ಭಾನುವಾರ, ಜುಲೈ 3, 2022
27 °C

ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣ: ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಉದ್ಯಮಿ, ಸಹಕಾರಿ ಧುರೀಣರಾಗಿದ್ದ ಆರ್.ಎನ್. ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಇಲ್ಲಿನ ‘ಕೋಕಾ’ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯವು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿಯನ್ನು ದೋಷಿಗಳು ಎಂದು ಹೇಳಿದ್ದು, ಶಿಕ್ಷೆಯ ಪ್ರಮಾಣ ಕಾಯ್ದಿರಿಸಿದೆ.

‘ಏ.4ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದರು.

ರಾಜ್ಯದ ಮೊದಲ ‘ಕೋಕಾ’ ಪ್ರಕರಣ ಇದಾಗಿದ್ದರಿಂದ, ಜನರ ಗಮನಸೆಳೆದಿದೆ.

ಪ್ರಕರಣದಲ್ಲಿ 6ನೇ, 11ನೇ ಹಾಗೂ 16ನೇ ಆರೋಪಿಗಳನ್ನು ನಿರ್ದೋಷಿಗಳು ಎಂದು ನ್ಯಾಯಾಲಯ ಹೇಳಿದೆ. ಕ್ರಮವಾಗಿ ಕೇರಳದ ರಬ್ದಿನ್ ಸಲೀಂ, ಬೆಂಗಳೂರು ಮೂಲದ ಮಹ್ಮದ್ ಶಹಬಂದ್ರಿ ಹಾಗೂ ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಆನಂದ ರಮೇಶ್ ‌ನಾಯಕ ಈ ಪ್ರಕರಣದಲ್ಲಿ  ದೋಷಮುಕ್ತರಾಗಿದ್ದಾರೆ.

ಸಂಘಟಿತವಾಗಿ:

ಉತ್ತರಪ್ರದೇಶ ಮೂಲದ ಜಗದೀಶ್ ಪಟೇಲ್ (ಎ2), ವಿಜಯಪುರದ ಅಂಭಾಜಿ ಬಂಡುಗಾರ (ಎ3), ಉಡುಪಿ ಜಿಲ್ಲೆ ಕಾರ್ಕಳದ ಮಂಜುನಾಥ ನಾರಾಯಣಭಟ್ ಯಾನೆ ಗಣೇಶ ಲಕ್ಷ್ಮಣ ಭಜಂತ್ರಿ (ಎ4), ಕೇರಳದ ಕೆ.ಎಂ. ಇಸ್ಮಾಯಿಲ್ (ಎ6), ಹಾಸನದ ಮಹೇಶ ಅಚ್ಚಂಗಿ (ಎ7), ಕೇರಳದ ಸಂತೋಷ ಎಂ.ಬಿ. (ಸುಳ್ಯ ಸಂತೋಷ್) (ಎ8), ಉಡುಪಿ ಮೂಲದ ಬನ್ನಂಜೆ ರಾಜಾ (ಎ9), ಬೆಂಗಳೂರಿನ ಜಗದೀಶ್ ಚಂದ್ರರಾಜ ಅರಸ್ (ಎ 11), ಉತ್ತರಪ್ರದೇಶದ ಅಂಕಿತ್‌ಕುಮಾರ್ ಕಶ್ಯಪ್ (ಎ 12) ದೋಷಿಗಳೆಂದು ನ್ಯಾಯಾಲಯ ಹೇಳಿದೆ. ಇವರೆಲ್ಲರೂ ಸಂಘಟಿತ ಅಪರಾಧದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ 1ನೇ ಆರೋಪಿಯಾಗಿದ್ದ ಉತ್ತರಪ್ರದೇಶದ ವಿವೇಕ್ ಉಪಾಧ್ಯಾಯ ಘಟನೆ ನಡೆದ ದಿನದಂದು ಆರ್‌.ಎನ್. ನಾಯಕ ಅವರ ಗನ್‌ಮ್ಯಾನ್‌ ರಮೇಶ್‌ ಜೊತೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದರು. 13, 14 ಹಾಗೂ 15ನೇ ಆರೋಪಿಗಳಾದ ಭಟ್ಕಳದ ನಾಜೀಂ ನಿಲಾವರ್‌, ಮಂಗಳೂರಿನ ಹಾಜಿ ಅಮಿನ್ ಭಾಷಾ ಹಾಗೂ ಸಕಲೇಶಪುರದ ಸುಲೇಮಾನ್‌ ಜೈನುದ್ದೀನ್ ಪತ್ತೆಯಾಗಿಲ್ಲ ಎಂದು ವಕೀಲರು ಮಾಹಿತಿ ನೀಡಿದರು.

2013ರಲ್ಲಿ ನಡೆದಿತ್ತು:

2013ರ ಡಿ.21ರಂದು ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿತ್ತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ‘ಕೋಕಾ’ ಪ್ರಕರಣ ದಾಖಲಿಸಲಾಗಿತ್ತು. ಇದು ರಾಜ್ಯದ ಮೊದಲ ಕೋಕಾ ಪ್ರಕರಣವಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ‌. ಪುರಾಣಿಕಮಠ ಹಾಗೂ ವಿಶೇಷ ಅಭಿಯೋಜಕ ಕೆ. ಶಿವಪ್ರಸಾದ್ ಆಳ್ವಾ ವಕಾಲತ್ತು ವಹಿಸಿದ್ದರು.

‘ಬನ್ನಂಜೆ ರಾಜಾ, ನಾಯಕ ಅವರ ಬಳಿ ₹ 3 ಕೋಟಿ ಹಫ್ತಾ ಕೇಳಿದ್ದರು. ನೀಡದ ಹಿನ್ನೆಲೆಯಲ್ಲಿ ನಡೆದಿರುವ ಕೊಲೆ ಇದಾಗಿದೆ. ಹೀಗಾಗಿ, ದೋಷಿಗಳಿಗೆ ಮರಣದಂಡನೆ ವಿಧಿಸಬೇಕು’ ಎಂದು ಕೆ.ಜಿ. ಪುರಾಣಿಕಮಠ ವಾದಿಸಿದ್ದಾರೆ.

ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕಕುಮಾರ್, ಭಾಸ್ಕರ್‌ರಾವ್‌ ಹಾಗೂ ಅಣ್ಣಾಮಲೈ (ಈಗ ಮಾಜಿ) ಸೇರಿದಂತೆ 210 ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದೆ. 1027 ದಾಖಲೆ ಹಾಗೂ 7 ರಿವಾಲ್ವಾರ್‌ಗಳು ಸೇರಿದಂತೆ 137 ಮುದ್ದೆಮಾಲುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 9ನೇ ಆರೋಪಿ ಬನ್ನಂಜೆ ರಾಜಾನನ್ನು ರಾಜ್ಯದ ಪೊಲೀಸರು ಮೊರಾಕೋದಲ್ಲಿ 2015ರ ಆ.15ರಂದು ಬಂಧಿಸಿದ್ದರು.

ಆರೋಪಿಗಳನ್ನು ಹಿಂಡಲಗಾ ಕಾರಾಗೃಹದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು