿದ್ದು, ಒಂದು ಲಕ್ಷ ಕ್ಯೂಸೆಕ್ ಇಳಹರಿವು ಇದೆ‌. ಅದೇ ಪ್ರಮಾಣದಲ್ಲಿ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ.

ಕೃಷ್ಣಾ ಮತ್ತು ಘಟಪ್ರಭಾ ನದಿಪಾತ್ರದ ಜನರು ಆದಷ್ಟು ಬೇಗನೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಸೇನೆ, ಪೊಲೀಸ್, ಅಗ್ನಿಶಾಮಕ ದಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಅನೇಕ ತಂಡಗಳು ಜನರು ಮತ್ತು ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಸಹಾಯ ಪಡೆಯಬೇಕು ಎಂದು ಅವರು ಕೋರಿದ್ದಾರೆ.

ಜಲಾವೃತಗೊಂಡಿರುವ ಗ್ರಾಮಗಳಲ್ಲಿ ಉಳಿದುಕೊಂಡಿರುವ ಜನ ಮತ್ತು ಜಾನುವಾರುಗಳನ್ನು ಸ್ಥಳಾಂತರಿಸುವ ಕೆಲಸ ನಿರಂತರವಾಗಿ ನಡೆದಿದೆ. ಆದಾಗ್ಯೂ ಯಾರಾದರೂ ಅಪಾಯದಲ್ಲಿ ಸಿಲುಕಿದ್ದರೆ ತಕ್ಷಣವೇ ಜಿಲ್ಲಾಧಿಕಾರಿ ಕಾರ್ಯಾಲಯ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಈ ಕೆಳಕಂಡ ಸಹಾಯ ವಾಣಿ ಕೇಂದ್ರಗಳಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

2005-06 ನೇ ಸಾಲಿನಲ್ಲಿ ಎದುರಾಗಿದ್ದ ಪ್ರವಾಹ ಪರಿಸ್ಥಿತಿ ಪುನಾರವರ್ತನೆಯಾಗುವ ಸಾಧ್ಯತೆಗಳಿರುವುದರಿಂದ ನದಿಪಾತ್ರದ ಜನರು ಗರಿಷ್ಠ ಮಟ್ಟದ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಹರಿಯುತ್ತಿರುವ ನೀರಿನಲ್ಲಿ ಈಜಲು ಅಥವಾ ದಾಟಲು ಪ್ರಯತ್ನಿಸಬಾರದು. ಅಂತಹ ಸಂದರ್ಭಗಳಲ್ಲಿ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದರೆ ಕೂಡಲೇ ರಕ್ಷಣಾ ತಂಡಗಳನ್ನು ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಹಾಯವಾಣಿ/ನಿಯಂತ್ರಣ ಕೊಠಡಿ ಸಂಖ್ಯೆ: ಜಿಲ್ಲಾಧಿಕಾರಿ ಕಚೇರಿ- 0831-2407290; ಪೊಲೀಸ್ ವರಿಷ್ಠಾಧಿಕಾರಿ ಕಚೇರಿ-0831-2405231; ಚಿಕ್ಕೋಡಿ-08338-272228; ರಾಯಬಾಗ: 08331-225482; ಅಥಣಿ: 08289-251146; ನಿಪ್ಪಾಣಿ: 08338-22039

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು