ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರರಾಷ್ಟ್ರೀಯ ಮಟ್ಟಕ್ಕೆ ಸಾಂಬ್ರಾ ವಿಮಾನ ನಿಲ್ದಾಣ: ಜಗದೀಶ ಶೆಟ್ಟರ್‌ ಭರವಸೆ

Published : 13 ಸೆಪ್ಟೆಂಬರ್ 2024, 13:44 IST
Last Updated : 13 ಸೆಪ್ಟೆಂಬರ್ 2024, 13:44 IST
ಫಾಲೋ ಮಾಡಿ
Comments

ಬೆಳಗಾವಿ: ‘ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಎಲ್ಲ ಮೂಲಸೌಕರ್ಯ ಸಿದ್ಧಪಡಿಸಲಾಗುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವ ಕುರಿತಾಗಿ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಭಾರತೀಯ ವಾಯುಪಡೆ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಕಾಮಗಾರಿ ಶೇ 30ರಷ್ಟು ಮುಗಿದಿದೆ. ಇಲ್ಲಿ ಕಾರ್ಗೋ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಇದೆ. 2025ರ ವೇಳೆಗೆ ಈ ಕಾಮಗಾರಿ ಪೂರ್ಣಗೊಂಡ ನಂತರ, ಈಗಾಗಲೇ ಅಸ್ತಿತ್ವದಲ್ಲಿರುವ  ಟರ್ಮಿನಲ್ ಅನ್ನು ಕಾರ್ಗೋ ಸೇವೆಗಳಿಗೆ ಬಳಸಿಕೊಳ್ಳಲಾಗುವುದು. ಈ ಭಾಗದ ಕೈಗಾರಿಕೆಗಳ ಬೇಡಿಕೆಗಳನ್ನು ನೀಗಿಸಲಾಗುವುದು’ ಎಂದು ಹೇಳಿದರು.

‘ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ ಸುಮಾರು 14 ಎಕರೆ ಜಮೀನು ಭಾರತೀಯ ವಾಯುಪಡೆ ನಿಯಂತ್ರಣದಲ್ಲಿದೆ. ಅದು ಹಸ್ತಾಂತರವಾದ ನಂತರ, ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ವಿಮಾನ ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆ ನಿಯಮಿತವಾಗಿ ಮಾಡುತ್ತಿದ್ದೇವೆ. ಮಾಸಿಕ ಸಭೆ ನಡೆಸುತ್ತಿದ್ದೇವೆ. ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ವಹಿಸಲಾಗುವುದು’ ಎಂದರು.

‘ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದ್ದೇವೆ. ಇದಕ್ಕೆ ಎದುರಾಗಿದ್ದ ಪ್ರಮುಖ ತೊಡಕುಗಳನ್ನು ಬಗೆಹರಿಸಿದ್ದೇವೆ. ಬೆಳಗಾವಿಯ ರಿಂಗ್ ರಸ್ತೆ ಮತ್ತು ಹಲಗಾ–ಮಚ್ಛೆ  ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ 15 ದಿನಗಳಲ್ಲಿ ಆರಂಭವಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿದ್ದರಾಮಯ್ಯ ಅವರ ಹಣೆಬರಹವ ನಾನೇ ಸಿ.ಎಂ ಆಗಿ ಮುಂದುವರಿಯುವೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಆಪಾದನೆ ಬಂದಾಗ ಎಲ್ಲ ಮುಖ್ಯಮಂತ್ರಿಗಳು ನಾನೇ ಮುಂದುವರೆಯುತ್ತೇನೆ ಎಂದು ಹೇಳುತ್ತಾರೆ. ಅವರ ಹಣೆಬರಹವನ್ನು ನ್ಯಾಯಾಲಯ ನಿರ್ಧರಿಸುತ್ತದೆ’ ಎಂದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಕೊಂದು ಹಾಕಿದ ಕಾಂಗ್ರೆಸ್‌ನವರು ಈಗ ಸಂವಿಧಾನ ರಕ್ಷಿಸುತ್ತಿದ್ದೇವೆ ಎಂದು ಬೋಧಿಸಲು ಹೊರಟಿದ್ದಾರೆ
ಜಗದೀಶ ಶೆಟ್ಟರ್‌ ಸಂಸದ
‘ರೈಲ್ವೆ ಸಚಿವರನ್ನು ಭೇಟಿಯಾಗುವೆ’
‘ಪುಣೆ– ಬೆಳಗಾವಿ ಮಧ್ಯೆ ವಂದೇ ಭಾರತ್‌ ರೈಲು ಆರಂಭಿಸಬೇಕೆಂಬ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ಆದರೆ ಹುಬ್ಬಳ್ಳಿಯವರೆಗೆ ಸೇವೆ ವಿಸ್ತರಿಸಲಾಗಿದೆ. ಈ ಹಿಂದೆ ಈ ರೈಲನ್ನು ವಾರದಲ್ಲಿ ಆರು ದಿನ ಓಡಿಸಲು ನಿರ್ಧರಿಸಲಾಗಿತ್ತು. ಈಗ ಮೂರು ದಿನಕ್ಕೆ ಇಳಿಸಲಾಗಿದೆ. ಮುಂದಿನ ವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ವಾರದಲ್ಲಿ ಆರು ದಿನವೂ ಓಡಿಸಬೇಕು. ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಲಾಗುವುದು’ ಎಂದು ಶೆಟ್ಟರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT