ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾನಾಪುರ ತಾಲ್ಲೂಕಿನಲ್ಲಿ ಒಂದೇ ದಿನ 74.5 ಸೆಂ.ಮೀ ಮಳೆ

Published 4 ಜುಲೈ 2024, 15:42 IST
Last Updated 4 ಜುಲೈ 2024, 15:42 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನಲ್ಲಿ ಗುರುವಾರ ಒಂದೇ ದಿನ 74.5 ಸೆ.ಮೀ ಮಳೆಯಾಗಿದೆ. ‘ಇದು ಈ ವರ್ಷದಲ್ಲಿ ಸುರಿದ ಅತ್ಯಧಿಕ ಮಳೆ’ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಪ್ರಮಾಣ ವೃದ್ಧಿಸಿದೆ. ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಬೈಲ್, ಕುಂಬಾರ, ಕರೀಕಟ್ಟಿ, ತಟ್ಟಿ, ಕೋಟ್ನಿ ಹಳ್ಳಗಳಲ್ಲೂ ನೀರಿನ ರಭಸ ಮುಂದುವರೆದಿದೆ. ಹಬ್ಬನಹಟ್ಟಿ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿದೆ.

ಭೀಮಗಡ ವನ್ಯಧಾಮ, ಲೋಂಡಾ ಮತ್ತು ಕಣಕುಂಬಿ ಅರಣ್ಯ ಪ್ರದೇಶದ 30ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅರಣ್ಯ ಪ್ರದೇಶ ಸುತ್ತುವರಿದ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹುತೇಕ ಕಡೆ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ಮೊಬೈಲ್ ನೆಟ್‌ವರ್ಕ್ ಕೈ ಕೊಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗುರುವಾರ ಕಣಕುಂಬಿಯಲ್ಲಿ 16.7 ಸೆಂ.ಮೀ, ಜಾಂಬೋಟಿಯಲ್ಲಿ 10.2 ಸೆಂ.ಮೀ, ಅಸೋಗಾ 5.6 ಸೆಂ.ಮೀ, ಗುಂಜಿ 7.8 ಸೆಂ.ಮೀ, ಲೋಂಡಾ 9.2 ಸೆಂ.ಮೀ, ಖಾನಾಪುರ ಪಟ್ಟಣ 7.5 ಸೆಂ.ಮೀ, ನಾಗರಗಾಳಿ 3.3 ಸೆಂ.ಮೀ, ಕಕ್ಕೇರಿ 3.14 ಸೆಂ.ಮೀ ಮತ್ತು ಬೀಡಿ ಭಾಗದಲ್ಲಿ 2 ಸೆಂ.ಮೀ ಮಳೆ ಸುರಿದಿದೆ ಎಂದು ತಹಶೀಲ್ದಾರ್‌ ಕಚೇರಿ ಮಾಹಿತಿ ನೀಡಿದೆ.

ನಿಪ್ಪಾಣಿ ವರದಿ:

ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಅತಿ ಮಳೆಯಾಗುತ್ತಿರುವ ಕಾರಣ, ತಾಲ್ಲೂಕಿನಲ್ಲಿ ಹರಿಯುವ ವೇದಗಂಗಾ, ದೂಧಗಂಗಾ ನದಿಗಳ ನೀರಿನ ಮಟ್ಟ ಏರಿದೆ.

ಬಾರವಾಡ– ಕುನ್ನೂರ ಕಿರುಸೇತುವೆ ಮೇಲೆ ವೇದಗಂಗಾ ಮತ್ತು ದೂಧಗಂಗಾ ಸಂಗಮಗೊಂಡಿರುವ ನದಿ ನೀರು ರಸ್ತೆ ಮೇಲೆ ಗುರುವಾರ ಎರಡು ಅಡಿಯಷ್ಟು ಹರಿದಿದೆ. ರಸ್ತೆ ಜಲಾವೃತಗೊಂಡ ಕಾರಣ ಸಂಚಾರ ಸ್ಥಗಿತಗೊಳಿಸಲಾಗಿದೆ.

ಚಿಕ್ಕೋಡಿ ವರದಿ:

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಯಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರ ಕ್ಯುಸೆಕ್ ನೀರು ಹೆಚ್ಚಳವಾಗಿದೆ. 

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿ ಹೋಬಳಿಯ ಕಾಲಮನಿ ಗ್ರಾಮದ ಬಳಿ ಭತ್ತದ ಗದ್ದೆಗಳು ನೀರಿನಿಂದ ಆವರಿಸಿವೆ – ಪ್ರಜಾವಾಣಿ ಚಿತ್ರ: ಪ್ರಸನ್ನ ಕುಲಕರ್ಣಿ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿ ಹೋಬಳಿಯ ಕಾಲಮನಿ ಗ್ರಾಮದ ಬಳಿ ಭತ್ತದ ಗದ್ದೆಗಳು ನೀರಿನಿಂದ ಆವರಿಸಿವೆ – ಪ್ರಜಾವಾಣಿ ಚಿತ್ರ: ಪ್ರಸನ್ನ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT