ಬೆಳಗಾವಿ: ‘ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ನಾನು ಎಲ್ಲಿಯೂ ಸಿ.ಎಂ ಸ್ಥಾನಕ್ಕೆ ಕ್ಲೇಮ್ ಮಾಡಿಲ್ಲ. ಇದಕ್ಕೆ ಗುದ್ದಾಡುವ ಮತ್ತು ಕುಸ್ತಿ ಆಡುವ ಅವಶ್ಯಕತೆ ಇಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಮುಂದಿನ ಸಿಎಂ ಸತೀಶ ಜಾರಕಿಹೊಳಿ’ ಎಂಬ ಅಭಿಯಾನ ನಡೆಯುತ್ತಿರುವ ಕುರಿತು, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಯಾರೋ ಒಬ್ಬರು ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ, ಅದು ಇಡೀ ರಾಜ್ಯದ ಅಭಿಪ್ರಾಯವಾಗುವುದಿಲ್ಲ. ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಮಾಡುವಂಥ ಸನ್ನಿವೇಶ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎನ್ನುವ ನಂಬಿಕೆ ಇದೆ’ ಎಂದರು.
ತಾವು ದೆಹಲಿಗೆ ಭೇಟಿ ನೀಡಿದ ಕುರಿತು ಪ್ರತಿಕ್ರಿಯಿಸಿದ ಸತೀಶ, ‘ಬೇರೆ ಬೇರೆ ಕೆಲಸಕ್ಕಾಗಿ ನಾವು ದೆಹಲಿಗೆ ಹೋಗಿರುತ್ತೇವೆ. ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಆರ್.ವಿ.ದೇಶಪಾಂಡೆ ಸೇರಿಕೊಂಡು ಅನೇಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಹೀಗಿರುವಾಗ, ಸಿಎಂ ಬದಲಾವಣೆ ಪ್ರಶ್ನೆಯೇ ಬರುವುದಿಲ್ಲ’ ಎಂದು ತಿಳಿಸಿದರು.
‘ನಾನೀಗ ಸಿಎಂ ಸ್ಥಾನದ ಕನಸು ಕಂಡಿಲ್ಲ. ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಟ್ಟಿದ್ದೇನೆ. 2028ರವರೆಗೆ ಮುಖ್ಯಮಂತ್ರಿ ಆಗಲು ತಯಾರಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೆ ಬೆಂಬಲಿಗರು ಕಾಯಬೇಕು’ ಎಂದು ಮನವಿ ಮಾಡಿದರು.