ಶನಿವಾರ, ಜನವರಿ 18, 2020
27 °C
ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಉದ್ಘಾಟಿಸಿದ ಅಂಗಡಿ

ವೃತ್ತಿ ಕೌಶಲ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪ್ರಸ್ತುತ ಸೇವಾ ವಲಯದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚುತ್ತಿವೆ. ಯುವಜನರು ಈ ಅಗತ್ಯಕ್ಕೆ ಪೂರಕವಾಗಿ ವೃತ್ತಿ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದರು.

ಇಲ್ಲಿ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯಲ್ಲಿ ಆರಂಭಿಸಿರುವ ‘ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕೇಟರಿಂಗ್‌ ಟೆಕ್ನಾಲಜಿ ಕೋರ್ಸ್‌’ ಅನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತಮ ಸೇವೆ ಒದಗಿಸಿದರೆ, ಕೇಳಿದಷ್ಟು ಹಣ ನೀಡಲು ಜನರೂ ಸಿದ್ಧವಿದ್ದಾರೆ. ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದ ವಿದ್ಯಾರ್ಥಿಗಳು ಇವೆಲ್ಲ ಅಂಶಗಳನ್ನು ಅರಿಯಬೇಕು. ಪ್ರದೇಶವಾರು ಪ್ರಸಿದ್ಧಿ ಗಳಿಸಿರುವ ಮತ್ತು ಜನರ ಅಭಿರುಚಿಗೆ ತಕ್ಕ ಆಹಾರ ಉಣಬಡಿಸಬೇಕು. ಉತ್ತಮ ಸೇವೆ ಮೂಲಕ ಗ್ರಾಹಕರಿಗೆ ವಿಶ್ವಾಸ ಗಳಿಸಿ, ವೃತ್ತಿ ಬದುಕಿನಲ್ಲಿ ನೆಮ್ಮದಿ ಕಾಣಬೇಕು’ ಎಂದರು.

ಅವಕಾಶ ಬಳಸಿಕೊಳ್ಳಿ:

‘ಪ್ರಧಾನಿ ನರೇಂದ್ರ ಮೋದಿ ವಿಮಾನಯಾನ ಸೇವೆಗೆ ಒತ್ತು ನೀಡುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ಬೆಳಗಾವಿಯಿಂದ ನಿತ್ಯ ಎರಡೇ ವಿಮಾನ ಕಾರ್ಯಾಚರಣೆ ನಡೆಸುತ್ತಿದ್ದವು. ಈಗ ನಿತ್ಯ ಇಲ್ಲಿಂದ ಹಲವು ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ರೈಲು ಸೇವೆಯೂ ವಿಸ್ತರಿಸುತ್ತಿದೆ. ಬೆಳಗಾವಿಯು ಅಭಿವೃದ್ಧಿ ಹೊಂದುತ್ತಿದೆ. ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರರು ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭಾ ಸದಸ್ಯ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಸಂಸ್ಥೆ 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್ ಆರಂಭಿಸಿತ್ತು. ತಾನೇ ಪಠ್ಯಕ್ರಮವನ್ನೂ ರಚಿಸಿತ್ತು. ಉತ್ಕೃಷ್ಟ ತರಬೇತಿ, ಗುಣಮಟ್ಟದ ಶಿಕ್ಷಣ ನೀಡಿತ್ತು. ಅಲ್ಲಿ ಓದಿದ ನೂರಾರು ವಿದ್ಯಾರ್ಥಿಗಳೀಗ ವಿದೇಶದ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ವೃತ್ತಿ ಕಂಡುಕೊಂಡಿದ್ದಾರೆ.  ಕೈತುಂಬಾ ಸಂಬಳ ಪಡೆಯುತ್ತಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಉದ್ಯೋಗವಕಾಶ ದೊರೆಯಲಿ ಎಂಬ ಉದ್ದೇಶದಿಂದ ಇಲ್ಲೂ ಕೋರ್ಸ್‌ ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ತರಬೇತಿಗೆ ಸಂಬಂಧಿಸಿದಂತೆ ಮೂರು ಸ್ಟಾರ್‌ ಹೋಟೆಲ್‌ಗಳೊಂದಿಗೆ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ’ ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿದರು. ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವೊಜಿ ಇದ್ದರು.

ಡಾ.ವಿ.ಎ. ಕೋಟಿವಾಲೆ ಸ್ವಾಗತಿಸಿದರು. ಡಾ.ಎಂ.ಎಸ್. ಗಣಾಚಾರಿ ವಂದಿಸಿದರು.

ಪ್ರತಿಕ್ರಿಯಿಸಿ (+)