ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಅವಧಿಯಲ್ಲಿ ಆರ್‌ಯುಬಿ ನಿರ್ಮಾಣ

ಲೋಂಡಾ ಬಳಿ ಜನರಿಗೆ ತಪ್ಪಲಿದೆ ಕಾಯುವ ಪ್ರಮೇಯ
Last Updated 19 ಡಿಸೆಂಬರ್ 2020, 11:55 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಲೋಂಡಾ ರೈಲು ನಿಲ್ದಾಣ ಸಮೀಪದ ಲೆವಲ್‌ ಕ್ರಾಸಿಂಗ್‌ ಗೇಟ್ ನಂ.343ರ ಬದಲಿಗೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ನಿರ್ಮಿಸಲಾಗುತ್ತಿರುವ ಕಡಿಮೆ ಎತ್ತರದ ರಸ್ತೆ ಕೆಳಸೇತುವೆ (ಎಲ್‌ಎಚ್‌–ಆರ್‌ಯುಬಿ) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 90 ದಿನಗಳಲ್ಲಿ ಇದು ಸಿದ್ಧವಾಗುತ್ತಿರುವುದು ವಿಶೇಷ ಎಂದು ವಿಭಾಗ ತಿಳಿಸಿದೆ.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್ ಅವರು ಪರಿಶೀಲನೆ ನಡೆಸುವ ಸಂದರ್ಭದಲ್ಲಿ, ‘ಇಲ್ಲಿ ಆರ್‌ಯುಬಿ ನಿರ್ಮಿಸುವ ಮೂಲಕ ಲೆವಲ್‌ ಕ್ರಾಸಿಂಗ್ ಗೇಟ್ ಬಂದ್ ಮಾಡಬೇಕು. ಇದರೊಂದಿಗೆ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ರೈಲುಗಳು ಸಾಗುವ ಸಂದರ್ಭದಲ್ಲಿ ಕಾಯುವುದನ್ನು ತಪ್ಪಿಸಬೇಕು’ ಎಂದು ಸ್ಥಳೀಯರು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಾಳಖೇಡೆ ಅವರಿಗೆ ಸೂಚನೆ ನೀಡಿದ್ದರು. ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ಕೊಟ್ಟಿದ್ದರು.

ಅದರಂತೆ ಕಾರ್ಯಪ್ರವೃತ್ತರಾದ ವಿಭಾಗವು, ಅಗತ್ಯ ಪ್ರಕ್ರಿಯೆಗಳನ್ನು ನಡೆಸಿ 30 ದಿನಗಳಲ್ಲಿ ನಿರ್ಮಾಣದ ಕಾರ್ಯಾದೇಶ ನೀಡಲಾಗಿತ್ತು. ಅ.29ರಂದು ಕಾಮಗಾರಿ ಪ್ರಾರಂಭವಾಗಿತ್ತು. ಅಲ್ಲಿನ ಲೆವಲ್ ಕ್ರಾಸಿಂಗ್ ಗೇಟ್ ಬಂದ್ ಮಾಡುವ ಬಗ್ಗೆ ಹಾಗೂ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಾರ್ಗ ಬದಲಾವಣೆ ಮಾಡುವ ಕುರಿತು ನ.11ರಂದು ಜಿಲ್ಲಾಧಿಕಾರಿ ಮತ್ತು ಎಸ್ಪಿಯಿಂದ ಅನುಮತಿ ಪಡೆಯಲಾಗಿತ್ತು.

‘40 ಮೀಟರ್‌ ಉದ್ದದ ಸೇತುವೆ ನಿರ್ಮಾಣಕ್ಕಾಗಿ 25 ಆರ್‌ಸಿಸಿ ಬಾಕ್ಸ್‌ಗಳನ್ನು ಹಾಕಲಾಗಿದೆ. ₹ 6.12 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಈ ಕಾಮಗಾರಿಯು ಶೇ 90ರಷ್ಟು ಭೌತಿಕ ಪ್ರಗತಿ ಸಾಧಿಸಿದೆ. ಡಿ. 25ರ ವೇಳೆಗೆ ಸಿದ್ಧಗೊಳಿಸುವ ಗುರಿ ಹೊಂದಲಾಗಿದೆ. ಡಿ. 27ರಿಂದ ಲೆವಲ್ ಕ್ರಾಸಿಂಗ್ ಗೇಟ್ ಬಂದ್‌ ಆಗಲಿದೆ. ಸಾಮಾನ್ಯವಾಗಿ ಈ ಕಾಮಗಾರಿ ಪೂರ್ಣಗೊಳ್ಳಲು 24ರಿಂದ 30 ತಿಂಗಳು ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ 3 ತಿಂಗಳಲ್ಲಿ ಪೂರ್ಣಗೊಳಿಸಿರುವುದು ಭಾರತೀಯ ರೈಲ್ವೆಯಲ್ಲಿ ಹೊಸ ದಾಖಲೆಯಾಗಿದೆ’ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ ವಿಭಾಗದ ಹಿರಿಯ ವಿಭಾಗೀಯ ಎಂಜಿನಿಯರ್‌ ನೀರಜ್ ಬಾಪ್ನಾ ನೇತೃತ್ವದ ಎಂಜಿನಿಯರಿಂಗ್ ತಂಡ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ಕಡಿಮೆ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎಂದು ಹೇಳಿದೆ.

‘ಯೋಜಿತ ಹಾಗೂ ವ್ಯವಸ್ಥಿತವಾಗಿ ಕೈಗೊಂಡಿದ್ದರಿಂದ ಕಾಮಗಾರಿ ಪೂರ್ಣಗೊಂಡಿದೆ. ಹಗಲಿರುಳು ಕಾರ್ಯನಿರ್ವಹಿಸಿ ಕೇವಲ 90 ದಿನಗಳಲ್ಲಿ ಮುಗಿಸಲಾಗುತ್ತಿದೆ. ಆರ್‌ಯುಬಿಯಿಂದಾಗಿ ರಸ್ತೆ ಬಳಕೆದಾರರು ಮತ್ತು ರೈಲುಗಳ ಕಾರ್ಯಾಚರಣೆಯಲ್ಲಿ ಸುರಕ್ಷತೆಯನ್ನು ಬಲಪಡಿಸಿದಂತಾಗಿದೆ. ರೈಲುಗಳು ಸಂಚರಿಸುವಾಗ, ಜನರು ಗೇಟ್‌ನಲ್ಲಿ ಕಾಯುವುದು ತಪ್ಪಲಿದೆ’ ಎಂದು ಅರವಿಂದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT