ಮಂಗಳವಾರ, ಜೂನ್ 15, 2021
21 °C

ಬೆಳಗಾವಿ | ಕೊರೊನಾ ಮಾಡಿದ್ದ ಗಾಯಕ್ಕೆ ಮಳೆಯ ಬರೆ: ಬಸವಳಿದ ಹೋಟೆಲ್ ಉದ್ಯಮ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹೋಟೆಲ್‌ ಉದ್ಯಮ ನಿರೀಕ್ಷೆಯಷ್ಟು ಚೇತರಿಸಿಕೊಂಡಿಲ್ಲ. ಕೊರೊನಾ ಸೋಂಕಿನ ಭೀತಿ ಉಂಟು  ಮಾಡಿರುವ ನಷ್ಟದ ಗಾಯದ ಮೇಲೆ ಕಳೆದೆರಡು ವಾರಗಳಿಂದ ಬೀಳುತ್ತಿರುವ ಮಳೆ ಹಾಗೂ ಪ್ರವಾಹವು ಬರೆ ಎಳೆದಿದೆ.

ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತ ನಂತರ ಹೋಟೆಲ್‌ಗಳವರು ಗ್ರಾಹಕರನ್ನು ಸೆಳೆಯಲು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆಲವು ವ್ಯವಸ್ಥೆಗಳನ್ನು ಮಾಡಿದ್ದಾರೆ. ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳಲು ಕಡಿಮೆ ಸಂಖ್ಯೆಯ ಕುರ್ಚಿ–ಟೇಬಲ್‌ಗಳನ್ನು ಬಳಸುತ್ತಿದ್ದಾರೆ. ಸ್ಯಾನಿಟೈಸ್‌ ಮಾಡುತ್ತಿದ್ದಾರೆ. ಸಿಬ್ಬಂದಿಗೆ ಫೇಸ್‌ಶೀಲ್ಡ್‌, ಮುಖಗವಸು ಹಾಗೂ ಕೈಗವಸು ಒದಗಿಸಿದ್ದಾರೆ. ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್‌ ಇಟ್ಟಿದ್ದಾರೆ. ಗ್ರಾಹಕರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲದಿರುವುದು ಉದ್ಯಮಿಗಳನ್ನು ಚಿಂತೆಗೀಡು ಮಾಡಿದೆ.‌

‌ನಗರವೊಂದರಲ್ಲೇ 500ಕ್ಕೂ ಹೆಚ್ಚಿನ ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಮತ್ತು 300ಕ್ಕೂ ಹೆಚ್ಚು ಸಣ್ಣ ಹೋಟೆಲ್‌ಗಳಿವೆ. ಇವುಗಳಲ್ಲಿ ಬಹುತೇಕವು ಗ್ರಾಹಕರ ಕೊರತೆ ಎದುರಿಸುತ್ತಿವೆ. ವಾರಾಂತ್ಯಗಳಲ್ಲಿ ನಾನ್‌–ವೆಜ್‌ ಹೋಟೆಲ್‌ಗಳಲ್ಲಿ ಗ್ರಾಹಕರು ಕಾಣಸಿಗುತ್ತಿದ್ದಾರೆ.

ನೆರೆಯ ಮಹಾರಾಷ್ಟ್ರದಿಂದ ಜನರ ಓಡಾಟ ನಿರ್ಬಂಧಿಸಲಾಗಿದೆ. ಪ್ರವಾಸೋದ್ಯಮ ಗರಿಗೆದರಿಲ್ಲವಾದ್ದರಿಂದ ಕೊಠಡಿ ಬುಕ್ಕಿಂಗ್ ಪ್ರಮಾಣವೂ ಕಡಿಮೆ ಇದೆ. ಪರಿಣಾಮ ಹೆದ್ದಾರಿಗಳ ಬದಿಯ ಹೋಟೆಲ್‌ಗಳಲ್ಲಿ ಬೆರಳೆಣಿಕೆಯ ಗ್ರಾಹಕರಷ್ಟೇ ಕಂಡುಬರುತ್ತಿದ್ದಾರೆ. ಪರಿಣಾಮ ಕೆಲವು ಹೋಟೆಲ್‌ಗಳವರು ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ.

ರಸ್ತೆಬದಿಯ ಫಾಸ್ಟ್‌ಫುಡ್‌ ಹೋಟೆಲ್‌ಗಳಂತೂ ನೆಲ ಕಚ್ಚಿವೆ. ತಳ್ಳುಗಾಡಿ ಅಥವಾ ವಾಹನಗಳಲ್ಲಿ ಹೋಟೆಲ್‌ ಮಾಡುತ್ತಿದ್ದವರು ನಷ್ಟ ತಾಳಲಾರದೆ, ತರಕಾರಿ ಮಾರಾಟಕ್ಕಿಳಿದಿರುವ ಉದಾಹರಣೆಗಳೂ ಇವೆ.

‘ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಜನರು ಹೋಟೆಲ್‌ಗಳತ್ತ ಸುಳಿಯಲು ಹಿಂಜರಿಯುತ್ತಿದ್ದಾರೆ. ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ. ಸರಾಸರಿ ಶೇ 50ರಷ್ಟು ಗ್ರಾಹಕರೂ ಬರುತ್ತಿಲ್ಲ. ಹಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಗ್ರಾಹಕರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಸರಿ ಹೋಗಬಹುದು ಎಂಬ ಆಶಾಭಾವವಿದೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ, ತಿಲಕವಾಡಿಯ ಪಂಚಾಮೃತ ಹೋಟೆಲ್ ಮಾಲೀಕ ವಿಜಯ್ ಸಾಲಿಯಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು