ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡದ ಕಣ್ಮನಿ ಗಂಗಾಧರ ಮಡಿವಾಳೇಶ್ವರ’

ಕಸಾಪ‍ ಜಿಲ್ಲಾ ಘಟಕದಿಂದ ‘ಶತಮಾನ ಕಂಡ ಸಾಹಿತಿಗಳು’ ಕಾರ್ಯಕ್ರಮ
Published 20 ಜುಲೈ 2023, 14:20 IST
Last Updated 20 ಜುಲೈ 2023, 14:20 IST
ಅಕ್ಷರ ಗಾತ್ರ

ಬೆಳಗಾವಿ: ‘ತುರಮುರಿಯ ಗಂಗಾಧರ ಮಡಿವಾಳೇಶ್ವರ ಅವರು ತಮ್ಮ 50 ವರ್ಷದ ಜೀವಿತಾವಧಿಯಲ್ಲಿ ನಾಡು– ನುಡಿಗೆ ಸಲ್ಲಿಸಿದ ಸೇವೆ ಕನ್ನಡಿಗರು ಎಂದಿಗೂ ಮರೆಯಲಾರದಂಥದ್ದು’ ಎಂದು ಸಾಹಿತಿ ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನೆಹರೂ  ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಶತಮಾನ ಕಂಡ ಸಾಹಿತಿಗಳು’ ಕಾರ್ಯಕ್ರಮದಲ್ಲಿ ಮಡಿವಾಳೇಶ್ವರ ತುರಮುರಿ ಅವರ ಬದುಕು ಬರಹ ಕುರಿತು ಪ್ರಥಮ ತಿಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ನಾಡು– ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರ ‘ಶಬ್ದ ಮಂಜರಿ’ ಎನ್ನುವ ಶಬ್ದಕೋಶ ಕನ್ನಡದ ದೊಡ್ಡ ಆಸ್ತಿ’ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪತ್ರಕರ್ತ ಮುರುಗೇಶ ಶಿವಪೂಜಿ ಮಾತನಾಡಿ, ‘ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಜನರಿಗೆ ನೈತಿಕ ಶಿಕ್ಷಣ ನೀಡಬೇಕಿದೆ. ಕನ್ನಡ ಭಾಷೆ– ಸಂಸ್ಕೃತಿಯಲ್ಲಿನ ಮೌಲ್ಯದ ಬಗ್ಗೆ ತಿಳಿವಳಿಕೆ ಕೊಡುವಂಥ ಕಾರ್ಯವಾಗಬೇಕಿದೆ. ಆ ಕಡೆಗೆ ಕಸಾಪ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಗೌರದೇವಿ ತಾಳಿಕೋಟಿಮಠ ಮಾತನಾಡಿ, ‘ಗಂಗಾಧರ ಮಡಿವಾಳೇಶ್ವರ ಚುರುಮುರಿ ಅವರು ಓರ್ವ ಸಾಹಿತಿಯಾಗಿ,  ಸಂಶೋಧಕರಾಗಿ, ನಿಘಂಟು ರಚನಕಾರರಾಗಿ, ಹಳೆಗನ್ನಡ ಕಾವ್ಯಗಳ ಅಧ್ಯಯನಕಾರರಾಗಿ, ಛಂದಸ್ಸು ಶಾಸ್ತ್ರದ ಅಧ್ಯಯನಕಾರರಾಗಿ ಕನ್ನಡವನ್ನು ಶ್ರೀಮಂತಗೊಳಿಸಿದರು’ ಎಂದರು.

‘ಹಳೆಗನ್ನಡದ 16 ಸಾವಿರ ಕಾವ್ಯಗಳನ್ನು ಹೊಸಗನ್ನಡಕ್ಕೆ ಅನುವಾದಿಸಿ ಅಂದಿನ ಕಾಲದಲ್ಲಿ 600 ಪುಟಗಳ ಬೃಹತ್ ಗ್ರಂಥ ರಚನೆ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ಗಂಗಾಧರ ಮಡಿವಾಳೇಶ್ವರ ತುರುಮುರಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಓರ್ವ ಪತ್ರಕರ್ತರಾಗಿ ‘ಮಠ’ ಎಂಬ ಪತ್ರಿಕೆ ನಡೆಸಿದವರು. ಅದು ಇಂದಿಗೂ ‘ಜೀವನ ಶಿಕ್ಷಣ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ. ಮರಾಠಿ ಭಾಷೆ ಪ್ರಾಬಲ್ಯವಿದ್ದು, ಇಂಗ್ಲಿಷ್‌ ಆಡಳಿತ ಭಾಷೆ ಆಗಿದ್ದ ಕಾಲದಲ್ಲೇ ಅವರು ಕನ್ನಡ ಶಾಲೆ ಪ್ರಾರಂಭ ಮಾಡಿದರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಪ್ರಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ಮಾಜಿ ಅಧ್ಯಕ್ಷ ಯ.ರು. ಪಾಟೀಲ, ಜಯಶೀಲಾ ಬ್ಯಾಕೋಡ, ಶ್ರೀರಂಗ ಜೋಶಿ, ಕಸಾಪ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಅಥಣಿಯ ಮಲ್ಲಿಕಾರ್ಜುನ ಶೆಟ್ಟಿ, ಬೆಳಗಾವಿಯ ಸುರೇಶ್ ಹಂಜಿ, ಹುಕ್ಕೇರಿಯ ಪ್ರಕಾಶ ಅವಲಕ್ಕಿ ಮತ್ತು ದಳವಾಯಿ ಇದ್ದರು.

ವೀರಭದ್ರ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಸೋಮಶೇಖರ ಹಲಸಿಗಿ ಅತಿಥಿಗಳ ಪರಿಚಯ ಮಾಡಿದರು. ಸುನಿಲ್ ಹಲವಾಯಿ ಸ್ವಾಗತಿಸಿದರು. ಪ್ರತಿಭಾ ಕಳ್ಳಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT