ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ ಕ್ಷೇತ್ರ| ಪಕ್ಷಗಳ ಸಾಂಪ್ರದಾಯಿಕ ಮತಗಳೇ ನಿರ್ಣಾಯಕ

ಕಾಂಗ್ರೆಸ್‌ನಿಂದ ಅಶೋಕ ಪಟ್ಟಣ ಕಣಕ್ಕೆ, ಬಿಜೆಪಿಯಲ್ಲಿ ಇನ್ನೂ ಹಗ್ಗಜಗ್ಗಾಟ
Last Updated 27 ಮಾರ್ಚ್ 2023, 6:16 IST
ಅಕ್ಷರ ಗಾತ್ರ

ರಾಮದುರ್ಗ: ರಾಮದುರ್ಗ ವಿಧಾನ ಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಕೂಡ ಸಾಂಪ್ರದಾಯಿಕ ಮತಗಳನ್ನೇ ಅವಲಂಬಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನೇರ ಪೈಪೋಟಿ ಇದ್ದು, ಹಿರಿಯ ತಲೆಗಳ ಮಧ್ಯೆ ಮತ್ತೆ ಸೆಣಸಾಟ ನಡೆಯುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಿಂದ ಅಶೋಕ ಪಟ್ಟಣಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಆದರೆ, ಬಿಜೆಪಿಯಲ್ಲಿ ಇನ್ನೂ ಹಗ್ಗಜಗ್ಗಾಟ ನಡೆದಿದೆ. ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೇ ಟಿಕೆಟ್‌ ಕೊಡಬೇಕು ಎಂಬ ವಾದವನ್ನೂ ಬಿಜೆಪಿಯ ಕೆಲವು ಮುಖಂಡರು ಮಂಡಿಸಿದ್ದಾರೆ.

ಅಶೋಕ ಪಟ್ಟಣ ಅವರು ರಾಜಕೀಯ ಕುಟುಂಬದಿಂದ ಬಂದಿದ್ದು, ಸಿದ್ದರಾಮಯ್ಯ ಆಪ್ತ ಕೂಡ. ಹಾಗಾಗಿ, ಅವರಿಗೆ ಟಿಕೆಟ್‌ ಸಿಗುವುದು ನಿಚ್ಛಳವಾಗಿತ್ತು. ಆದರೆ, ಮಹಾದೇವಪ್ಪ ಯಾದವಾಡ ಅವರು ಈ ರೀತಿ ಬಿಜೆಪಿಯಲ್ಲಿ ಯಾರ ಆಪ್ತ ವಲಯದಲ್ಲೂ ಗುರು
ತಿಸಿಕೊಳ್ಳದೇ, ಸ್ವಂತ ಯತ್ನ ನಡೆಸಿದ್ದಾರೆ.

ಮನೆಮನೆಗೆ ಗಂಗೆ, ಹಂಪಿಹೊಳಿ ಬ್ರಿಜ್‌ ನಿರ್ಮಾಣ, ಮಲಪ್ರಭಾ ನದಿಯಿಂದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಮುಂತಾದವುಗಳನ್ನು ಮುಂದಿಟ್ಟುಕೊಂಡು ಮಹಾದೇವಪ್ಪ ಪ್ರಚಾರ ನಡೆಸಿದ್ದಾರೆ. ಆದರೆ, ಆಡಳಿತ ವಿರೋಧಿ ಅಲೆ ಅವರನ್ನು ಕಾಡುವ ಸಾಧ್ಯತೆ ಇದೆ ಎನ್ನುವುದು ಜನರ ಅನಿಸಿಕೆ.

ಮಹಾದೇವಪ್ಪ ಅವರ ಕಿರಿಯ ಸಹೋದರ ಮಲ್ಲಪ್ಪ ಯಾದವಾಡ ಕೂಡ ಈ ಬರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ. ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್‌ ಕೂಡ ಆಗಿದ್ದು, ಅವರಿಗೆ ಇರುವ ‘ಪ್ಲಸ್‌ ಪಾಯಿಂಟ್‌’.

ಹಾಗೆಂದು, ಅಣ್ಣ– ತಮ್ಮನ ಮಧ್ಯೆ ವಿವಾದವೇನೂ ಇಲ್ಲ. ಬಂಡಾಯದ ಮಾತುಗಳೂ ಕೇಳಿಬಂದಿಲ್ಲ. ಮಹಾದೇವಪ್ಪ ಅವರಿಗೆ 69 ವರ್ಷ ವಯಸ್ಸಾದ ಕಾರಣ, ಹೊಸ ಮುಖಕ್ಕೆ ಟಿಕೆಟ್‌ ನೀಡುವು
ದಾದರೆ ತಮಗೇ ಬೇಕು ಎನ್ನುವುದು ಮಲ್ಲಪ್ಪ ಅವರ ವಾದ. ಈ ಹಿಂದೆ ಅಣ್ಣನ ಗೆಲುವಿನಲ್ಲೂ ಮಲ್ಲಪ್ಪ ಶ್ರಮ ದೊಡ್ಡದು ಎನ್ನುವುದು ಗಮನಾರ್ಹ.

ವಕೀಲ ‍ಪಿ.ಎಫ್‌.ಪಾಟೀಲ ಕೂಡ ಬಿಜೆಪಿಯ ಪ್ರಬಲ ಆಕಾಂಕ್ಷಿ ಆಗಿದ್ದಾರೆ. 2018ರಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಅವರು ಈಗ ಬಿಜೆಪಿ ಸೇರಿದ್ದಾರೆ.

‘ಪಂಚಮಸಾಲಿ ಸಮುದಾಯದವರನ್ನೇ ಆಯ್ಕೆ ಮಾಡಬೇಕು’ ಎಂದು ಸಮಾಜ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಪಿ.ಎಫ್‌. ಪಾಟೀಲ ಯತ್ನ ಗಂಭೀರವಾಗಿದೆ’ ಎನ್ನುವುದು ಮತದಾರರ ಮಾಹಿತಿ.

ಪ್ರಾಬಲ್ಯ ಮೆರೆದ ಪಟ್ಟಣ ಕುಟುಂಬ: ಅಶೋಕ ಪಟ್ಟಣ ಕೂಡ ಎರಡು ಬಾರಿ ಶಾಸಕರಾದವರು. ಅವರದು ರಾಜಕೀಯ ಕುಟುಂಬ. ತಂದೆ ಮಹಾದೇವಪ್ಪ ಪಟ್ಟಣ ಸ್ವಾತಂತ್ರ್ಯ ಯೋಧರಾಗಿದ್ದರು. 1957ರಲ್ಲಿ ಜನಸಂಘದಿಂದ ಒಂದು ಬಾರಿಗೆ ಶಾಸಕರಾಗಿದ್ದರು. 1967ರಲ್ಲಿ ತಾಯಿ ಶಾರದವ್ವ ಕೂಡ ಒಂದು ಅವಧಿಗೆ ಕಾಂಗ್ರೆಸ್‌ನಿಂದ ಶಾಸಕರಾದರು. ಅವರ ಬಳಿಕ ಅಶೋಕ ಪಟ್ಟಣ; ಕುಟುಂಬದ ರಾಜಕೀಯ ಮುಂದುವರಿಸಿದ್ದಾರೆ.

ಫಲಿತಾಂಶ ಬದಲಾಯಿಸಿತೇ ಲವ್‌ ಜಿಹಾದ್‌?: 2018ರಲ್ಲಿ ರಾಮದುರ್ಗದಲ್ಲಿ ನಡೆದ ಅಂತರ್‌ ಧರ್ಮೀಯ ಮದುವೆಯೊಂದು ‘ಲವ್‌ ಜಿಹಾದ್‌’ ಸ್ವರೂಪ ಪಡೆಯಿತು. ಆ ಸಂದರ್ಭದಲ್ಲಿ ಬಿಜೆಪಿಯ ಹೋರಾಟ ಹಾಗೂ ಹಿಂದೂ ಪರವಾದ ಮತಗಳು ಒಂದುಗೂಡಿದ್ದರಿಂದ ಅಶೋಕ ಪಟ್ಟಣ ಸೋಲುಂಡರು.

ಮಲಪ್ರಭಾ ನದಿ ಪಾತ್ರದ ಅಗಲೀಕರಣ, ಬೃಹತ್‌ ಶಿವನ ಮೂರ್ತಿ ಪ್ರತಿಷ್ಠಾಪನೆ, ಉತ್ತಮ ರಸ್ತೆಗಳ ನಿರ್ಮಾಣ... ಹೀಗೆ ತಮ್ಮ ಹಲವು ಅಭಿವೃದ್ಧಿ ಯೋಜನೆಗಳ ಆಧಾರದ ಮೇಲೆಯೇ ಅಶೋಕ ಕಣಕ್ಕಿಳಿದಿದ್ದಾರೆ.

ಬೆಂಗಳೂರು ಮೂಲದ ಗ್ರಾನೈಟ್‌ ಉದ್ಯಮಿ ಚಿಕ್ಕರೇವಣ್ಣ ಕೂಡ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿದ್ದರು. ಕೋವಿಡ್‌ ಕಾಲದಿಂದಲೂ ಈ ಭಾಗದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬಂಡಾಯ ಅಭ್ಯರ್ಥಿಯಾಗಿ ನಿಂತರೆ ಅಶೋಕ ಪಟ್ಟಣ ಅವರಿಗೆ ತೊಡಕಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಅರ್ಜುನ ಗುಡ್ಡದ, ರಾಜೇಂದ್ರ ಪಾಟೀಲ, ಸಿ.ಬಿ. ಪಾಟೀಲ, ಕೃಷ್ಣ ಮುಂಬರಡ್ಡಿ ಕೂಡ ಆಕಾಂಕ್ಷಿಗಳ ಸಾಲಿನಲ್ಲಿದ್ದರು. ಮುಂದೆ ಅವರ ನಡೆ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ.

*

9 ಬಾರಿ ಗೆದ್ದ ಕಾಂಗ್ರೆಸ್‌

ರಾಮದುರ್ಗ ಕ್ಷೇತ್ರದಲ್ಲಿ 14 ಬಾರಿ ಚುನಾವಣೆ ನಡೆಸಿದ್ದು, ಕಾಂಗ್ರೆಸ್‌ 9 ಸಾರಿ ಗೆಲುವು ಸಾಧಿಸಿದೆ. ಜನತಾ ಪಕ್ಷ, ಜನತಾ ದಳ ಹಾಗೂ ಪಕ್ಷೇತರ ಅಭ್ಯರ್ಥಿ ತಲಾ ಒಂದೊಂದು ಬಾರಿ ಗೆದಿದ್ದಾರೆ. ಬಿಜೆಪಿ ಎರಡು ಬಾರಿ ಗೆದ್ದಿದೆ.

ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂದಾಜು ಶೇ 55ಕ್ಕೂ ಹೆಚ್ಚು ಬಲವಿದೆ. ಎರಡನೇ ಸ್ಥಾನದಲ್ಲಿ ಪರಿಶಿಷ್ಟರು, ಮೂರನೇ ಸ್ಥಾನದಲ್ಲಿ ಕುರುಬ ಸಮಾಜದ ಮತಗಳಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೇ ಸೇರಿದವರು. ಹೀಗಾಗಿ, ಮತಗಳು ಹಂಚಿ ಹೋಗುತ್ತವೆ. ಹೀಗಾಗಿ, ಪರಿಶಿಷ್ಟ ಹಾಗೂ ಕುರುಬ ಸಮಾಜದ ಮತಗಳೇ ನಿರ್ಣಾಯಕ ಆಗಲಿವೆ ಎನ್ನುವುದು ರಾಜಕೀಯ ಲೆಕ್ಕಾಚಾರ.
*
ಈವರೆಗೆ ಶಾಸಕರಾದವರು
ವರ್ಷ;ಶಾಸಕ;ಪಕ್ಷ
1957;ಎಂ.ಎಸ್‌.ಪಟ್ಟಣ;ಪಕ್ಷೇತರ
1962;ಆರ್‌.ಎಸ್‌.ಪಾಟೀಲ;ಕಾಂಗ್ರೆಸ್‌
1967;ಶಾರದವ್ವ ಪಟ್ಟಣ;ಕಾಂಗ್ರೆಸ್‌
1972;ಆರ್‌.ಎಸ್‌.ಪಾಟೀಲ;ಕಾಂಗ್ರೆಸ್‌
1978;ಆರ್‌.ಎಸ್‌.ಪಾಟೀಲ;ಕಾಂಗ್ರೆಸ್‌
1983;ಎಫ್.ಎ.ಕೊಪ್ಪದ;ಕಾಂಗ್ರೆಸ್‌
1985;ಬಿ.ಬಿ.ಹಿರೇರಡ್ಡಿ;ಜನತಾ ಪಕ್ಷ
1989;ಆರ್‌.ಟಿ.ಪಾಟೀಲ;ಕಾಂಗ್ರೆಸ್‌
1994;ಬಿ.ಬಿ.ಹಿರೇರಡ್ಡಿ;ಜನತಾ ದಳ
1999;ಎನ್‌.ವಿ.ಪಾಟೀಲ;ಕಾಂಗ್ರೆಸ್‌
2004;ಮಹಾದೇವಪ್ಪ ಯಾದವಾಡ;ಬಿಜೆಪಿ
2008;ಅಶೋಕ ‍ಪಟ್ಟಣ;ಕಾಂಗ್ರೆಸ್‌
2013;ಅಶೋಕ ‍ಪಟ್ಟಣ;ಕಾಂಗ್ರೆಸ್‌
2018;ಮಹಾದೇವಪ್ಪ ಯಾದವಾಡ;ಬಿಜೆಪಿ

*******
2018ರ ಫಲಿತಾಂಶ
ಅಭ್ಯರ್ಥಿ;ಪಕ್ಷ;ಪಡೆದ ಮತ
ಮಹಾದೇವಪ್ಪ ಯಾದವಾಡ;ಬಿಜೆಪಿ;68,349
ಅಶೋಕ ಪಟ್ಟಣ;ಕಾಂಗ್ರೆಸ್‌;65,474
ರಮೇಶ ಪಂಚಕಟ್ಟಿಮಠ;ಪಕ್ಷೇತರ;8,427

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT