ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಬಿತ್ತನೆ: ಶೇಂಗಾ ಬೀಜದ ಬೇಡಿಕೆ

ನಾಲವಾರ ವಲಯ: ಸುಮಾರು 5 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ರೈತರಿಂದ ಶೇಂಗಾ ಬಿತ್ತನೆ ನಿರೀಕ್ಷೆ
Last Updated 4 ಅಕ್ಟೋಬರ್ 2020, 3:29 IST
ಅಕ್ಷರ ಗಾತ್ರ

ವಾಡಿ:ಸತತ ಮಳೆಯಿಂದ ಮುಂಗಾರು ಭಾರಿ ಪ್ರಮಾಣದಲ್ಲಿ ಬೆಳೆಗಳು ಹಾನಿಗೊಳಗಾಗಿದ್ದು, ಈಗ ರೈತರು ಹಿಂಗಾರು ಬಿತ್ತನೆಯತ್ತ ಚಿತ್ತ ನೆಟ್ಟಿದ್ದಾರೆ.

ಅತಿ ಹೆಚ್ಚು ಕೆಂಪು ಮಸಾರಿ ಜಮೀನು ಇರುವ ನಾಲವಾರ ವಲಯದಲ್ಲಿ ಶೇಂಗಾ ಬೀಜಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ನೀರಾವರಿ ಆಶ್ರಿತ ರೈತರು ಹಿಂಗಾರು ಬಿತ್ತನೆಗಾಗಿ ಶೇಂಗಾ ಬೆಳೆಯತ್ತ ಆಸಕ್ತಿ ವಹಿಸಿದ್ದು, ಬೀಜಕ್ಕಾಗಿ ಕೃಷಿ ಕಚೇರಿಗಳಿಗೆ ಮುಗಿ ಬೀಳುತ್ತಿದ್ದಾರೆ.

ನಾಲವಾರ ರೈತ ಸಂಪರ್ಕ ಕೇಂದ್ರಕ್ಕೆ ಪ್ರತಿನಿತ್ಯ ಹತ್ತಾರು ರೈತರು ಭೇಟಿ ನೀಡಿ ಬೀಜಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ವಲಯದಲ್ಲಿ ಈ ಬಾರಿ 5,500 ಹೆಕ್ಟೆರ್ ಪ್ರದೇಶದಲ್ಲಿ ಶೇಂಗಾ ಬೆಳೆ ಬಿತ್ತನೆಯ ನಿರೀಕ್ಷೆ ಹೊಂದಲಾಗಿದೆ. ಕಳೆದ ವರ್ಷ 3,500 ಹೆಕ್ಟೆರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಈ ವರ್ಷ ಅತಿ ಹೆಚ್ಚು ಮಳೆ ಸುರಿದಿದ್ದು, ಕೆರೆ ಕಟ್ಟೆಗಳು ತುಂಬಿವೆ. ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಹೆಚ್ಚಿದ್ದು, ಶೆಂಗಾ ಬಿತ್ತನೆ ಕ್ಷೇತ್ರ ಹೆಚ್ಚಳ ಸಾಧ್ಯತೆಗೆ ಕಾರಣವಾಗಿದೆ.

‘ಮಳೆಯಿಂದ ಮುಂಗಾರು ಹೆಸರು ಬೆಳೆ ಹಾಳಾಗಿ ಹೋಗಿದೆ. ಈಗ 8 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲು ಉದ್ದೇಶಿಸಿದ್ದೇನೆ. ವಾರದಿಂದ ಕಚೇರಿಗೆ ಬರುತ್ತಿದ್ದೇನೆ. ಬೆಲೆ ನಿರ್ಧಾರವಾದ ಬಳಿಕ ಬೀಜ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರಮೇಶ ಶಿವನಗರ ಹಾಗೂ ಶರಣಪ್ಪ ಕಂಚಗಾರಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಶೇಂಗಾ ಬೀಜದ ಸಮಸ್ಯೆ ರೈತರಿಗೆ ವಿಪರೀತವಾಗಿ ಕಾಡಿತ್ತು. ಬೀಜಕ್ಕಾಗಿ ರೈತರು ರೈತ ಸಂಪರ್ಕಗಳ ಮುಂದೆ ಹಲವು ದಿನಗಳ ಕಾಲ ಸಾಲುಗಟ್ಟಿ ನಿಂತಿದ್ದರು. ರಾತ್ರಿಯಿಡೀ ಜಾಗರಣೆ ಮಾಡಿದ್ದರು. ಕೃಷಿ ಕಚೇರಿಗಳ ಮುಂದೆ ರೈತರಿಂದ ಪ್ರತಿಭಟನೆಗಳು ನಡೆದಿದ್ದವು. ಕಳೆದ ವರ್ಷಕ್ಕಿಂತ ಈ ವರ್ಷ ಶೆಂಗಾ ಬೀಜದ ಬೇಡಿಕೆ ದುಪ್ಪಟ್ಟು ಆಗಿದ್ದು, ಕೃಷಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಬೀಜ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT