ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಳ್ಳಿಗಳಲ್ಲಿ ಕನ್ನಡ ಸಮ್ಮೇಳನಗಳು ನಡೆಯಲಿ’

ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ
Last Updated 7 ಜುಲೈ 2019, 13:38 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಸಾಹಿತ್ಯದ ಪುಸ್ತಕಗಳನ್ನು ಓದುವುದರಿಂದ ನಾಡು-ನುಡಿ ಗಟ್ಟಿಯಾಗುತ್ತದೆ. ವ್ಯಕ್ತಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕನ್ನಡ ನಾಡಿನ ಗಟ್ಟಿತನ ಮೂಡಿಸುವ ಸಾಹಿತ್ಯ ಸಮ್ಮೇಳನಗಳು ಹೆಚ್ಚಾಗಿ ನಡೆಯಬೇಕು’ ಎಂದು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಗ್ರಾಮೀಣ ಸಾಹಿತ್ಯ ಸಮ್ಮೇಳನ ಹಾಗೂ ‘ಗೌರವ ಸಾಹಿತ್ಯ ವಿಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹೈದರಾಬಾದ್‌ ಮತ್ತು ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ಕನ್ನಡ ಉಳಿವಿಗೆ, ಗಟ್ಟಿತನಕ್ಕೆ ನಿರಂತರ ಹೋರಾಟ ಮಾಡುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ. ಆದರೆ, ಶಕ್ತಿ ಕೇಂದ್ರವಾದ ಬೆಂಗಳೂರಿನಲ್ಲಿ ಕನ್ನಡದ ಬಲ ಕುಗ್ಗುತ್ತಿರುವುದು ವಿಷಾದನೀಯ’ ಎಂದರು.

‘ರಾಜ್ಯದಲ್ಲಿರುವ ಎಲ್ಲರೂ ಕನ್ನಡವನ್ನು ಪ್ರೀತಿಸಬೇಕು. ಕನ್ನಡದಲ್ಲಿಯೇ ಮಾತನಾಡಬೇಕು. ಇಂಗ್ಲಿಷ್‌ ಭಾಷೆಯನ್ನು ವ್ಯವಹಾರಕ್ಕೆ ಮಾತ್ರವೇ ಬಳಸಬೇಕು. ಮನೆಗಳಲ್ಲಿ ಕನ್ನಡ ಮಾತನಾಡುವ ಮೂಲಕ ಮಾತೃ ಭಾಷೆಯನ್ನು ಉಳಿಸಬೇಕು. ಗಡಿ ಭಾಗದಲ್ಲಿ ಮಠಾಧೀಶರು ಮತ್ತು ಸಾಹಿತಿಗಳಿಂದ ಕನ್ನಡ ತನ್ನ ಸತ್ವವನ್ನು ಉಳಿಸಿಕೊಂಡಿದೆ’ ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಂಡ್ಯದ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ಮಾತನಾಡಿ, ‘ಕನ್ನಡ ಅಕ್ಷರ ಜಾತ್ರೆ ಒಂದು ದಿನಕ್ಕೆ ಸೀಮಿತವಾಗಬಾರದು; ನಿತ್ಯೋತ್ಸವವಾಗಬೇಕು. ಕನ್ನಡವನ್ನು ಎದೆ ದೀಪವಾಗಿಸಿಕೊಂಡು ಬೆಳಗಿಸಬೇಕು. ನಾಡನ್ನು ಬೆಳೆಸಬೇಕು. ಕನ್ನಡದ ಬಗೆಗಿನ ಕೀಳರಿಮೆಯ ಕತ್ತಲನ್ನು ಕಳೆಯಬೇಕು’ ಎಂದು ಸಲಹೆ ನೀಡಿದರು.

‌‘ಪ್ರಸ್ತುತ ಗ್ರಾಮಗಳು ಮತ್ತು ಕನ್ನಡ ಭಾಷೆ ಅಸ್ತಿತ್ವನ್ನು ಕಳೆದುಕೊಳ್ಳುತ್ತಿವೆ. ಗ್ರಾಮಗಳು ಮತ್ತು ಕನ್ನಡದಿಂದ ಬಹಳಷ್ಟು ಮಂದಿ ಗುಳೆ ಹೋಗಿ ದೂರಾಗುತ್ತಿದ್ದಾರೆ. ಇವು ಅಳಿವಿನ ಅಂಚಿನಲ್ಲಿ ಇಲ್ಲದಿದ್ದರೂ ಅಪಾಯದ ಹಾದಿಯಲ್ಲಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಕಾರ್ಯಕ್ರಮಗಳು ನಡೆಯುವುದರಿಂದ ಇಲ್ಲಿಯ ಜನರಿಗೆ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಿದಂತಾಗುತ್ತದೆ. ಪ್ರತಿ ವರ್ಷ ಒಂದು ದಿನ ಕನ್ನಡ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದರು.

ಶಿಕ್ಷಕ ಅಜಯ ಉದೋಶಿ ರಚಿಸಿರುವ ‘ಭಾವದೀಪ್ತಿ’ ಕವನಸಂಕಲನವನ್ನು ಶ್ರೀಗಳು ಬಿಡುಗಡೆ ಮಾಡಿದರು. ಸದಲಗಾ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿಗೆ ‘ಸಾಹಿತ್ಯ ವಿಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮುಖಂಡರಾದ ಮಲಗೌಡ ನೆರ್ಲಿ, ಸದಾಶಿವ ದೇಸಿಂಗೆ, ಮಹೇಶ ಬೆಲ್ಲದ, ಡಾ.ಎಂ.ಬಿ. ಕುಂಬಾರ, ಶಿವು ಮರ‍್ಯಾಯಿ, ಬಾಳವ್ವ ಹಾಲಟ್ಟಿ, ಮಾರುತಿ ಮರ‍್ಯಾಯಿ, ಲಾಡಜಿ ಮುಲ್ತಾನಿ, ಸಾಹಿತಿಗಳಾದ ಐ.ಆರ್. ಮಠಪತಿ, ಎಸ್.ವೈ. ಹಂಜಿ, ಪಿ.ಜಿ. ಕೆಂಪನ್ನವರ, ಶ್ರೀಪಾದ ಕುಂಬಾರ, ಅಜಯ ಉದೋಶಿ, ಎಸ್.ಆರ್. ಡೊಂಗರೆ, ಎಂ.ಬಿ. ಆಲೂರೆ, ಗುಲಾಬ ಜಮಾದಾರ, ಡಾ.ಎಂ.ಡಿ. ಮಾನೆ ಇದ್ದರು.

ಲಾಲಸಾಬ ಪೆಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಪ್ರಕಾಶ ಮನಗೂಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT