ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ | ಬರದ ಬರೆ: ಬಾಡಿದ ತೋಟಗಾರಿಕೆ ಬೆಳೆ

ಹಣ್ಣು, ತರಕಾರಿ ಇಳುವರಿ ಕುಂಠಿತ: ಮಳೆ ಕೊರತೆಯ ಕಾರಣ ಬಿತ್ತನೆ ಪ್ರದೇಶವೂ ಕುಸಿತ
ಚಂದ್ರಶೇಖರ ಎಸ್. ಚಿನಕೇಕರ
Published 28 ಮಾರ್ಚ್ 2024, 5:58 IST
Last Updated 28 ಮಾರ್ಚ್ 2024, 5:58 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರದಿಂದಾಗಿ ಕೆರೆ, ಹೊಳೆ, ಹಳ್ಳ, ಬೋರ್‌ವೆಲ್‌ಗಳು ಬತ್ತಿವೆ. ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಕಲ್ಲಂಗಡಿ, ಅರಿಸಿನ ಮುಂತಾದವುಗಳ ಇಳುವರಿ ಕುಸಿಯಲು ಇದು ಕಾರಣವಾಗಿದೆ.

ಅಥಣಿ ತಾಲ್ಲೂಕಿನಲ್ಲಿ ದ್ರಾಕ್ಷಿ, ಚಿಕ್ಕೋಡಿ ತಾಲ್ಲೂಕಿನಲ್ಲಿ ಕಲ್ಲಂಗಡಿ, ಕಾಗವಾಡ ತಾಲ್ಲೂಕಿನಲ್ಲಿ ಹಸಿ ಮೆಣಸಿನಕಾಯಿ, ರಾಯಬಾಗ ತಾಲ್ಲೂಕಿನಲ್ಲಿ ಅರಿಸಿನ, ನಿಪ್ಪಾಣಿ ತಾಲ್ಲೂಕಿನಲ್ಲಿ ತರಕಾರಿ ಹೆಚ್ಚಾಗಿ ಬೆಳೆದಿದ್ದಾರೆ. ನೀರಿಲ್ಲದೇ ತೋಟಗಾರಿಕೆ ಬೆಳೆಯ ಇಳುವರಿ ಈ ಬಾರಿ ಕುಂಠಿತವಾಗಿದೆ. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದವರಿಗೆ ಅಷ್ಟೇನೂ ತೊಂದರೆ ಇಲ್ಲ.

ಪ್ರತಿ ವರ್ಷಕ್ಕೆ ಹೋಲಿಸಿದರೆ ತೋಟಗಾರಿಕೆ ಬೆಳೆಯ ಪ್ರಮಾಣದಲ್ಲಿ ಈ ವರ್ಷ ಶೇ 10ರಿಂದ ಶೇ15 ರಷ್ಟು ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ಕಲ್ಲಂಗಡಿ ಪ್ರತಿ ವರ್ಷ 40 ಹೆಕ್ಟೇರ್‌ಗಿಂತ ಹೆಚ್ಚು ಬೆಳೆಯಲಾಗುತ್ತಿತ್ತು. ಈ ಬಾರಿ 30 ಹೆಕ್ಟೇರ್ ಬೆಳೆಯಲಾಗಿದೆ. ರಾಯಬಾಗ ತಾಲ್ಲೂಕು ವ್ಯಾಪ್ತಿಯಲ್ಲಿ 1,500 ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತಿದ್ದು, ಈ ವರ್ಷ ಕೇವಲ 1299 ಹೆಕ್ಟೇರ್ ಬೆಳೆದಿದೆ. ಕಾಗವಾಡ ತಾಲ್ಲೂಕಿನಲ್ಲಿ ಪ್ರತಿ ವರ್ಷ 40 ರಿಂದ 45 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಪಪ್ಪಾಯ ಈ ವರ್ಷ 31 ಹೆಕ್ಟೇರ್‌ಗೆ ಕುಸಿದಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಬದನೆಕಾಯಿ ಪ್ರಸ್ತುತ ವರ್ಷ 49 ಹೆಕ್ಟೇರ್‌ಗೆ ಇಳಿದಿದೆ.

ನೀರಿನ ಕೊರತೆಯಿಂದಾಗಿ ಕಲ್ಲಂಗಡಿ, ದಾಳಿಂಬೆ, ಪೇರು, ಬಾಳೆ, ಪಪ್ಪಾಯದಂತಹ ಹಣ್ಣಿನ ಬೆಳೆ ಹಾಗೂ ಸವತೆಕಾಯಿ, ನುಗ್ಗೆಕಾಯಿ, ಹೀರೇಕಾಯಿ, ಹೂಕೋಸು, ಎಲೆಕೋಸು, ಮೆಣಸಿನಕಾಯಿ, ಬದನೆಕಾಯಿ, ಈರುಳ್ಳಿ, ಟೊಮೆಟೊ ಮುಂತಾದ ತರಕಾರಿಯ ಇಳುವರಿ ಕಡಿಮೆಯಾಗಿದೆ. ಅಲ್ಲದೇ ತರಕಾರಿ ಬೆಳೆಯುವ ಕ್ಷೇತ್ರದ ಪ್ರಮಾಣ ಭಾರೀ ಕಡಿಮೆಯಾಗಿದೆ. ಒಬ್ಬ ರೈತ 1 ಎಕರೆಯಲ್ಲಿ ತರಕಾರಿ ಬೆಳೆಯುತ್ತಿದ್ದರೆ ನೀರಿಲ್ಲದ ಕಾರಣದಿಂದ 20 ಗುಂಟೆಯಷ್ಟು ಬೆಳೆಯುತ್ತಿದ್ದಾರೆ. ಹೀಗಾಗಿ ರೈತರಿಗೆ ಸಿಗಬೇಕಾದ ಆದಾಯ ಕಡಿಮೆಯಾಗಿದ್ದು, ಮಾಡಿರುವ ಸಾಲ ತೀರಿಸುವುದು ತರಕಾರಿ ಬೆಳೆಯುವ ರೈತರಿಗೆ ಕಷ್ಟವಾಗಿದೆ.

ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಹಣ್ಣು ಮತ್ತು ತರಕಾರಿ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಬೆಳೆಗೆ ಉತ್ತಮ ದರ ದೊರೆತರೆ ರೈತರಿಗೆ ಅನುಕೂಲವಾಗುತ್ತದೆ
ರಾಚಪ್ಪ ಶಿವಾಪೂರೆ ರೈತ ಡೋಣವಾಡ
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿನ ಕೊರತೆಯಾದಲ್ಲಿ ಹಣ್ಣು ಹಾಗೂ ತರಕಾರಿ ಬೆಳೆಯನ್ನು ಬೆಳೆಯುವುದು ರೈತರಿಗೆ ಕಷ್ಟವಾಗುತ್ತದೆ
ಎಂ.ಎಸ್.ಹಿಂಡಿಹೊಳಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT