ಮಂಗಳವಾರ, ಸೆಪ್ಟೆಂಬರ್ 21, 2021
26 °C

ಬೆಳಗಾವಿ | ಬೇಸಿಗೆಗೂ ಮೊದಲೇ ಮಾರುಕಟ್ಟೆಗೆ ಕಲ್ಲಂಗಡಿ ದಾಂಗುಡಿ

ಮಾಲತೇಶ ಮಟಿಗೇರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣುಗಳು ದಾಂಗುಡಿ ಇಟ್ಟಿವೆ.

ಚಳಿಗಾಲವಾದರೂ ಹಗಲಿನ ವೇಳೆ ಬಿಸಿಲು ಚುರುಕು ಮುಟ್ಟಿಸುತ್ತಿದೆ. ಹೀಗಾಗಿ, ಜನರು ದಾಹ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ಖರೀದಿ ಜೋರಾಗಿಯೇ ಇದೆ. ಅಲ್ಲಲ್ಲಿ ಪ್ರಮುಖ ರಸ್ತೆಗಳ ಬದಿಯಲ್ಲಿ ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಹಣ್ಣಿಗೆ (ಗಾತ್ರದ ಆಧಾರದ ಮೇಲೆ) ₹ 40ರಿಂದ ₹120 ಬೆಲೆ ಇದೆ. ಸ್ಥಳದಲ್ಲೇ ಪೀಸ್‌ಗಳನ್ನು ತಿನ್ನಲು ಬಯಸಿದವರಿಗೆ ₹10ರಿಂದ ₹20ಕ್ಕೆ ಪ್ಲೇಟ್‌ನಂತೆ ಮಾರಾಟ ಮಾಡುತ್ತಿದ್ದಾರೆ ವ್ಯಾಪಾರಿಗಳು.

ಆಂಧ್ರಪ್ರದೇಶ, ದಾವಣಗೆರೆ, ಚೆನ್ನೈನಿಂದಲೂ ಹಣ್ಣುಗಳು ಮಾರುಕಟ್ಟೆಗೆ ಆವಕವಾಗುತ್ತಿವೆ. ಖಡೇಬಜಾರ್‌, ಶನಿವಾರ ಕೂಟ್ ಮೊದಲಾದ  ಕಡೆಗಳಲ್ಲಿ ಹಣ್ಣಿನ ವ್ಯಾಪಾರ ಭರಾಟೆಯಿಂದ ಸಾಗಿದೆ.

‘ಕಲ್ಲಂಗಡಿ ಸೀಜನ್ ಈಗಷ್ಟೇ ಆರಂಭವಾಗಿದೆ. ಈಗ ಆಸೆಪಟ್ಟು ತಿನ್ನುವವರು ಮಾತ್ರ ಖರೀದಿಸುತ್ತಾರೆ. ಬಿಸಲು ಹೆಚ್ಚಾದರೆ ಗ್ರಾಹಕರು ಹೆಚ್ಚಲಿದ್ದಾರೆ. ಮಾರ್ಚ್‌ವರೆಗೂ ವ್ಯಾಪಾರ ಸ್ವಲ್ಪ ಕಡಿಮೆ ಇರುತ್ತದೆ. ನಂತರ ಬೇಡಿಕೆ ಹೆಚ್ಚಿರುತ್ತದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಹಲವು ಕಡೆಗಳಲ್ಲಿ ಜನರು ಕಬ್ಬಿನ ಹಾಲು ಹಾಗೂ ಎಳ ನೀರಿನ ಮೊರೆ ಹೋಗುತ್ತಿರುವುದೂ ಕಂಡುಬಂದಿದೆ. ಹೀಗಾಗಿ, ವ್ಯಾಪಾರಿಗಳು ಎಳನೀರಿನ ಬೆಲೆಯನ್ನು ₹ 25ರಿಂದ ₹ 30ಕ್ಕೆ ಏರಿಸಿದ್ದಾರೆ.

ಹಿಂದಿನ ವಾರಕ್ಕೆ ಹೋಲಿಸಿದರೆ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಆವಕ ಹೆಚ್ಚಿರುವುದರಿಂದ ಕ್ವಿಂಟಲ್‌ಗೆ ₹ 2500ರಿಂದ ₹4000 ಇದ್ದ ಬೆಲೆ, ₹2ಸಾವಿರದಿಂದ ₹3ಸಾವಿರಕ್ಕೆ ಇಳಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜೆ.ಗೆ ₹30–₹50 (ಕಳೆದ ವಾರ ₹50–₹60 ಇತ್ತು) ಇದೆ. ಉಳಿದಂತೆ ತರಕಾರಿಗಳ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬಂದಿಲ್ಲ.

ಮೆಂತ್ಯೆ ಸೊಪ್ಪು ಆವಕ ಕಡಿಮೆ ಇರುವುದರಿಂದ ದರ ಹೆಚ್ಚಳವಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ದರ ₹ 400–₹ 600 (100 ಸಣ್ಣ ಕಂತೆಗೆ) ಇತ್ತು. ಚಿಲ್ಲರೆ ವ್ಯಾಪಾರಿಗಳು ₹10ಕ್ಕೆ 1 ಕಂತೆ, ₹ 20ಕ್ಕೆ 3 ಕಂತೆಗಳನ್ನು ಮಾರುತ್ತಿದ್ದಾರೆ. ಕೊತ್ತಂಬರಿ ಸೊಪ್ಪು (ಒಂದು ಕಂತೆಗೆ ₹ 5ರಿಂದ ₹ 10), ಪುದೀನಾ ₹5– ₹10, ಸಬ್ಬಸಗಿ ₹10– ₹15 (2 ಕಂತೆಗೆ) ಇತ್ತು.

ಹಣ್ಣುಗಳ ದರ ಸ್ಥಿರವಾಗಿದೆ. ಕೆ.ಜಿ. ದಾಳಿಂಬೆ ₹60–₹ 80, ಬಾರೆ ಹಣ್ಣು ₹10–₹20, ಸೇಬು ಸರಾಸರಿ ₹ 100ರಿಂದ ₹200 ಇತ್ತು. ಪೇರಲ ₹ 60– ₹ 80, ಚಿಕ್ಕು ₹ 70– ₹80 ಇತ್ತು.

ನಾಟಿ ಕೋಳಿ ಮೊಟ್ಟೆ ಡಜನ್‌ಗೆ ₹ 120 (1ಕ್ಕೆ ₹10), ಬ್ರಾಯ್ಲರ್‌ ಕೋಳಿ ಮೊಟ್ಟೆಗೆ ₹ 60 (1ಕ್ಕೆ 5) ಇತ್ತು. ಕೋಳಿ ಮಾಂಸ (ಕೆ.ಜೆ.ಗೆ ₹170– ₹180) ಹಾಗೂ ಕುರಿ ಮಾಂಸ (₹540– ₹600) ದರ ಹಿಂದಿನ ವಾರದಷ್ಟೇ ಇದೆ. ಕರಾವಳಿಯಲ್ಲಿ ಉಂಟಾಗಿರುವ ಮತ್ಸ್ಯಕ್ಷಾಮದಿಂದ ಮೀನು ಬೆಲೆಯಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಬಾಂಗಡೆ ₹200–₹240, ಸುರಮಯಿ ₹600–₹650, ಪಾಂಫ್ರೆಟ್ ₹550–₹600, ರಾವಸ್‌ ₹300–₹350 ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು